ಸಕಲೇಶಪುರ: ಹುಟ್ಟಿ ಬೆಳೆದ ಊರಿನಲ್ಲಿ ಅತಿಥಿಯಾಗಿ ಬಂದು ಹಾಡುವುದಷ್ಟು ಸಂತೋಷ ಬೇರೆ ಯಾವುದು ಇಲ್ಲ ಎಂದು ಹೆಸರಾಂತ ಹಾಡುಗಾರ ಚಂದನ್‌ಶೆಟ್ಟಿ ಹೇಳಿದರು. ಪಟ್ಟಣದಲ್ಲಿ ಸಕಲೇಶ್ವರಸ್ವಾಮಿ ರಥೋತ್ಸವದ ಅಂಗವಾಗಿ ನಡೆಯುತ್ತಿರುವ ಜಾತ್ರಾ ಮಹೋತ್ಸವದಲ್ಲಿ ಗುರುವಾರ ರಾತ್ರಿ ಕಾರ್ಯಕ್ರಮ ನೀಡಿದ ಸಂದರ್ಭದಲ್ಲಿ ಮಾತನಾಡಿ, ರಾಜ್ಯದ ಹಲವೆಡೆ ಕಾರ್ಯಕ್ರಮ ನೀಡಿದ್ದೇನೆ.ಆದರೆ,ಇಲ್ಲಿಹಾಡುವುದಕ್ಕೆ ಅತಿ ಸಂತೋಷ ವಾಗುತ್ತದೆ ಎಂದರು.
ವ್ಯಾಪಾರ ಮಾಡುತ್ತಿದ್ದೆ: ನಾನು ಸಕಲೇಶಪುರದಲ್ಲಿ ಇದ್ದಾಗ ಗಾಯಕ ಆಗುತ್ತೇನೆ ಎಂದೇ ಕನಸು ಕಂಡಿರಲಿಲ್ಲ. ಆದರೆ, ದೇವರ ದಯೆಯಿಂದ ಹಾಡುಗಾರನಾಗಿದ್ದೇನೆ. ನನ್ನ ತಂದೆ ಕೇಶವ ಸ್ಟೋರ್ ಎಂಬ ಸ್ಟೇಷನರಿ ಅಂಗಡಿ ನಡೆಸುತ್ತಿದ್ದರು. ನಾನು ಸಹ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದೆ. ಇಲ್ಲಿ ನನ್ನ ಗಾಯನಕೇಳಲು ಬಂದಿರುವ ಹಲವರ ಜೊತೆ ನಾನು ವ್ಯಾಪಾರ ನಡೆಸಿರಬಹುದು.
ಇಲ್ಲಿ ನನ್ನ ಹಾಡು ಕೇಳಲು ನನ್ನ ತಂದೆಯ ಅನೇಕ ಸ್ನೇಹಿತರು, ರೋಟರಿ ಶಾಲೆಯ ನನ್ನ ಸಹಪಾಠಿಗಳು, ಅನೇಕ ಬಂಧು ಮಿತ್ರರು ಬಂದಿದ್ದಾರೆ. ನನ್ನ ಆಪ್ತರಾದ ಪುರಸಭಾ ಸದಸ್ಯ ಪ್ರಜ್ವಲ್‌ರವರ ಮನವಿ ಮೇರೆಗೆ ನಾನು ಇಲ್ಲಿ ಹಾಡು ಹೇಳಲು ಬಂದಿದ್ದೇನೆ. ನಾನು ಸಂಪೂರ್ಣ ತಂಡದೊಂದಿಗೆ ಇಲ್ಲಿಗೆ ಬಂದಿಲ್ಲ ಆದ್ದರಿಂದ ಕೆಲ ಸಮಯ ಮಾತ್ರ ಇಲ್ಲಿ ಕಾರ್ಯಕ್ರಮ ಕೊಡುತ್ತೇನೆ ಎಂದರು.
ಊರು ಬಿಟ್ಟಾಗ ದುಃಖವಾಗಿತ್ತು: ಮುಂದಿನ ದಿನಗಳಲ್ಲಿ ಸಂಪೂರ್ಣ ನನ್ನ ತಂಡದೊಂದಿಗೆ ಇಲ್ಲಿಗೆ ಆಗಮಿಸಿ ಮ್ಯೂಸಿಕಲ್ ನೈಟ್ ನೀಡುತ್ತೇನೆ. ಹುಟ್ಟಿದ ಊರನ್ನು ಬಿಟ್ಟು ಹೋಗುವಾಗ ನನಗೆ ಅಪಾರ ದು:ಖವಾಗಿತ್ತು. ಆದರೆ ಇಂದು ಚಂದನ್ ಶೆಟ್ಟಿ ಸಕಲೇಶಪುರದವರು ಎಂದು ಇತರ ಕಡೆ ಹೇಳುವಾಗ ಸಂತೋಷವಾಗುತ್ತದೆ. ಇದೀಗ ನಿಮ್ಮೆಲ್ಲರ ಮುಂದೆ ಹಾಡುವುದಷ್ಟು ದೊಡ್ಡ ಭಾಗ್ಯ ಇನ್ನೊಂದಿಲ್ಲ ಎಂದರು.
ಸುಮಾರು45 ನಿಮಿಷಗಳಕಾಲಹಾಡಿದ ಚಂದನ್ ಶೆಟ್ಟಿ ಪ್ರೇಕ್ಷಕರನ್ನು ರಂಜಿಸಿದರು. ಅಲ್ಲದೆ, ಈ ಸಂದರ್ಭದಲ್ಲಿ ಯುವಕರು ಅವರ ಗಾಯನಕ್ಕೆ ಕುಣಿದು ಕುಪ್ಪಳಿಸಿದರು. ನೀರಸವಾಗಿದ್ದ ಜಾತ್ರೆಗೆ ಚಂದನ್ ಶೆಟ್ಟಿರವರಿಂದ ಜೀವಕಳೆ ತುಂಬಿ ಬಂದಿತು.