ಬೆಂಗಳೂರು: ಚಾಮರಾಜಪೇಟೆ ಆಟದ ಮೈದಾನದ ಒಡೆತನಕ್ಕೆ ಸಂಬಂಧಿಸಿ ವಕ್ಫ್ ಬೋರ್ಡ್‌ನಿಂದ ಬಿಬಿಎಂಪಿಗೆ ದಾಖಲೆ ಸಲ್ಲಿಸಲಾಗಿದ್ದು, ಅದನ್ನು ಕಾನೂನು ವಿಭಾಗದಿಂದ ಪರಿಶೀಲಿಸಲಾಗುತ್ತಿದೆ.
ಮೈದಾನದ ಒಡೆತನ ವಿಚಾರವಾಗಿ ದಿನಕ್ಕೊಂದು ಬೆಳವಣಿಗೆ ನಡೆಯುತ್ತಿದೆ. ಮೈದಾನ ತಮಗೆ ಸೇರಿದ್ದು ಎಂಬ ವಾದವನ್ನು ವಕ್ಫ್ ಬೋರ್ಡ್ ಮಂಡಿಸುತ್ತಿದ್ದ ಕಾರಣ, ದಾಖಲೆಗಳನ್ನು ಸಲ್ಲಿಸುವಂತೆ ಅದಕ್ಕೆ ಬಿಬಿಎಂಪಿ ನೋಟಿಸ್ ನೀಡಿತ್ತು. ವಕ್ಫ್ ಬೋರ್ಡ್ ಕಳೆದ ಶುಕ್ರವಾರ ದಾಖಲೆಗಳನ್ನು ಸಲ್ಲಿಸಿದೆ.
ವಕ್ಫ್ ಬೋರ್ಡ್ ಪ್ರಮುಖವಾಗಿ ಸುಪ್ರೀಂಕೋರ್ಟ್ ನೀಡಿರುವ ಆದೇಶಗಳ ಪ್ರತಿ ಹಾಗೂ ವಕ್ಫ್ ಬೋರ್ಡ್ ದಾಖಲೆಯಲ್ಲಿ ಮೈದಾನದ ಕುರಿತು ಉಲ್ಲೇಖೀಸಿರುವ ದಾಖಲೆಗಳನ್ನು ಸಲ್ಲಿಸಿದೆ. ಸುಪ್ರೀಂಕೋರ್ಟ್ ಆದೇಶದಲ್ಲಿ ಮೈದಾನವು ವಕ್ಫ್ ಬೋರ್ಡ್‌ಗೆ ಸೇರಿದ್ದು ಎಂಬ ಉಲ್ಲೇಖವಿದ್ದು, ಅದರಿಂದಾಗಿ ಚಾಮರಾಜಪೇಟೆ ಮೈದಾನ ತಮ್ಮದು ಎಂದು ವಾದ ಮಂಡಿಸಲಾಗಿದೆ.
ಕಾರ್ಯಕ್ರಮಗಳಿಗೆ ಅನುಮತಿಯಿಲ್ಲ:
ಚಾಮರಾಜಪೇಟೆ ಮೈದಾನದಲ್ಲಿ ಜೂ. 21ರಂದು ಯೋಗ ದಿನ ಆಚರಣೆಗಾಗಿ ಕೆಲವು ಸಂಘಟನೆಗಳಿಂದ ಮನವಿ ಸಲ್ಲಿಕೆಯಾಗಿತ್ತು. ಆದರೆ ಒಡೆತನ ವಿಚಾರವಾಗಿ ಗೊಂದಲಗಳು ನಿವಾರಣೆಯಾಗದ ಕಾರಣ ಯಾವುದೇ ಕಾರ್ಯಕ್ರಮಕ್ಕೆ ಅನುಮತಿ ನೀಡದಿರಲು ಬಿಬಿಎಂಪಿ ನಿರ್ಧರಿಸಿದೆ.
ಚಾಮರಾಜಪೇಟೆ ಮೈದಾನಕ್ಕೆ ಸಂಬಂಧಿಸಿದಂತೆ ವಕ್ಫ್ ಬೋರ್ಡ್‌ನಿಂದ ದಾಖಲೆ ಸಲ್ಲಿಸಲಾಗಿದೆ. ಆ ದಾಖಲೆಗಳ ಪರಿಶೀಲನೆಗೆ ಬಿಬಿಎಂಪಿ ಕಾನೂನು ಕೋಶಕ್ಕೆ ಕಳುಹಿಸಲಾಗಿದೆ. ಅಲ್ಲಿಂದ ಪ್ರತಿಕ್ರಿಯೆ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು.
-ಶ್ರೀನಿವಾಸ್ ,ಬಿಬಿಎಂಪಿ ಜಂಟಿ ಆಯುಕ್ತ (ಪಶ್ಚಿಮ ವಲಯ)