Advertisement

Champion England ಮುಳುಗಿದ ಹಡಗು ; ಅಜೇಯ ಭಾರತಕ್ಕೆ ಆರನೇ ಗೆಲುವಿನ ಕಾತರ

11:43 PM Oct 28, 2023 | Team Udayavani |

ಲಕ್ನೋ: ನಾಲ್ಕು ವರ್ಷಗಳ ಹಿಂದೆ ಬೌಂಡರಿ ಲೆಕ್ಕಾಚಾರದಲ್ಲಿ ಚೊಚ್ಚಲ ವಿಶ್ವಕಪ್‌ ಎತ್ತಿದ ಇಂಗ್ಲೆಂಡ್‌, ಈ ಬಾರಿ ನಿರ್ಗಮನ ಬಾಗಿಲಲ್ಲಿ ಬಂದು ನಿಂತಿದೆ. ಬಟ್ಲರ್‌ ತಂಡವೀಗ ಮುಳುಗುತ್ತಿರುವ ಹಡಗು. ರವಿವಾರ ಲಕ್ನೋದಲ್ಲಿ ಆತಿಥೇಯ ಭಾರತದ ವಿರುದ್ಧ ಕೊನೆಯ ಅವಕಾಶದ ಬಹು ದೂರದ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಲಿದೆ. ರೋಹಿತ್‌ ಪಡೆಗೋ… ಸೆಮಿಫೈನಲ್‌ ಪ್ರವೇಶಿಸುವ ತವಕ! ಹೌದು, ಟೀಮ್‌ ಇಂಡಿಯಾ ಸತತ 6ನೇ ಪಂದ್ಯವನ್ನು ಗೆದ್ದರೆ ನಾಕೌಟ್‌ ಸ್ಥಾನವನ್ನು ಪಕ್ಕಾ ಮಾಡಿಕೊಳ್ಳಲಿದೆ. ಆಗ ಕ್ರಿಕೆಟ್‌ ಜನಕರು ಮನೆಗೆ ಮರಳಲಿದ್ದಾರೆ.

Advertisement

ಭಾರತ ಆಡಿದ ಐದೂ ಪಂದ್ಯಗಳನ್ನು ಗೆದ್ದು ತನ್ನ ಛಾತಿಗೆ ತಕ್ಕ ಪ್ರದರ್ಶನ ನೀಡುತ್ತ ಬಂದಿದೆ. ಭಾರತದಲ್ಲಿ ಭಾರತ ತಂಡವನ್ನು ಸೋಲಿಸುವುದು ಕಷ್ಟ ಎಂಬ ಅರಿವು ಎಲ್ಲ ತಂಡಗಳಿಗೂ ಆಗತೊಡಗಿದೆ. ಈ ಒತ್ತಡ ಹಾಗೂ ಸತತ ಸೋಲಿನ ಭಾರವನ್ನು ಹೊತ್ತ ಜಾಸ್‌ ಬಟ್ಲರ್‌ ಬಳಗ ಈ ನಿರ್ಣಾಯಕ ಪಂದ್ಯವನ್ನು ಹೇಗೆ ಆಡಲಿದೆ ಎಂಬುದನ್ನು ಕಾಣುವ ಕಾತರ ಎಲ್ಲರದೂ.

ಐದರಲ್ಲಿ ಒಂದೇ ಜಯ
ಇಂಗ್ಲೆಂಡ್‌ 5 ಪಂದ್ಯಗಳಲ್ಲಿ ಗೆದ್ದದ್ದು ಒಂದನ್ನು ಮಾತ್ರ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ. ಅಂದರೆ ನೆದರ್ಲೆಂಡ್ಸ್‌ ಗಿಂತಲೂ ಕೆಳಗೆೆ. ಇಂಗ್ಲೆಂಡ್‌ ದುರಂತವನ್ನು ಇದಕ್ಕಿಂತ ಭಿನ್ನವಾಗಿ ಬಣ್ಣಿಸಲು ಸಾಧ್ಯವಿಲ್ಲ. ಅಕಸ್ಮಾತ್‌ ಭಾರತವನ್ನು ಮಣಿಸಿದರೂ ಅದು ಅಗ್ರ ನಾಲ್ಕರಲ್ಲಿ ಕಾಣಿಸಿಕೊಳ್ಳಲಿದೆ ಎಂಬ ಯಾವ ನಿರೀಕ್ಷೆಯೂ ಇಲ್ಲ. ಈಗಿನ ಲೆಕ್ಕಾಚಾರದಂತೆ ಆ 4 ಸ್ಥಾನಗಳು ಫಿಕ್ಸ್‌ ಆಗಿವೆ. ಸದ್ಯದ ಸ್ಥಿತಿಯಲ್ಲಿ 5ನೇ ಸ್ಥಾನದಲ್ಲಿರುವ ತಂಡಕ್ಕೂ ನಾಲ್ಕಕ್ಕೇರುವುದು ಕೂಡ ದೊಡ್ಡ ಸವಾಲು. ಇಂಥ ಸ್ಥಿತಿಯಲ್ಲಿ 10ನೇ ಸ್ಥಾನಕ್ಕೆ ಜಾರಿರುವ ಇಂಗ್ಲೆಂಡ್‌ ಮೇಲೇರಿ ಬರುತ್ತದೆ ಎಂಬ ಯಾವ ನಂಬಿಕೆಯನ್ನೂ ಇರಿಸಿಕೊಳ್ಳುವ ಹಾಗಿಲ್ಲ. ಆದರೂ ಪ್ರತಿಷ್ಠೆಗಾಗಿ ಆಡಬೇಕು, ಸಾಧ್ಯವಾದರೆ ಗೆಲ್ಲಬೇಕು.

ಮತ್ತೆ ಹಾರ್ದಿಕ್‌ ಅನುಪಸ್ಥಿತಿ
ಸದ್ಯ ಭಾರತದ ಮುಂದೆ ಯಾವುದೇ ಸಮಸ್ಯೆಗಳಾಗಲಿ, ಒತ್ತಡವಾಗಲಿ ಇಲ್ಲ. ಪಕ್ಕಾ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಗೈರು ಮಾತ್ರ ಕಾಡುತ್ತಿದೆ. ಅವರು ನ್ಯೂಜಿಲ್ಯಾಂಡ್‌ ಎದುರಿನ ಕಳೆದ ಪಂದ್ಯದಲ್ಲೂ ಆಡಿರಲಿಲ್ಲ. ಇದರಿಂದ ತಂಡದ ಸಮತೋಲನ ತಪ್ಪಿತೇ ಹೊರತು ಫ‌ಲಿತಾಂಶದಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ.

ಪಾಂಡ್ಯ ಬದಲು ಸೂರ್ಯಕುಮಾರ್‌ ಯಾದವ್‌ 6ನೇ ಕ್ರಮಾಂಕದಲ್ಲಿ ಬ್ಯಾಟ್‌ ಹಿಡಿದು ಬರಲಿದ್ದಾರೆ. ಕಿವೀಸ್‌ ವಿರುದ್ಧ ರನೌಟ್‌ ಆಗಿ ಬೇಗನೇ ನಿರ್ಗಮಿಸಿದ್ದ ಸೂರ್ಯ, ಇಂಗ್ಲೆಂಡ್‌ ಎದುರಿನ ಅವಕಾಶವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕಿದೆ. ಹಾಗೆ ನೋಡಹೋದರೆ ಸೂರ್ಯ ಒತ್ತಡಕ್ಕೆ ಸಿಲುಕುವ ಯಾವ ಸನ್ನಿವೇಶವೂ ತಂಡದಲ್ಲಿಲ್ಲ. ರೋಹಿತ್‌, ಗಿಲ್‌, ಕೊಹ್ಲಿ, ಅಯ್ಯರ್‌, ರಾಹುಲ್‌ ಸೇರಿಕೊಂಡು ಆಗಲೇ ತಂಡದ ದೊಡ್ಡ ಮೊತ್ತಕ್ಕೊಂದು ಘನತೆ ತಂದಿರುತ್ತಾರಾದ್ದರಿಂದ ಸೂರ್ಯ ಸೇರಿದಂತೆ ಕೆಳ ಕ್ರಮಾಂಕದ ಆಟಗಾರರು ಇದನ್ನು ಮುಂದುವರಿಸಿಕೊಂಡು ಹೋದರಷ್ಟೇ ಸಾಕು.

Advertisement

ಬೌಲಿಂಗ್‌ ವಿಭಾಗದತ್ತ ಬಂದರೆ ತವರಿನ ಲಕ್ನೋ ಟ್ರ್ಯಾಕ್‌ ಮೇಲೆ ಚೈನಾಮನ್‌ ಬೌಲರ್‌ ಕುಲದೀಪ್‌ ಯಾದವ್‌ ಅಪಾಯಕಾರಿಯಾಗಿ ಗೋಚರಿಸಬಹುದು. ಹಾಗೆಯೇ ಅನುಭವಿ ಶಮಿ, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌ ಅವರ ವೇಗದ ದಾಳಿ ಕೂಡ ಪರಿಪೂರ್ಣ ಮಟ್ಟದಲ್ಲಿದೆ. ಹೀಗಾಗಿ ಇಂಗ್ಲೆಂಡ್‌ ವಿರುದ್ಧ ಭಾರತವೇ ಗೆಲ್ಲುವ ನೆಚ್ಚಿನ ತಂಡವೆನಿಸಿದೆ.

ಉಲ್ಟಾಪಲ್ಟ ಇಂಗ್ಲೆಂಡ್‌
ಇಂಗ್ಲೆಂಡ್‌ ಕೂಟದಲ್ಲೇ ಅತ್ಯಂತ ಬಲಿಷ್ಠ ಬ್ಯಾಟಿಂಗ್‌ ಸರದಿಯನ್ನು ಹೊಂದಿದ್ದ ಕಾರಣ ನೆಚ್ಚಿನ ತಂಡವಾಗಿ ಗೋಚರಿಸಿತ್ತು. ಬಟ್ಲರ್‌, ಬೇರ್‌ಸ್ಟೊ, ಮಲಾನ್‌, ಸ್ಟೋಕ್ಸ್‌, ಬ್ರೂಕ್‌, ಲಿವಿಂಗ್‌ಸ್ಟೋನ್‌… ಎಲ್ಲರೂ ಘಟಾನುಘಟಿ ಬ್ಯಾಟರ್‌ಗಳೇ. ಕನಿಷ್ಠ ಇಬ್ಬರು ಸಿಡಿದು ನಿಂತರೂ ಅಲ್ಲಿ ರನ್‌ ಪ್ರವಾಹಕ್ಕೇನೂ ಕೊರತೆ ಇರುತ್ತಿರಲಿಲ್ಲ. ಆದರೆ ವಿಶ್ವಕಪ್‌ನಲ್ಲಿ ಸಂಭವಿಸಿದ್ದೆಲ್ಲ ಉಲ್ಟಾ. ಎಲ್ಲರೂ ಏಕಕಾಲದಲ್ಲಿ ರನ್‌ ಬರಗಾಲಕ್ಕೆ ಸಿಲುಕಿದ್ದಾರೆ. ಉದ್ಘಾಟನ ಪಂದ್ಯದಲ್ಲಿ ಡೇವನ್‌ ಕಾನ್ವೇ-ರಚಿನ್‌ ರವೀಂದ್ರ ಸೇರಿಕೊಂಡು ನೀಡಿದ ಏಟಿನಿಂದ ಇಂಗ್ಲೆಂಡ್‌ ಇನ್ನೂ ಚೇತರಿಸಿಕೊಂಡಿಲ್ಲ. ಜತೆಗೆ ಭಾರತದ ಟ್ರ್ಯಾಕ್‌ಗಳ ಮರ್ಮವನ್ನು ಅರಿಯುವಲ್ಲೂ ಆಂಗ್ಲರು ವಿಫ‌ಲರಾಗಿದ್ದಾರೆ.
ಇಂಗ್ಲೆಂಡ್‌ ಬೌಲಿಂಗ್‌ನಲ್ಲಿ ಎದು ರಾಳಿಯನ್ನು ಬೆದರಿಸುವ, ನಿಯಂತ್ರಿ ದುವ ಯಾವ ಸಾಮರ್ಥ್ಯವೂ ಇಲ್ಲ. ರೀಸ್‌ ಟಾಪ್‌ಲೀ ಒಂದಿಷ್ಟು ಕಸರತ್ತು ಮಾಡುತ್ತಿದ್ದರು, ಅವರೂ ಈಗ ತಂಡದಿಂದ ಬೇರ್ಪಟ್ಟಿದ್ದಾರೆ. ಇವರ ಬದಲು ಬ್ರೈಡನ್‌ ಕಾರ್ ಬಂದಿದ್ದಾರೆ. ಇಂಗ್ಲೆಂಡ್‌ ಅದೆಂಥ ಪ್ರದರ್ಶನ ನೀಡಲಿದೆಯೋ…

 ಆರಂಭ: ಅ. 2.00
 ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ವಿಶ್ವಕಪ್‌ ಮುಖಾಮುಖಿ
 ಪಂದ್ಯ: 08
ಭಾರತ ಜಯ: 03
 ಇಂಗ್ಲೆಂಡ್‌ ಜಯ: 04
ರದ್ದು: 01
2019ರ ವಿಶ್ವಕಪ್‌ ಫ‌ಲಿತಾಂಶ- ಇಂಗ್ಲೆಂಡ್‌ಗೆ 31 ರನ್‌ ಜಯ

Advertisement

Udayavani is now on Telegram. Click here to join our channel and stay updated with the latest news.

Next