ಕೆನ್ನಿಂಗ್ಟನ್ ಓವೆಲ್ (ಲಂಡನ್): ಚಾಂಪಿಯನ್ಸ್ ಟ್ರೋಫಿಗಾಗಿ ತೆರಳಿರುವ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಮೊದಲ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್ ಮಣಿಸಿ ಶುಭಾರಂಭ ಮಾಡಿದೆ. ಪಂದ್ಯದ ನಡುವೆ ಬಿರುಸಾಗಿ ಮಳೆ ಸುರಿಯಿತು. ಹೀಗಾಗಿ ಆಟ ಸಾಗಲಿಲ್ಲ. ಡಕ್‌ವರ್ಥ್ ನಿಯಮ ಅಳವಡಿಸಲಾಯಿತು. ಈ ಪ್ರಕಾರ ಭಾರತ 45 ರನ್ ಜಯ ಕಂಡಿತು.
ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಭಾರತದ ಬಿಗು ಬೌಲಿಂಗ್ ದಾಳಿ ತತ್ತರಿಸಿತು. 38.4 ಓವರ್‌ಗೆ ಕೇವಲ 189 ರನ್‌ಗೆ ಆಲೌಟಾಯಿತು. ಈ ಗುರಿ ಬೆನ್ನಟ್ಟಿದ ಭಾರತ ಶಿಖರ್ ಧವನ್ (40 ರನ್) ಹಾಗೂ ವಿರಾಟ್ ಕೊಹ್ಲಿ (ಅಜೇಯ 52 ರನ್) ನೆರವಿನಿಂದ 26 ಓವರ್‌ಗೆ 129 ರನ್‌ಗಳಿಸಿದ್ದಾಗ ಮಳೆ ಬಂತು. ನಂತರ ಪಂದ್ಯ ನಡೆಯಲಿಲ್ಲ. ಈ ವೇಳೆ ಕೊಹ್ಲಿ ಜತೆ ಎಂ.ಎಸ್.ಧೋನಿ (ಅಜೇಯ 17 ರನ್)ಗಳಿಸಿ ಕ್ರೀಸ್‌ನಲ್ಲಿದ್ದರು.
ಶಮಿ, ಭುವಿ ಕಡಿವಾಣ: ಇದಕ್ಕೂ ಮೊದಲು ನ್ಯೂಜಿಲೆಂಡ್ ತಂಡವನ್ನು ಮೊಹಮ್ಮದ್ ಶಮಿ ಮತ್ತು ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಭುವನೇಶ್ವರ್ ಸೇರಿಕೊಂಡು ಬ್ಯಾಟಿಂಗ್ ಸರದಿ ಸೀಳಿದರು. ಭುವಿ 28ಕ್ಕೆ 3, ಶಮಿ 47ಕ್ಕೆ 3 ವಿಕೆಟ್ ಉಡಾಯಿಸಿದರು.
ಒಂದು ವಿಕೆಟ್ ಉಮೇಶ್ ಯಾದವ್ ಪಾಲಾಯಿತು. ಸ್ಪಿನ್ ವಿಭಾಗದಲ್ಲಿ ರವೀಂದ್ರ ಜಡೇಜ ಮಿಂಚು ಹರಿಸಿದರು. ಅವರ ಸಾಧನೆ 8 ರನ್ನಿಗೆ 2 ವಿಕೆಟ್. ಆರ್. ಅಶ್ವಿನ್ 32 ರನ್ನಿತ್ತು ಒಂದು ವಿಕೆಟ್ ಕಿತ್ತರು. 2015ರ ವಿಶ್ವಕಪ್ ಸೆಮಿಫೈನಲ್ ಬಳಿಕ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯವಾಡಿದ ಮೊಹಧಿಮ್ಮದ್ ಶಮಿ ಈ “ಸುದೀರ್ಘ ವಿರಾಮ’ವನ್ನು ಸಂಪೂರ್ಣ ಮರೆತೇ ಬಿಟ್ಟ ರೀತಿಯಲ್ಲಿ ಬೌಲಿಂಗ್ ನಡೆಸಿದ್ದು ವಿಶೇಷವಾಗಿತ್ತು. ಅವರು ಕಿವೀಸ್ ಅಗ್ರ ಕ್ರಮಾಂಕದ ಮೇಲೆ ಘಾತಕವಾಗಿ ಎರಗಿದರು. ಅಪಾಯಕಾರಿ ಆರಂಭಕಾರ ಮಾರ್ಟಿನ್ ಗಪ್ಟಿಲ್ (9), ನಾಯಕ ಕೇನ್ ವಿಲಿಯಮ್ಸನ್ (8) ಹಾಗೂ ನೀಲ್ ಬ್ರೂಮ್ (0) ವಿಕೆಟ್‌ಗಳನ್ನು ಬುಟ್ಟಿಗೆ ಹಾಕಿಕೊಂಡರು.
ನೆರವಿಗೆ ನಿಂತ ರಾಂಚಿ: 3ನೇ ಓವರಿನಲ್ಲಿ 20 ರನ್ ಆಗಿದ್ದಾಗ ಕುಸಿತ ಅನುಭವಿಸಿತೊಡಗಿದ ಕಿವೀಸ್
ಗೆ ಆಧಾರವಾಗಿ ನಿಂತವರು ಆರಂಭಿಕನಾಗಿ ಇಳಿದ ಲ್ಯೂಕ್ ರಾಂಚಿ. ಅವರು ಸರ್ವಾಧಿಕ 66 ರನ್ ಹೊಡೆದರು. 63 ಎಸೆತಗಳ ಈ ಇನಿಂಗ್ಸ್‌ನಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ಸೇರಿತ್ತು. ಬ್ಲ್ಯಾಕ್ ಕ್ಯಾಪ್ಸ್ ಇನಿಂಗ್ಸ್‌ನಲ್ಲಿ ರಾಂಚಿ ಹೊರತುಪಡಿಸಿ ಉಳಿದವರ್ಯಾರೂ ಸಿಕ್ಸರ್ ಬಾರಿಸಲಿಲ್ಲ. ಆದರೆ ರಾಂಚಿ 21ನೇ ಓವರಿನಲ್ಲಿ 5ನೇ ವಿಕೆಟ್ ರೂಪದಲ್ಲಿ ಪೆವಿಲಿಯನ್ ಸೇರುವಾಗ ನ್ಯೂಜಿಲೆಂಡ್ ದೊಡ್ಡ ಮೊತ್ತವೇನೂ ದಾಖಲಿಸಿರಲಿಲ್ಲ. ಆಗ ಸ್ಕೋರ್‌ಬೋರ್ಡ್ ಕೇವಲ 110 ರನ್ ತೋರಿಸುತ್ತಿತ್ತು. ರಾಂಚಿ-ವಿಲಿಯಮ್ಸನ್ 3ನೇ ವಿಕೆಟಿಗೆ 63 ರನ್ ಒಟ್ಟುಗೂಡಿಸಿದ್ದೇ ಕಿವೀಸ್ ಸರದಿಯ ದೊಡ್ಡ ಜತೆಯಾಟ. ಭಾರತ ತನ್ನ 2ನೇ ಅಭ್ಯಾಸ ಪಂದ್ಯವನ್ನು ಮಂಗಳವಾರ ಬಾಂಗ್ಲಾದೇಶ ವಿರುದ್ಧ ಆಡಲಿದೆ.