Advertisement
ಸಾಂಸ್ಕೃತಿಕ ನಗರಿ ಮೈಸೂರಿಗೆ ಕಳಸ ಪ್ರಾಯವಾಗಿರುವ ನಾಡದೇವತೆ ಚಾಮುಂಡಿಬೆಟ್ಟದಲ್ಲಿ ಮೊದಲ ಆಷಾಢ ಶುಕ್ರವಾರದ ಸಂಭ್ರಮ ಮನೆ ಮಾಡಿತ್ತು. ಮೈಸೂರು ನಗರ, ಜಿಲ್ಲೆ, ರಾಜ್ಯ ಹಾಗೂ ಹೊರರಾಜ್ಯಗಳ ಅಸಂಖ್ಯಾತ ಭಕ್ತರು ಬೆಳಗಿನಿಂದಲೇ ಚಾಮುಂಡಿಬೆಟ್ಟಕ್ಕೆ ಆಗಮಿಸಿ ಚಾಮುಂಡಿ ದೇವಿ ದರ್ಶನ ಪಡೆದರು. ಆಷಾಢದ ಮೊದಲ ಶುಕ್ರವಾರದಂದು ಚಾಮುಂಡಿಬೆಟ್ಟಕ್ಕೆ ಭಕ್ತರ ದಂಡು ಹರಿದು ಬಂದಿತು. ಮಹಿಳೆಯರು, ಮಕ್ಕಳು, ವಯೋವೃದ್ಧರು, ನವದಂಪತಿಯರು ಸರದಿಯಲ್ಲಿ ನಿಂತು ದೇವಿ ದರ್ಶನ ಪಡೆದರು.
Related Articles
Advertisement
ಬಿಗಿ ಪೊಲೀಸ್ ಭದ್ರತೆ: ದೇವಿ ದರ್ಶನಕ್ಕೆ ಲಕ್ಷಾಂತರ ಮಂದಿ ಭಕ್ತರು ಆಗಮಿಸುವ ಪರಿಣಾಮ ಮುಂಜಾಗ್ರತಾ ಕ್ರಮವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾಗಿತ್ತು. ಲಲಿತ್‌ಮಹಲ್ ಹೆಲಿಪ್ಯಾಡ್, ಚಾಮುಂಡಿಬೆಟ್ಟದ ಪಾದ, ಚಾಮುಂಡಿಬೆಟ್ಟದ ಮೇಲೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು. 500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಹಾಗೂ ಕೆಎಸ್‌ಆರ್‌ಪಿ, ಅಶ್ವಾರೋಹಿ ದಳದ ಸಿಬ್ಬಂದಿ ಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ದಾಸೋಹಕ್ಕೆ ಜನಸಾಗರ: ದೇವಸ್ಥಾನದ ಪಕ್ಕದಲ್ಲೇ ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿ ಪ್ರಸಾದ, ದಾಸೋಹ ವ್ಯವಸ್ಥೆ ಮಾಡಿತ್ತು. ದೇವಿ ದರ್ಶನ ಪಡೆದ ಭಕ್ತರು ದಾಸೋಹಕ್ಕೂ ಸರದಿಯಲ್ಲಿ ನಿಂತು ಪ್ರಸಾದ ಸ್ವೀಕರಿಸಿದರು. ಬೆಳಗ್ಗೆ 7.30ರಿಂದ 10.30ರವರೆಗೆ ಉಪ್ಪಿಟ್ಟು, ಪೊಂಗಲ್, 10.30ರಿಂದ 4.30ರವರೆಗೆ ಬಿಸಿಬೇಳೆ ಬಾತ್, ಹಪ್ಪಳ, ಅನ್ನಸಾಂಬರ್, ಮೊಸರು, ಬಾದಾಮಿ ಬರ್ಫಿ ಜತೆಗೆ 2 ಕೋಸಂಬರಿ ವಿತರಿಸಲಾಯಿತು. ಸಂಜೆ 4.30ರಿಂದ 10 ಗಂಟೆವರೆಗೆ ಕೇಸರಿಬಾತ್, ಉಪ್ಪಿಟ್ಟಿನ ಜತೆಗೆ 10ಸಾವಿರ ಲಡ್ಡು ನೀಡಲಾಯಿತು. ಇದಲ್ಲದೆ ಅನೇಕ ಭಕ್ತರು ತಮ್ಮ ವಾಹನಗಳಲ್ಲಿ ತಂದ ಪ್ರಸಾದವನ್ನು ಭಕ್ತರಿಗೆ ವಿತರಿಸಿದರು.