ಚನ್ನರಾಯಪಟ್ಟಣ: ತಾಲೂಕಿನ ಶ್ರೀನಿವಾಸಪುರ ಬಳಿ ಇರುವ ಚಾಮುಂಡೇಶ್ವರಿ ಶುಗರ್ನ ಚಿಮಣಿ ಸ್ಫೋಟಗೊಂಡ ಘಟನೆ ಭಾನುವಾರ ಬೆಳಗ್ಗೆ 10.30ಕ್ಕೆ ಸಂಭವಿಸಿದೆ. ಹೇಮಾವತಿ ಸಹಕಾರ ಸರ್ಕಾನೆಯನ್ನು ಚಾಮುಂಡೇಶ್ವರಿ ಶುಗರ್ ಸಂಸ್ಥೆಯವರು ಗುತ್ತಿಗೆ ಪಡೆದು ಕಾರ್ಖಾನೆ ಉನ್ನತೀಕರರಿಸಿ ಶನಿವಾರ ಬೆಳಗ್ಗೆ ಬಾಯ್ಲರ್‌ಗೆ ಪ್ರಾಯೋಗಿಕವಾಗಿ ಅಗ್ನಿಸ್ಪರ್ಶ ಮಾಡುವ ಮೂಲಕ ಕಾರ್ಖಾನೆ ಪುನಾರಂಭಕ್ಕೆ ಮುಂದಾಗಿದ್ದರು.
10.30ರ ವೇಳೆಯಲ್ಲಿ ಸ್ಫೋಟ: ಶನಿವಾರ ತಡರಾತ್ರಿ 10.30ರ ವೇಳೆಯಲ್ಲಿ ಬಾಯ್ಲರ್ ಪೈಪ್ ಸಿಡಿಯಿತು ಇದನ್ನು ದುರಸ್ತಿ ಮಾಡಿ ಬೆಂಕಿ ಹಾಕುವುದನ್ನು ಮುಂದುವರೆಸಿದ್ದರು. ಭಾನುವಾರ ಬೆಳಗ್ಗೆ 6.30ರ ವೇಳೆಯಲ್ಲಿ ಬಾಯ್ಲರ್‌ನಿಂದ ಚಿಮಣಿ ಇರುವ ಪೈಪ್ ತುಂಡಾಗಿ ಬಿದ್ದಿದೆ. ಇದಾದ ಮೇಲೆ 10.30ರ ವೇಳೆಯಲ್ಲಿ ಚಿಂಣಿ ನ್ಪೋಟಗೊಂಡು ಈ ವೇಳೆ ಕಾರ್ಮಿಕರು ತಿಂಡಿ ಸೇವಿಸಲು ಹೊರಗೆ ಹೋಗಿದ್ದರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಬಾಯ್ಲರ್ ಬೆಂಕಿ ಹಾಕಿದ್ದ ಹೊಗೆ ಚಿಮುಣಿಗೆ ತಲುಪುವಾಗ ಹೊಗೆಯಲ್ಲಿನ ಕಿಟ್ಟವನ್ನು ಶುದ್ಧೀಕರಣ ಮಾಡುವ ಆಧುನಿಕ ತಂತ್ರಜ್ಞಾನದ ಯಂತ್ರಗಳನ್ನು ಅಳವಡಿಸಲಾಗಿತ್ತು. ಯಂತ್ರಗಳನ್ನು ನಿಯಂತ್ರಿಸುವ ಕಂಪ್ಯೂಟರ್ ವಿಭಾಗದ ಗಾಜುಗಳು ಪುಡಿಯಾಗಿವೆ. ವಿದ್ಯುತ್ ಪರಿವರ್ತಕ ನೆಲಕ್ಕುರುಳಿದೆ.
ದೂಳು ಶುದ್ಧೀಕರಣ ಘಟಕದಲ್ಲಿ ಉಂಟಾದ ಸ್ಫೋಟದ ಶಬ್ಧ ಕಾರ್ಖಾನೆ ಸಮೀಪದಲ್ಲಿರುವ ಕಾಳೇನಹಳ್ಳಿ, ಶ್ರೀನಿವಾಸಪುರ, ನಲ್ಲೂರು, ಗನ್ನಿ ಸೇರಿದಂತೆ ಅನೇಕ ಗ್ರಾಮಕ್ಕೆ ಕೇಳಿಸಿದ್ದು, ಕೂಡಲೇ ಗ್ರಾಮಸ್ಥರು ಕಾರ್ಖಾನೆ ಬಳಿ ಆಗಮಿಸಿದ್ದಾರೆ. ಅಷ್ಟರಲ್ಲಿ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಕಾರ್ಖಾನೆ ಪ್ರಾರಂಭಕ್ಕಾಗಿ ಬಾಯ್ಲರ್‌ಗೆ ಅಗ್ನಿಸ್ಪರ್ಶ ಮಾಡಿದ ಒಂದು ದಿವಸದಲ್ಲಿ ಈ ರೀತಿ ಅವಘಡ ಸಂಭವಿಸಿರುವುದರಿಂದ ರೈತರನ್ನು ಚಿಂತೆಗೆ ದೂಡಿದೆ.
ಚಿಂತೆಗೀಡಾಡ ರೈತರು: ಮಾರ್ಚ್ ಅಂತ್ಯಕ್ಕೆ ಕಬ್ಬು ಅರೆಯುವುದಾಗಿ ಕಾರ್ಖಾನೆ ಆಡಳಿತ ಮಂಡಳಿ ಹಾಗೂ ಚಾಮುಂಡೇಶ್ವರಿ ಶುಗರ್ ಸಂಸ್ಥೆ ಭರವಸೆ ನೀಡಿದ್ದು, ಹಲವು ರೈತರಿಗೆ ಕಬ್ಬು ಕಟಾವು ಮಾಡಲು ಅನುಮತಿ ನೀಡಿತ್ತು. ಆದರೆ ಈಗ ದಿಡೀರ್ ಸಂಭವಿಸಿರುವ ಅವಘಡದಿಂದ ಕಬ್ಬು ಬೆಳೆಗಾರಿಗೆ ತೊಂದರೆಯಾಗುತ್ತಿದೆ.
ಘಟನೆಯನ್ನು ಕಣ್ಣಾರೆ ಕಂಡ ಬಾಯ್ಲರ್ ವಿಭಾಗದ ಮುಖ್ಯಸ್ಥ ನಾಗೇಶ್ ಗಾಬರಿಗೊಂಡಿದ್ದು, ಇದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಖಾನೆ ಅವಘಡ ನಡೆದ ಸ್ಥಳಕ್ಕೆ ಶಾಸಕರಾದ ಸಿ.ಎನ್.ಬಾಲಕೃಷ್ಣ, ಎಂ.ಎ.ಗೋಪಾಲಸ್ವಾಮಿ, ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ವೆಂಕಟೇಶ ಭೇಟಿ ನೀಡಿ ಪರಿಶೀಲಿಸಿದರು.