ಉಡುಪಿ: ಭಾಷೆ ಜನರನ್ನು ಬೆಸೆಯುವ ಮಾಧ್ಯಮ. ಪ್ರಾಚೀನ ಭಾರತದಲ್ಲಿ ಈ ಬಗ್ಗೆ ಯಾವುದೇ ಗೊಂದಲಗಳು ಇರಲಿಲ್ಲ. ಎಲ್ಲ ಭಾಷೆಗಳು ಪರಸ್ಪರ ಪೂರಕವಾಗಿದ್ದವು. ಆದರೆ ಕಳೆದ 50 ವರ್ಷಗಳಲ್ಲಿ ಭಾಷಾ ವಿಜ್ಞಾನದಲ್ಲಿ ಮಹತ್ತರ ಬದಲಾವಣೆಗಳಾಗಿದ್ದು, ಇಂಗ್ಲಿಷ್ ಮಾಧ್ಯಮದ ಪ್ರಭಾವದಿಂದ ಸ್ಥಾನೀಯ ಭಾಷೆಗಳು ನಶಿಸುವ ಹಂತದಲ್ಲಿವೆ. ಹೀಗಾಗಿ ತಂತ್ರಜ್ಞಾನದ ವೇಗದಲ್ಲಿ ಪ್ರಾದೇಶಿಕ ಭಾಷೆಗಳು ಸ್ಥಾನ ಪಡೆದುಕೊಳ್ಳಬೇಕು. ಡಿಜಿಟಲ್ ಮಾಧ್ಯಮದಲ್ಲಿ ಹೆಚ್ಚು ಬಳಕೆ ಯಾಗಬೇಕು ಎಂದು ಕೇಂದ್ರ ಶಿಕ್ಷಣ ಮಂತ್ರಾಲಯದ ಭಾರತೀಯ ಭಾಷಾ ಸಲಹಾ ಸಮಿತಿ ಅಧ್ಯಕ್ಷ ಚಮೂ ಕೃಷ್ಣಶಾಸ್ತ್ರಿ ಹೇಳಿದರು.
ಕೃಷ್ಣ ಮಠದಲ್ಲಿ ಅದಮಾರು ಮಠದ ಪರ್ಯಾಯ ಮಂಗಲೋತ್ಸವದ “ವಿಶ್ವಾರ್ಪಣಮ…’ ಸಮಾರಂಭದಲ್ಲಿ ಅವರು ಶುಕ್ರವಾರ ವಿಶೇಷ ಉಪನ್ಯಾಸ ನೀಡಿದರು.
ವಿದೇಶಗಳಲ್ಲಿ ಏಕಭಾಷಾ ಸಮಾಜ ಅಸ್ತಿತ್ವದಲ್ಲಿದೆ. ಒಂದು ದೇಶ, ಒಂದು ಭಾಷೆ ಅಲ್ಲಿನ ನೀತಿ. ಆದರೆ ಭಾರತದಲ್ಲಿ ಭಾಷಾ ವೈವಿಧ್ಯ ಇದೆ. ಜನಗಣತಿಯಲ್ಲಿ ದೇಶದಲ್ಲಿ 1,500 ಭಾಷೆಗಳನ್ನು ಗುರುತಿಸಲಾಗಿದೆ. ಬ್ರಿಟಿಷರು ಯುರೋಪ್ ಮಾದರಿಯಾಗಿಟ್ಟುಕೊಂಡು ಏಕಭಾಷೆಗೆ ಒತ್ತು ನೀಡಿದ್ದರು. ಭಾರತದ ಎಲ್ಲ ಭಾಷೆಗಳ ವ್ಯಾಕರಣ, ಸಂಸ್ಕೃತಿ ಭಾಷೆಗೆ ಅನುಗುಣವಾಗಿ ರಚನೆಯಾಗಿದೆ. ಇಂಗ್ಲಿಷ್‌ನಲ್ಲಿ ಕ್ರಿಯಾಪದ ಮಧ್ಯದಲ್ಲಿ ಬಂದರೆ ದೇಶೀಯ ಭಾಷೆಗಳಲ್ಲಿ ಕ್ರಿಯಾಪದ ಅಂತ್ಯದಲ್ಲಿರುತ್ತದೆ. ಜತೆಗೆ ಶೇ. 40ರಿಂದ 70ರಷ್ಟು ಸಂಸ್ಕೃತ ಜನ್ಯ ಶಬ್ದಗಳಿವೆ. ಹೆಚ್ಚಿನ ಪ್ರಾದೇಶಿಕ ಭಾಷಾ ಸಾಹಿತ್ಯಗಳಿಗೆ ರಾಮಾಯಣ ಮತ್ತು ಮಹಾಭಾರತ ಪ್ರೇರಣೆಯಾಗಿರುವುದು ವಿಶೇಷ ಎಂದರು.
ಇದನ್ನೂ ಓದಿ:ರಾಜಸ್ಥಾನ: ಭಾರತೀಯ ವಾಯುಸೇನೆಯ ಮಿಗ್- 21 ವಿಮಾನ ಪತನ, ಪೈಲಟ್ ಸಾವು
ಭೀಮನಕಟ್ಟೆ ಮಠದ ಶ್ರೀ ರಘು ವರೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿ, ಕೃಷ್ಣ ಹೇಳಿದಂತೆ ಕ್ಷುದ್ರವಾದ ಹೃದಯ ದೌರ್ಬಲ್ಯವನ್ನು ನಾವು ತೊರೆಯದಿದ್ದರೆ ಧರ್ಮ ನಮ್ಮ ಕೈ ಹಿಡಿಯುವುದಿಲ್ಲ. ಒಳ್ಳೆಯ ಹಣತೆ ಒಳ್ಳೆಯ ತೈಲ ಮತ್ತು ಚೆನ್ನಾಗಿ ಉರಿಯುವ ಬತ್ತಿ ಇದ್ದಾಗಲಷ್ಟೇ ಬೆಳಕು ಪ್ರಜ್ವಲಿಸುತ್ತದೆ ಎಂದರು.
ಪರ್ಯಾಯ ಪೀಠಾಧೀಶ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿಯ ವರು ನಿವೃತ್ತ ಯೋಧ ಪೆರಂಪಳ್ಳಿ ನೆಕ್ಕಾರು ಶ್ರೀನಿವಾಸ ರಾವ್, ರಥ ಮತ್ತು ಚಿನ್ನದ ಕುಸುರಿ ಶಿಲ್ಪಿ ಕುಂಜಾರುಗಿರಿ ರಾಘವೇಂದ್ರ ಆಚಾರ್ಯ ಅವರನ್ನು ಸಮ್ಮಾನಿಸಿದರು.
ಸಂಸ್ಕೃತ ವಿದ್ವಾಂಸ ಎಚ್.ಆರ್. ವಿಶ್ವಾಸ್, ಕಟೀಲು ಯಕ್ಷಗಾನ ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಭಾಗವಹಿಸಿದ್ದರು. ಮಠದ ವ್ಯವಸ್ಥಾಪಕ ಗೋವಿಂದರಾಜ್ ಸ್ವಾಗತಿಸಿದರು. ವಿದ್ವಾಂಸ ಕೃಷ್ಣರಾಜ ಭಟ್ ಕುತ್ಪಾಡಿ ನಿರ್ವಹಿಸಿದರು.