Advertisement

ಮಹಾಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸಿದ ಚಾಮುಂಡಿ

10:07 PM Jul 19, 2019 | Team Udayavani |

ಮೈಸೂರು: ಮೂರನೇ ಆಷಾಢ ಶುಕ್ರವಾರದಂದು ಸಾವಿರಾರು ಭಕ್ತರು ಬೆಟ್ಟಕ್ಕೆ ಆಗಮಿಸಿ, ದೇವಿಯ ದರ್ಶನ ಪಡೆದರು. ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್‌ ಅವರ ನೇತೃತ್ವದಲ್ಲಿ ಅರ್ಚಕರು ತಾಯಿ ಚಾಮುಂಡೇಶ್ವರಿಗೆ ಮುಂಜಾನೆ 3.30ಕ್ಕೆ ಪಂಚಾಮೃತ ಅಭಿಷೇಕ ಹಾಗೂ ಏಕ ರುದ್ರಾಕ್ಷೆ ಪೂಜೆ ಸೇರಿದಂತೆ ನಾನಾ ಪೂಜ ಕೈಂಕರ್ಯ ನೆರವೇರಿಸಿದರು.

Advertisement

ಬೆಳಗ್ಗೆ 5.30ರಿಂದ ರಾತ್ರಿ 10ವರೆಗೂ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಈ ಮಧ್ಯೆ ಬೆಳಗ್ಗೆ 9.30 ಕ್ಕೆ ದೇವಿಗೆ ಮಹಾ ಮಂಗಳಾರತಿ ನೆರವೇರಿಸಲಾಯಿತು.

ಮಹಾಲಕ್ಷ್ಮೀ ಅಲಂಕಾರ: ಮೂರನೇ ಆಷಾಢ ಶುಕ್ರವಾರದಂದು ನಾಡಿನ ಅದಿದೇವತೆ ಚಾಮುಂಡೇಶ್ವರಿ ದೇವಿಗೆ ವಿಶೇಷ ಮಹಾಲಕ್ಷ್ಮೀ ಅಲಂಕಾರ ಮಾಡಲಾಗಿತ್ತು. ಮುಂಜಾನೆ ನಸುಕಿನಲ್ಲಿಯೇ ನೆರೆದಿದ್ದ ಸಾವಿರಾರು ಭಕ್ತರು ಚಾಮುಂಡೇಶ್ವರಿಗೆ ಜಯಘೋಷಗಳನ್ನು ಕೂಗಿದರು. ಹರಕೆ ಹೊತ್ತ ಮಹಿಳೆಯರು ದೇವಸ್ಥಾನದ ಆವರಣದಲ್ಲಿ ಎಣ್ಣೆ ದೀಪಗಳನ್ನು ಹಚ್ಚಿ ತಮ್ಮ ಹರಕೆ ತೀರಿಸಿದರು.

ದೇಗುಲ ಒಳಾಂಗಣದಲ್ಲಿ ಸಚಿವ ಜಿ.ಟಿ.ದೇವೇಗೌಡ ಅವರು ಹೂವಿನ ಅಲಂಕಾರ ಮಾಡಿಸಿದ್ದರು. ರಾಜವಂಶಸ್ಥ ಯದುವೀರ್‌ ದಂಪತಿ ದೇವಿಗೆ ಮೊದಲ ಪೂಜೆ ನೆರವೇರಿಸಿದರು. ಬಳಿಕ ಸಚಿವ ಜಿ.ಟಿ. ದೇವೇಗೌಡ, ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ದೇವಿ ದರ್ಶನ ಪಡೆದು, ಪೂಜೆ ಸಲ್ಲಿಸಿದರು.

ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ, ಜಿ.ಟಿ. ದೇವೇಗೌಡ, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಇನ್ನಿತರರ ಗಣ್ಯರು ವಿಶೇಷ ಪೂಜೆ ಸಲ್ಲಿಸಿ ಚಾಮುಂಡೇಶ್ವರಿ ದರ್ಶನ ಪಡೆದರು.

Advertisement

ದಾಸೋಹ ಭವನದಲ್ಲಿ ಪ್ರಸಾದ ಸಂತರ್ಪಣೆ: ಬೆಂಗಳೂರಿನ ಉದ್ಯಮಿ ವೇಣುಗೋಪಾಲ್‌ ಅವರು ದಾಸೋಹ ಭವನದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಿದ್ದರು. ಇವರು ಕಳೆದ 28 ವರ್ಷಗಳಿಂದ ಮೂರನೇ ಆಷಾಢ ಶುಕ್ರವಾರದಂದು ಪ್ರಸಾದ ಸಂತರ್ಪಣೆ ಮಾಡುತ್ತಾ ಬಂದಿದ್ದಾರೆ.

ಅನ್ನಸಂತರ್ಪಣೆ ರಾತ್ರಿ 7.30 ರವರೆಗೂ ನಡೆಯಿತು. ಉಪ್ಪಿಟ್ಟು, ಮೊಸರನ್ನ, ಪಲಾವ್‌, ಬಿಸಿಬೇಳೆ ಬಾತ್‌, ಕೇಸರಿ ಬಾತನ್ನು ಭಕ್ತರಿಗೆ ನೀಡಲಾಯಿತು. ಜತೆಗೆ ಬೆಟ್ಟದ ಬಸ್‌ ನಿಲ್ದಾಣದ ಬಳಿ ಹರಕೆ ಹೊತ್ತಿದ್ದ ಸಾರ್ವಜನಿಕರು ಆಟೋ ಮತ್ತು ಕಾರುಗಳ ಮೂಲಕ ಭಕ್ತರಿಗೆ ಪ್ರಸಾದ ವಿತರಿಸಿದರು.

ಜುಲೈ 24 ರಂದು ಚಾಮುಂಡೇಶ್ವರಿ ವರ್ಧಂತಿ ಪ್ರಯುಕ್ತ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಭಕ್ತರಿಗೆ ಬೆಳಗ್ಗೆ 8ರಿಂದ ರಾತ್ರಿ 10 ಗಂಟೆಯವರೆಗೆ ದೇವಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಪ್ರಧಾನ ಅರ್ಚಕ ಡಾ. ಶಶಿಶೇಖರ್‌ ದೀಕ್ಷಿತ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next