Advertisement
ಪದವಿ ಕಾಲೇಜುಗಳ ಪ್ರವೇಶಾತಿ ಆರಂಭವಾಗಿದ್ದು, ಮೊದಲ ವರ್ಷದ ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯುತ್ತಿದ್ದಾರೆ. 2 ಮತ್ತು 3ನೇ ವರ್ಷದ ತರಗತಿಗಳು ಆರಂಭವಾಗಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನವಾಗುತ್ತಿದೆ. ಆದರೆ, ವಿಶ್ವ ವಿದ್ಯಾಲಯಗಳಲ್ಲಿ ಕುಲಪತಿಗಳಿಲ್ಲದೆ, ಪ್ರಭಾರ ಹುದ್ದೆಗಳಲ್ಲಿ ನಿರ್ವಹಣೆ ಮಾಡಲಾಗುತ್ತಿದೆ. ಇದು ಆಡಳಿತಾತ್ಮಕ ಮತ್ತು ಶೈಕ್ಷಣಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತಿದೆ.
Related Articles
Advertisement
ಕುಲಪತಿಗಳ ನೇಮಕ ಸಂಬಂಧ ರಾಜ್ಯ ಸರ್ಕಾರ ನೇಮಿಸಿದ್ದ ಶೋಧನಾ ಸಮಿತಿ ವರದಿ ನೀಡಿ ತಿಂಗಳು ಗಳೇ ಕಳೆದಿವೆ. ಆದರೂ ಕೂಡ ಸರ್ಕಾರ ಕುಲಪತಿಗಳ ನೇಮಕ ಮಾಡುವಲ್ಲಿ ವಿಳಂಬ ಮಾಡುತ್ತಿದೆ. ಬೆಂಗಳೂರು ವಿವಿ ವಿಶ್ರಾಂತ ಕುಲಪತಿ ಪ್ರೊ. ಕೆ.ಆರ್. ವೇಣುಗೋಪಾಲ್ ನೇತೃತ್ವದ ಶೋಧನಾ ಸಮಿತಿಯು ತುಮಕೂರು ವಿವಿ ಕುಲಪತಿ ನೇಮಕಾತಿಗೆ ಮೇ 30ರಂದು ವರದಿ ನೀಡಿದೆ. ದಾವಣಗೆರೆ ವಿವಿ ಕುಲಪತಿ ಗಳ ನೇಮಕಕ್ಕೆ ಅಕ್ಕಮಹಾದೇವಿ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಬಿ.ಕೆ. ತುಳಸಿ ಮಾಲಾ ನೇತೃತ್ವದ ಸಮಿತಿಯು ಮೇ 30ರಂದು ಸರ್ಕಾರಕ್ಕೆ ವರದಿ ನೀಡಿದೆ. ಅದೇ ರೀತಿ ಬೆಂಗಳೂರು ವಿವಿಗೆ ಕರ್ನಾಟಕ ರಾಜ್ಯ ಮುಕ್ತ ವಿವಿ (ಕೆಎಸ್‌ಒಯು) ಕುಲಪತಿ ಡಾ. ಎಸ್. ವಿದ್ಯಾಶಂಕರ್ ನೇತೃತ್ವದ ಸಮಿತಿಯು ಜೂ.23ರಂದು ವರದಿ ನೀಡಿದೆ.
ಪ್ರಮುಖ ಹೆಸರುಗಳು: ಬೆಂಗಳೂರು ವಿಶ್ವವಿದ್ಯಾಲಯಕ್ಕೆ ರಾಜೀವಗಾಂಧಿ ವಿವಿ ಪ್ರಭಾರ ಕುಲಪತಿಗಳಾಗಿ ಅಧಿಕಾರ ನಿರ್ವಹಿಸಿರುವ ದಂತ ವೈದ್ಯ ಡಾ. ಜಯಕರಶೆಟ್ಟಿ, ಕೆಎಸ್‌ಒಯು ಕುಲಸಚಿವ ಪ್ರೊ. ಆರ್. ರಾಜಣ್ಣ ಹಾಗೂ ಯುವಿಸಿಇ ಪ್ರಾಂಶುಪಾಲರಾದ ಪ್ರೊ. ರಮೇಶ್ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ. ಕುಲಪತಿ ಹುದ್ದೆ ಖಾಲಿ ಇರುವ ವಿವಿಗಳು: ಹಾವೇರಿಯ ಜಾನಪದ ವಿವಿ, ಶಿವಮೊಗ್ಗ, ಬೀದರ್, ಧಾರವಾಡ ಕೃಷಿ ವಿವಿಗಳಲ್ಲಿ ಕುಲಪತಿ ಹುದ್ದೆಗಳು ಖಾಲಿ ಇವೆ. ಬೆಂಗಳೂರು ಕೃಷಿ ವಿವಿ ಕುಲಪತಿ ಪ್ರೊ. ರಾಜೇಂದ್ರ ಪ್ರಸಾದ್ ಇದೇ ವರ್ಷದ ಸೆ.30ಕ್ಕೆ ಮತ್ತು ರಾಯಚೂರು ಕೃಷಿ ವಿವಿ ಕುಲಪತಿ ಡಾ. ಕೆ.ಎನ್. ಕಟ್ಟಿಮನಿ ಅವಧಿ ಅ.17ರಂದು ಪೂರ್ಣಗೊಳ್ಳಲಿದೆ.
ವಿಶ್ವವಿದ್ಯಾಲಯಗಳಲ್ಲಿ ಕುಲಪತಿಗಳು, ಕುಲಸಚಿವರು ಮತ್ತು ಪ್ರಾಧ್ಯಾಪಕರ ಹುದ್ದೆಗಳು ಭರ್ತಿಯಾಗಿದ್ದಾಗ ಮಾತ್ರ ಶೈಕ್ಷಣಿಕ ಚಟುವಟಿಕೆಗಳು ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗಲಿದೆ. ಸರ್ಕಾರ ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರಬಾರದು. -ಪ್ರೊ.ಎಂ.ಎಸ್. ತಿಮ್ಮಪ್ಪ, ಬೆಂ.ವಿವಿ ವಿಶ್ರಾಂತ ಕುಲಪತಿ
-ಎನ್.ಎಲ್.ಶಿವಮಾದು