Advertisement

ಚಾಂಪಿಯನ್ಸ್‌ ಟ್ರೋಫಿ: ಆಸೀಸ್‌ ವಿರುದ್ಧ ಗೆಲುವಿನ ತವಕದಲ್ಲಿ ಭಾರತ

06:00 AM Jun 27, 2018 | |

ಬ್ರೆಡಾ (ಹಾಲೆಂಡ್‌): ಸತತ ಗೆಲುವುಗಳೊಂದಿಗೆ ಪುರುಷರ ಎಫ್ಐಎಚ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಕೂಟದಲ್ಲಿ ಭರ್ಜರಿ ಆರಂಭ ಪಡೆದಿರುವ ಭಾರತ ದಿಗ್ಗಜರನ್ನು ಮಣಿಸುವ ಸಾಹಸವನ್ನು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲೂ ಮುಂದುವರಿಸುವ ತವಕದಲ್ಲಿದೆ. ತನ್ನ ಮೂರನೇ ಪಂದ್ಯದಲ್ಲಿ ಭಾರತ ಬುಧವಾರ ಆಸ್ಟ್ರೇಲಿಯಾ ವಿರುದ್ಧ ಆಡಲಿದೆ.

Advertisement

ಮೂವತ್ತೇಳು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಚಾಂಪಿಯನ್ಸ್‌ ಟ್ರೋಫಿಗೆ ಮುತ್ತಿಕ್ಕುವ ಕನಸು ಕಾಣುತ್ತಿರುವ ಭಾರತ ಇದಕ್ಕಿಂತ ಉತ್ತಮ ಆರಂಭವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನವನ್ನು 4-0 ಗೋಲುಗಳಿಂದ ಮಣಿಸಿದ ಭಾರತೀಯರು, ಒಲಿಂಪಿಕ್ಸ್‌ ಚಾಂಪಿಯನ್‌ ಹಾಗೂ ವಿಶ್ವದ ನಂ. 2 ತಂಡವಾಗಿರುವ ಆರ್ಜೆಂಟೀನಾಗೆ 2-1 ಗೋಲುಗಳಿಂದ ಆಘಾತ ನೀಡಿತ್ತು. ಆರು ತಂಡಗಳ ಕೂಟದಲ್ಲಿ ಭಾರತ ಆರು ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದೆ. ರೌಂಡ್‌ ರಾಬಿನ್‌ ಲೀಗ್‌ ಮಾದರಿಯಲ್ಲಿ ಅಗ್ರಸ್ಥಾನದಲ್ಲಿರುವ ಎರಡು ತಂಡಗಳು ಪ್ರಶಸ್ತಿಗಾಗಿ ರವಿವಾರ ಸೆಣಸಲಿವೆ.

ಗೋಲ್ಡ್‌ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಕಳಪೆ ಪ್ರದರ್ಶನ ತೋರಿದ ಬಳಿಕ ಪುಟಿದೆದ್ದಿರುವ ಭಾರತ ತಂಡ, ಹೊಸ ಕೋಚ್‌ ಹರೇಂದ್ರ ಸಿಂಗ್‌ ಅವರ ಮಾರ್ಗದರ್ಶನದಲ್ಲಿ ಆತ್ಮವಿಶ್ವಾಸ ವೃದ್ಧಿಸಿಕೊಂಡು ಅದ್ಭುತ ಪ್ರದರ್ಶನ ತೋರುತ್ತಿದೆ. ಯುವ ಆಟಗಾರರೊಂದಿಗೆ ಅನುಭವಿಗಳಿಗೂ ಆದ್ಯತೆ ನೀಡಿದ್ದರ ಫ‌ಲ ಮೊದಲ ಎರಡು ಪಂದ್ಯಗಳಲ್ಲೇ ಗೋಚರಿಸಿದೆ. ಯುವ ಆಟಗಾರ ದಿಲ್‌ಪ್ರೀತ್‌ ಸಿಂಗ್‌ ಮಿಂಚು ಹರಿಸುತ್ತಿದ್ದಾರೆ. ಮನ್‌ದೀಪ್‌ ಸಿಂಗ್‌, ಎಸ್‌.ವಿ. ಸುನೀಲ್‌ ಹಾಗೂ ಲಲಿತ್‌ ಉಪಾಧ್ಯಾಯ ಅವರೂ ಭರ್ಜರಿ ಪ್ರದರ್ಶನ ತೋರುತ್ತಿದ್ದಾರೆ. ಸರ್ದಾರ್‌ ಸಿಂಗ್‌ ನೇತೃತ್ವದಲ್ಲಿ ಮಿಡ್‌ಫಿàಲ್ಡ್‌ ಚುರುಕಾಗಿದ್ದು, ಫೀಲ್ಡ್‌ ಗೋಲುಗಳನ್ನು ದಾಖಲಿಸಲು ನೆರವಾಗುತ್ತಿದೆ. ಆದರೆ, ಪಾಕಿಸ್ಥಾನದ ವಿರುದ್ಧದ ಪಂದ್ಯದಲ್ಲಿ ಬಲ ಮೊಣಕಾಲಿಗೆ ಗಾಯ ಮಾಡಿಕೊಂಡು ತವರಿಗೆ ಮರಳುತ್ತಿರುವ ರಮಣದೀಪ್‌ ಸಿಂಗ್‌, ಸದ್ಯಕ್ಕೆ ಆಡುವ ಸ್ಥಿತಿಯಲ್ಲಿಲ್ಲ. ಅವರು ನಾಲ್ಕರಿಂದ ಆರು ತಿಂಗಳು ವಿಶ್ರಾಂತಿ ಪಡೆಯಬೇಕಿದೆ.

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಬಳಿಕ ಗುರುವಾರ ಭಾರತ ಬೆಲ್ಜಿಯಂ ವಿರುದ್ಧ ಆಡಲಿದ್ದು, ಶನಿವಾರ ಆತಿಥೇಯ ಹಾಲೆಂಡ್‌ ವಿರುದ್ಧ ಕಣಕ್ಕಿಳಿಯಲಿದೆ.

ಮೊದಲ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ 3-3 ಗೋಲುಗಳ ಡ್ರಾ ಸಾಧಿಸಿರುವ ಆಸ್ಟ್ರೇಲಿಯಾ, ಪಾಕಿಸ್ಥಾನವನ್ನು 2-1 ಗೋಲುಗಳಿಂದ ಮಣಿಸಿ ನಾಲ್ಕು ಅಂಕಗಳನ್ನು ಸಂಪಾದಿಸಿದೆ. ಭಾರತದ ವಿರುದ್ಧ ಆಡುವಾಗಲಂತೂ ಸದಾ ಉತ್ತಮ ಪ್ರದರ್ಶನವನ್ನೇ ನೀಡುತ್ತಿರುವ ಆಸ್ಟ್ರೇಲಿಯಾವನ್ನು ಮಣಿಸುವುದು ಅಷ್ಟು ಸುಲಭವಲ್ಲ. ಕಳೆದ ಸಲ ಲಂಡನ್‌ನಲ್ಲಿ ನಡೆದ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ ಪಂದ್ಯದಲ್ಲೂ ಭಾರತ ಆಸ್ಟ್ರೇಲಿಯಾ ವಿರುದ್ಧವೇ ಸೋತಿತ್ತು. ಬುಧವಾರ ಕಣಕ್ಕಿಳಿಯುವಾಗ ಭಾರತಕ್ಕೆ ಈ ಆಘಾತಕಾರಿ ಸೋಲು ನೆನಪಾಗದೇ ಇರದು.

Advertisement
Advertisement

Udayavani is now on Telegram. Click here to join our channel and stay updated with the latest news.

Next