ಚಂಡೀಗಢ : ಇಂಡಿಯಾ ಮೈತ್ರಿಕೂಟಕ್ಕೆ ಶಾಕ್ ಮೇಲೆ ಶಾಕ್ ಎಂಬಂತೆ ಚಂಡೀಗಢ ಮೇಯರ್ ಪಟ್ಟವನ್ನು ಬಿಜೆಪಿ ಅಲಂಕರಿಸಿದೆ. ಬಿಜೆಪಿಯ ಕೌನ್ಸಿಲರ್ ಮನೋಜ್ ಸೋಂಕರ್ ಚಂಡೀಗಢ ಮೇಯರ್ ಆಗಿ ಮಂಗಳವಾರ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಆಮ್ ಆದ್ಮಿ ಪಕ್ಷದ ಕುಲದೀಪ್ ಕುಮಾರ್ ಅವರನ್ನು ಸೋಂಕರ್ ಸೋಲಿಸುವಲ್ಲಿ ಯಶಸ್ವಿಯಾದರು. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪಾಳಯ ಬದಾಲಾಯಿಸಿದ ನಂತರ ಈ ಬೆಳವಣಿಗೆ ನಡೆದಿದೆ.
35 ಸದಸ್ಯ ಬಲದ ಮುನ್ಸಿಪಲ್ ಕಾರ್ಪೊರೇಷನ್ ಹೌಸ್‌ನಲ್ಲಿ, ಎಎಪಿ ಮತ್ತು ಕಾಂಗ್ರೆಸ್ ಒಟ್ಟಾಗಿ 20 ಮತಗಳನ್ನು ಹೊಂದಿತ್ತು. ಬಿಜೆಪಿ ಸಂಸದೆ ಕಿರಣ್ ಖೇರ್ ಸಹಿತ 16 ಸದಸ್ಯರ ಮತಗಳನ್ನು ಹೊಂದಿತ್ತು. ಎಂಟು ಮತಗಳು ಅಸಿಂಧುವಾಗಿವೆ.
ಚಂಡೀಗಢ ಮುನ್ಸಿಪಲ್ ಕಾರ್ಪೊರೇಷನ್ (MC), ಸೆಕ್ಟರ್ 17 ರ ಅಸೆಂಬ್ಲಿ ಹಾಲ್‌ನಲ್ಲಿ ಬೆಳಗ್ಗೆ 11 ಗಂಟೆಗೆ ಮತದಾನ ಪ್ರಾರಂಭವಾಯಿತು. ಕಾನೂನು ಸುವ್ಯವಸ್ಥೆ ಕಾಪಾಡಲು ಅರೆಸೇನಾ ಪಡೆಗಳ ಜತೆಗೆ ಸುಮಾರು 700 ಪೊಲೀಸ್ ಸಿಬಂದಿಯನ್ನು ನಿಯೋಜಿಸಲಾಗಿತ್ತು.
ಎಂಟು ಮತಗಳು ಅಸಿಂಧು ಎಂದು ಘೋಷಿಸಿದ್ದರಿಂದ, ಮತ ಎಣಿಕೆ ವೇಳೆ ಚಲಾವಣೆಯಾದ ಮತಗಳ ಮೇಲೆ ಟಿಕ್ ಮಾರ್ಕ್ ಹಾಕಿದ್ದಾರೆ ಎಂದು ಪ್ರತಿಪಕ್ಷ ನಾಯಕ ಅನಿಲ್ ಮಸಿಹ್ ಅವರು ಆರೋಪಿಸಿದ್ದು, ಪ್ರತಿಭಟನೆಯನ್ನೂ ನಡೆಸಲಾಯಿತು.
39 ವರ್ಷದ ಮನೋಜ್ ಸೋಂಕರ್ ಅವರು 7ನೇ ತರಗತಿವರೆಗೆ ಓದಿದ್ದು, ಮದ್ಯದ ವ್ಯಾಪಾರ ನಡೆಸುತ್ತಿದ್ದಾರೆ.