Advertisement
ಲಾಹೋರ್, ಕರಾಚಿ ಮತ್ತು ರಾವಲ್ಪಿಂಡಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು ನಡೆಯಲಿವೆ. 2025ರ ಫೆಬ್ರವರಿ-ಮಾರ್ಚ್ ವೇಳೆ ಈ ಪಂದ್ಯಾವಳಿ ನಡೆಯುವ ಸಾಧ್ಯತೆ ಇದೆ. 2017ರಲ್ಲಿ ಕೊನೆಯ ಸಲ ಇಂಗ್ಲೆಂಡ್‌ನಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯನ್ನು ಆಡಲಾಗಿತ್ತು.
ಆದರೆ ಪಾಕಿಸ್ಥಾನದಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಭಾರತ ಪಾಲ್ಗೊಳ್ಳುವ ಯಾವುದೇ ಸಾಧ್ಯತೆ ಇಲ್ಲ. ಆಗ ಐಸಿಸಿ “ಹೈಬ್ರಿಡ್ ಮಾದರಿ’ಯಂತೆ ಭಾರತದ ಪಂದ್ಯಗಳನ್ನು ತಟಸ್ಥ ಕೇಂದ್ರದಲ್ಲಿ ಆಡಿಸುವ ಸಾಧ್ಯತೆ ಇದೆ. ಕಳೆದ ವರ್ಷದ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲೂ ಇದನ್ನು ಅನುಸರಿಸಲಾಗಿತ್ತು. ಪಾಕಿಸ್ಥಾನದ ಆತಿಥ್ಯದ ಈ ಕೂಟದಲ್ಲಿ ಭಾರತದ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿಸಲಾಗಿತ್ತು. “ನಾವು ಈಗಾಗಲೇ ಐಸಿಸಿಗೆ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಸಂಭಾವ್ಯ ವೇಳಾಪಟ್ಟಿಯೊಂದನ್ನು ಕಳುಹಿಸಿದ್ದೇವೆ. ಇದೀಗ ತಾಣಗಳನ್ನೂ ಅಂತಿಮ ಗೊಳಿಸಿದ್ದೇವೆ. ಐಸಿಸಿ ಭದ್ರತಾ ತಂಡ ಈಗಾಗಲೇ ಪಾಕಿಸ್ಥಾನಕ್ಕೆ ಆಗಮಿಸಿ ತಾಣಗಳನ್ನು ಪರಿಶೀಲಿಸಿದೆ. ಕೆಲವು ಸ್ಟೇಡಿಯಂಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು. ಇದಕ್ಕಾಗಿ ಮೇ 7ರಂದು ಬಿಡ್ ಕರೆಯಲಿದ್ದೇವೆ. ಈ ಕೂಟವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಬಲ್ಲೆವು ಎಂಬ ವಿಶ್ವಾಸ ನಮ್ಮದು’ ಎಂಬುದಾಗಿ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಹೇಳಿದ್ದಾರೆ.