ಚಂಡೀಗಢ: ಹಾಸ್ಟೆಲ್ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋಗಳು ಸೋರಿಕೆಯಾಗಿದೆ ಎಂಬ ಹೇಳಿಕೆಯನ್ನು ಚಂಡೀಗಢ ವಿಶ್ವವಿದ್ಯಾನಿಲಯವು ಭಾನುವಾರ ನಿರಾಕರಿಸಿದ್ದು, ಆನ್‌ಲೈನ್‌ನಲ್ಲಿ ಪ್ರಸಾರವಾದ ವೈಯಕ್ತಿಕ ವೀಡಿಯೊವನ್ನು ಒಬ್ಬ ವಿದ್ಯಾರ್ಥಿನಿ ಮಾತ್ರ ಹಂಚಿಕೊಂಡಿದ್ದಾಳೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆಕೆಯನ್ನು ಈಗಾಗಲೇ ಬಂಧಿಸಿದೆ ಎಂದು ಹೇಳಿದೆ.
ಇದನ್ನೂ ಓದಿ: ಜಾರ್ಖಂಡ್ ಮಾವೋವಾದಿ ನಾಯಕ ಮಹಾರಾಷ್ಟ್ರದಲ್ಲಿ ಬಂಧನ
ಚಂಡೀಗಢ ವಿವಿಯ ಉಪ ಕುಲಪತಿ ಡಾ.ಆರ್.ಎಸ್.ಬಾವಾ ಅವರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, “ವಿದ್ಯಾರ್ಥಿಗಳ 60 ಆಕ್ಷೇಪಾರ್ಹ ಎಂಎಂಎಸ್ ಪತ್ತೆಯಾಗಿದೆ ಎಂದು ಮಾಧ್ಯಮಗಳ ಮೂಲಕ ಹರಡುತ್ತಿರುವ ವದಂತಿಯು ಸಂಪೂರ್ಣವಾಗಿ ಸುಳ್ಳು ಮತ್ತು ಆಧಾರರಹಿತವಾಗಿದೆ.ಯಾವುದೇ ವಿಡಿಯೋಗಳು ಕಂಡುಬಂದಿಲ್ಲ. ಒಬ್ಬ ಹುಡುಗಿ ಚಿತ್ರೀಕರಿಸಿದ ವೈಯಕ್ತಿಕ ವಿಡಿಯೋವನ್ನು ತನ್ನ ಗೆಳೆಯನಿಗೆ ಹಂಚಿಕೊಳ್ಳಲಾಗಿದೆ” ಎಂದು ಹೇಳಿದ್ದಾರೆ.
“ಇದುವರೆಗೆ ನಮ್ಮ ತನಿಖೆಯಲ್ಲಿ, ಆರೋಪಿಯ ಒಂದು ವಿಡಿಯೋ ಮಾತ್ರ ಇದೆ ಎಂದು ನಾವು ಕಂಡುಕೊಂಡಿದ್ದೇವೆ. ಅವಳು ಬೇರೆಯವರ ಯಾವುದೇ ವಿಡಿಯೋಗಳನ್ನು ರೆಕಾರ್ಡ್ ಮಾಡಿಲ್ಲ” ಎಂದು ಮೊಹಾಲಿ ಪೊಲೀಸ್ ಮುಖ್ಯಸ್ಥ ವಿವೇಕ್ ಸೋನಿ ಹೇಳಿದ್ದಾರೆ.
ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪಂಜಾಬ್ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮನೀಶಾ ಗುಲಾಟಿ ಹೇಳಿದ್ದಾರೆ. ಇದು ಗಂಭೀರ ವಿಷಯ, ತನಿಖೆ ನಡೆಯುತ್ತಿದೆ. ಆರೋಪಿಗಳನ್ನು ಬಿಡುವುದಿಲ್ಲ ಎಂದು ಎಲ್ಲಾ ವಿದ್ಯಾರ್ಥಿಗಳ ಪೋಷಕರಿಗೆ ಭರವಸೆ ನೀಡಲು ನಾನು ಇಲ್ಲಿದ್ದೇನೆ” ಎಂದು ಹೇಳಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಭಾನುವಾರ ಘಟನೆಯ ಕುರಿತು ತನಿಖೆಗೆ ಆದೇಶಿಸಿದ್ದಾರೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ”ಅಹಿತಕರ ಘಟನೆಯ ಬಗ್ಗೆ ಕೇಳಲು ದುಃಖವಾಗಿದೆ… ನಮ್ಮ ಹೆಣ್ಣುಮಕ್ಕಳು ನಮ್ಮ ಹೆಮ್ಮೆ… ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ…ಯಾರೇ ತಪ್ಪಿತಸ್ಥರಾದರೂ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಮಾನ್ ಟ್ವೀಟ್ ಮಾಡಿದ್ದಾರೆ.
“ನಾನು ಆಡಳಿತದೊಂದಿಗೆ ಸಂಪರ್ಕದಲ್ಲಿದ್ದೇನೆ. ವದಂತಿಗಳನ್ನು ನಂಬಬೇಡಿ” ಎಂದು ಜನರಿಗೆ ಮನವಿ ಮಾಡಿದ್ದಾರೆ.
ಘಟನೆ ಬಯಲಿಗೆ ಬರುತ್ತಿದ್ದಂತೆ ಶನಿವಾರ ತಡರಾತ್ರಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಕ್ಯಾಂಪಸ್ ಗೆ ತೆರಳಿ ಪ್ರತಿಭಟನೆ ನಡೆಸಿದ್ದರು.
ಎಂಟು ಮಂದಿ ಹಾಸ್ಟೆಲ್ ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದು, ಇದು ಕೇವಲ ವದಂತಿ ಎಂದು ಪೊಲೀಸರು ಹೇಳಿದ್ದಾರೆ.