Advertisement

ಚಾಂಪಿಯನ್ಸ್‌ ಟ್ರೋಫಿ ಬಿ ವಿಭಾಗ: ಕ್ವಾರ್ಟರ್‌ ಫೈನಲ್‌ ಸ್ಪರ್ಧೆ

12:37 PM Jun 10, 2017 | Team Udayavani |

ಲಂಡನ್‌: ಗುರುವಾರದ ಚಾಂಪಿಯನ್ಸ್‌ ಟ್ರೋಫಿ ಪಂದ್ಯದಲ್ಲಿ ಶ್ರೀಲಂಕಾ ಭಾರತವನ್ನು ಮಣಿಸುವುದರೊಂದಿಗೆ 
“ಬಿ’ ವಿಭಾಗದಲ್ಲಿ ಸಮಬಲ ನೆಲೆಸಿದೆ. ಎಲ್ಲ 4 ತಂಡಗಳು ಒಂದು ಜಯ, ಒಂದು ಸೋಲಿನೊಂದಿಗೆ ತಲಾ 2 ಅಂಕಗಳನ್ನು ಹೊಂದಿವೆ. ಹೀಗಾಗಿ ನಾಕೌಟ್‌ ಪ್ರವೇಶಿಸುವ ತಂಡ ಯಾವುದೆಂಬುದು ಇತ್ಯರ್ಥ ವಾಗಬೇಕಿದೆ. ನಾಲ್ಕೂ ತಂಡಗಳಿಗೆ ಸೆಮಿಫೈನಲ್‌ ಪ್ರವೇಶಿಸುವ ಮುಕ್ತ ಅವಕಾಶ ಇದೆ ಎನ್ನುವುದು “ಬಿ’ ವಿಭಾಗದ ಸ್ವಾರಸ್ಯ!

Advertisement

ಅಕಸ್ಮಾತ್‌ ಶ್ರೀಲಂಕಾವನ್ನು ಮಣಿಸಿದ್ದೇ ಆದರೆ ಭಾರತ ಈಗಾ ಗಲೇ ಸೆಮಿಫೈನಲ್‌ನಲ್ಲಿರುತ್ತಿತ್ತು. ಶ್ರೀಲಂಕಾ ಕೂಟದಿಂದ ನಿರ್ಗಮಿ ಸುತ್ತಿತ್ತು. ಆದರೆ ಈ ಪಂದ್ಯದ ಫ‌ಲಿತಾಂಶ ಎನ್ನುವುದು ನಾಕೌಟ್‌ ಕುತೂಹಲವನ್ನು ಅಂತಿಮ ಲೀಗ್‌ ಪಂದ್ಯದ ತನಕ ಕಾಯ್ದಿರಿಸುವಲ್ಲಿ ಯಶಸ್ವಿಯಾಗಿದೆ.

“ಬಿ” ವಿಭಾಗದಲ್ಲಿನ್ನು 2 ಲೀಗ್‌ ಪಂದ್ಯಗಳು ಬಾಕಿ ಇವೆ. ಇವೆರಡೂ “ಕ್ವಾರ್ಟರ್‌ ಫೈನಲ್‌’ ಮಹತ್ವ ಪಡೆದಿವೆ. ಜೂ. 11ರಂದು ಭಾರತ- ದಕ್ಷಿಣ ಆಫ್ರಿಕಾ, ಜೂ. 12 ರಂದು ಶ್ರೀಲಂಕಾ-ಪಾಕಿಸ್ಥಾನ ಮುಖಾಮುಖೀ ಏರ್ಪಡಲಿದೆ. ಇಲ್ಲಿ  ಗೆದ್ದ ತಂಡಗಳು ಸೆಮಿ ಪ್ರವೇ ಶಿಸಲಿವೆ. ಇದು ಸರಳ ಲೆಕ್ಕಾಚಾರ.

ಎರಡೂ ಪಂದ್ಯ ರದ್ದಾದರೆ?
“ಬಿ’ ವಿಭಾಗದ ಯಾವುದೇ ಪಂದ್ಯ ಈವರೆಗೆ ಮಳೆಯಿಂದ ರದ್ದುಗೊಂಡಿಲ್ಲ, ಯಾವ ತಂಡಕ್ಕೂ ಅಂಕ ಹಂಚಿಕೊಳ್ಳುವ ಪ್ರಮೇಯ ಎದುರಾಗಿಲ್ಲ. ಭಾರತ-ಶ್ರೀಲಂಕಾ ನಡುವಿನ ಪಂದ್ಯ ಮಳೆಯಿಂದ ಅಡಚಣೆಗೊಳಗಾಗಲಿದೆ ಎಂದು ಲಂಡನ್‌ ಹವಾಮಾನ ಇಲಾಖೆ ಸೂಚಿಸಿ ದರೂ ಗುರುವಾರ ಒಂದು ಹನಿಯೂ ಮಳೆಯಾಗಲಿಲ್ಲ!  

ಅಕಸ್ಮಾತ್‌ ಮಳೆ ಬಂದು ಈ ಎರಡೂ ಲೀಗ್‌ ಪಂದ್ಯಗಳು ರದ್ದಾದರೆ ಆಗ ನಾಕೌಟ್‌ ತಂಡಗಳನ್ನು ನಿರ್ಧರಿಸುವುದು ಹೇಗೆ? ಇಂಥದೊಂದು ಕುತೂಹಲವನ್ನು ಕಾಯ್ದಿರಿಸಿಕೊಂಡರೆ ತಪ್ಪಿಲ್ಲ.

Advertisement

ಎರಡೂ ಪಂದ್ಯಗಳು ಮಳೆಯಿಂದ ರದ್ದಾದರೆ ಆಗ ನಾಲ್ಕೂ ತಂಡಗಳ ಬಳಿ ತಲಾ 3 ಅಂಕ ಇರುತ್ತದೆ. ಇಲ್ಲಿ 2 ನಾಕೌಟ್‌ ತಂಡಗಳನ್ನು ಆರಿಸಲು ನೆಟ್‌ ರನ್‌ರೇಟ್‌ ನಿರ್ಣಾಯಕ ಪಾತ್ರ ವಹಿಸುತ್ತದೆ. ಆಗ ಈ ಅದೃಷ್ಟ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳದ್ದಾಗುತ್ತದೆ! ಇವು ಶ್ರೀಲಂಕಾ ಹಾಗೂ ಪಾಕಿಸ್ಥಾನಕ್ಕಿಂತ ಹೆಚ್ಚಿನ ರನ್‌ರೇಟ್‌ ಹೊಂದಿವೆ.

ಭಾರತ +1.272 ರನ್‌ರೇಟ್‌ನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿದೆ. ದಕ್ಷಿಣ ಆಫ್ರಿಕಾ ದ್ವಿತೀಯ ಸ್ಥಾನದಲ್ಲಿದೆ (+1.000). ಇಲ್ಲಿ ಗಮನಿಸಬೇಕಾದ ಅಂಶವೊಂದಿದೆ. ಪಂದ್ಯ ರದ್ದಾಗುವ ಮುನ್ನತಂಡವೊಂದು ಎಷ್ಟೇ ರನ್‌ ಮಾಡಿದರೂ ರನ್‌ರೇಟ್‌ ಗಣನೆಗೆ ಬರುವುದಿಲ್ಲ. ಆದ್ದರಿಂದ “ಬಿ’ ವಿಭಾಗದ ಉಳಿದೆರಡೂ ಪಂದ್ಯಗಳು ಅರ್ಧದಲ್ಲೇ ನಿಂತು ರದ್ದುಗೊಂಡರೆ ಈಗಿನ ರನ್‌ರೇಟೇ ಉಳಿದುಕೊಳ್ಳುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next