Advertisement
ಚಾಮರಾಜಪೇಟೆಯ ಆಟದ ಮೈದಾನದ ಮಾಲೀಕತ್ವ ಕಂದಾಯ ಇಲಾಖೆಗೆ ಸೇರಿದ್ದು ಎಂದು ಸ್ಪಷ್ಟಪಡಿಸಿ ಬಿಬಿಎಂಪಿ ಪಶ್ಚಿಮ ವಲಯ ಜಂಟಿ ಆಯುಕ್ತ ಶ್ರೀನಿವಾಸ್ ಅವರು ಆ.6ರಂದು ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ಕರ್ನಾಟಕ ವಕ್ಫ್ ಮಂಡಳಿ ಮತ್ತು ಬೆಂಗಳೂರು ಜಿಲ್ಲಾ ವಕ್ಫ್ ಅಧಿಕಾರಿ ಸಲ್ಲಿಸಿರುವ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನ ಗೌಡರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ಈ ಮಧ್ಯಂತರ ಆದೇಶ ನೀಡಿದೆ.
Related Articles
Advertisement
ವಿಚಾರಣೆ ವೇಳೆ ವಕ್ಫ್ ಮಂಡಳಿ ಪರ ಹಿರಿಯ ನ್ಯಾಯವಾದಿ ಜಯಕುಮಾರ್ ಎಸ್. ಪಾಟೀಲ್ ವಾದ ಮಂಡಿಸಿ, ಈದ್ಗಾ ಮೈದಾನವಿರುವ ಸರ್ವೆ ನಂ.40ರಲ್ಲಿನ 2 ಎಕರೆ 5 ಗುಂಟೆ ಜಾಗವನ್ನು ಕರ್ನಾಟಕ ಕೇಂದ್ರೀಯ ಕೇಂದ್ರೀಯ ಮುಸ್ಲಿಂ ಮಂಡಳಿ ಹೆಸರಿಗೆ ಖಾತೆ ಮಾಡಿಕೊಡುವಂತೆ ಬಿಬಿಎಂಪಿಯನ್ನು ಅರ್ಜಿದಾರರು ಕೋರಿದ್ದರು. ಆದರೆ, ಬಿಬಿಎಂಪಿ ಪಶ್ಚಿಮ ವಲಯ ಜಂಟಿ ಆಯುಕ್ತರು ಈದ್ಗಾ ಮೈದಾನವು ಕಂದಾಯ ಭೂಮಿ ಎಂಬುದಾಗಿ ಆದೇಶಿಸಿದ್ದಾರೆ. ಆದರೆ, ಈ ಭೂಮಿ ಮಂಡಳಿಗೆ ಸೇರಿದೆ. ಈ ಕುರಿತು 1965ರ ಜೂ.7ರಂದು ಬೆಂಗಳೂರಿನ ಮೈಸೂರು ವಕ್ಫ್ ಮಂಡಳಿಯೇ ಹೇಳಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಅಲ್ಲದೆ, ಸುಪ್ರೀಂ ಕೋರ್ಟ್ ಈ ಹಿಂದೆಯ ಪ್ರಕರಣ ನಿರ್ಧರಿಸಿದೆ. ಇದು ವಕ್ಫ್ ಜಾಗವಾಗಿದೆ ಎಂಬುವಾಗಿ ವಕ್ಫ್ ಮಂಡಳಿ 1965ರಲ್ಲಿ ಅಧಿಸೂಚನೆ ಸಹ ಹೊರಡಿಸಲಾಗಿದೆ. ಆದರೆ, ಜಂಟಿ ಆಯುಕ್ತರು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಇದು ಕಂದಾಯ ಭೂಮಿ ಎಂಬುದಾಗಿ ಆದೇಶ ಮಾಡಿದ್ದಾರೆ. ವಕ್ಫ್ ಮಂಡಳಿಯ ಅಧಿಸೂಚನೆ ಪ್ರಶ್ನಿಸದೇ ಸರ್ಕಾರವಾಗಲಿ ಅಥವಾ ಬಿಬಿಎಂಪಿಯಾಗಲಿ ಈ ಭೂಮಿ ಮೇಲೆ ಹಕ್ಕು ಸಾಧಿಸಲಾಗದು ಎಂದು ಆಕ್ಷೇಪಿಸಿದರು.
ಸರ್ಕಾರದ ವಾದ ಏನಿತ್ತು?:
ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ, ಈದ್ಗಾ ಮೈದಾನವು ಯಾವುದೇ ವ್ಯಕ್ತಿಗೆ ಸೇರಿಲ್ಲ. ಮೈಸೂರು ಭೂ ಕಂದಾಯ ಕಾಯ್ದೆಯ ಸೆಕ್ಷನ್ 36ರ ಪ್ರಕಾರ ಈ ವಿವಾದಿತ ಜಾಗವು ರಾಜ್ಯ ಸರ್ಕಾರಕ್ಕೆ ಸೇರಿದೆ. 1964ರ ಅಧಿಸೂಚನೆ ಸರ್ಕಾರ ಅಥವಾ ಯಾವುದೇ ವ್ಯಕ್ತಿಯ ವಿರುದ್ಧವಿಲ್ಲ. 1965ರಲ್ಲಿ ಸರ್ಕಾರ ಈ ಜಮೀನ ಸರ್ವೇ ನಡೆಸಿತ್ತು. ಆಗ ಯಾರೊಬ್ಬರೂ ಆಕ್ಷೇಪ ವ್ಯಕ್ತಪಡಿಸಿಲ್ಲ. 57 ವರ್ಷಗಳಿಂದಲೂ ಈ ಆಸ್ತಿ ಸರ್ಕಾರದ ಹೆಸರಿನಲ್ಲಿದೆ. ಹಾಗಾಗಿ, ಬಿಬಿಎಂಪಿಯ ಪಶ್ಚಿಮ ವಲಯದ ಜಂಟಿ ಆಯುಕ್ತರ ಆದೇಶ ಸರಿಯಾಗಿದೆ ಎಂದು ಸಮರ್ಥಿಸಿಕೊಂಡರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ವಿವಾದಿತ ಈದ್ಗಾ ಮೈದಾನದ ಜಾಗವು ವಕ್ಫ್ ಜಾಗವಾಗಿದೆ ಎಂದು 1964ರ ಅಧಿಸೂಚನೆ ಸ್ಪಷ್ಟವಾಗಿ ಹೇಳುತ್ತದೆ. ಮುಸ್ಲಿಂ ಸಂಸ್ಥೆಯ ಹೆಸರಿನಲ್ಲಿ ಖಾತೆಯಿಲ್ಲ ಎಂಬ ಮಾತ್ರಕ್ಕೆ ಅಧಿಸೂಚನೆಯಲ್ಲಿ ನೀಡಲಾಗಿರುವ ಹಕ್ಕು ಹೋಗುವುದಿಲ್ಲ. 1964ರ ಅಧಿಸೂಚನೆ ರಾಜ್ಯ ಸರ್ಕಾರಕ್ಕೆ ಅನ್ವಯಿಸದಿದ್ದರೆ ಅದನ್ನು ಪ್ರಶ್ನಿಸಲು ಸ್ವತಂತ್ರವಿದೆ ಎಂದು ಮೌಖೀಕವಾಗಿ ನುಡಿಯಿತು.
ಹೈಕೋರ್ಟ್ ಹೇಳಿದ್ದೇನು?:
ಅರ್ಜಿ ವಿಲೇವಾರಿಯಾಗುವ ತನಕ ಈದ್ಗಾ ಮೈದಾನವನ್ನು ಆಟಕ್ಕೆ ಮಾತ್ರ ಸೀಮಿತಗೊಳಿಸಬೇಕು. ಈ ಕುರಿತು ಮಧ್ಯಂತರ ಆದೇಶ ಮಾಡಲಾಗುವುದು ಎಂದು ನ್ಯಾಯಪೀಠ ಹೇಳಿದ್ದಕ್ಕೆ, ಮಧ್ಯಪ್ರವೇಶಿಸಿದ ಅಡ್ವೋಕೇಟ್ ಜನರಲ್, ಮೈದಾನವನ್ನು ಅಭಿವೃದಿಪಡಿಸಬೇಕಿದೆ. ಅದಕ್ಕೆ ಅವಕಾಶ ಮಾಡಿಕೊಡಬೇಕು ಎಂದರು.
ಆಟಕ್ಕಲ್ಲದೆ ಬೇರೆ ಯಾವ ಉದ್ದೇಶಕ್ಕೆ ಈ ಜಾಗವನ್ನು ಬಳಸಬೇಕು ಎಂದು ಕೊಂಡಿದ್ದೀರಿ? ಆಟಕ್ಕಾಗಿ ಮಾತ್ರ ಮೈದಾನ ಸೀಮಿತವಾಗಿದ್ದರೆ ಸರ್ಕಾರಕ್ಕೆ ಸಮಸ್ಯೆ ಏನು? ಎಂದು ಪ್ರಶ್ನಿಸಿತಲ್ಲದೆ, ಪ್ರಕರಣದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು. ಆಟಕ್ಕೆ ಹೊರತುಪಡಿಸಿ ಇನ್ಯಾವುದೆ ಉದ್ದೇಶಕ್ಕೆ ಮೈದಾನವನ್ನು ಬಳಸಬಾರದು. ಯಾವುದೇ ಪಕ್ಷಕಾರರು ಬೇರೆ ಯಾವುದೇ ಕಾರಣಕ್ಕೂ ಅಲ್ಲಿಗೆ ಭೇಟಿ ನೀಡುವಂತಿಲ್ಲ. ಯಾವುದೇ ರೀತಿಯ ಅಹಿತಕರ ಘಟನೆಗೆ ಅವಕಾಶ ಮಾಡಿಕೊಡಬಾರದು. ಅರ್ಜಿ ವಿಲೇವಾರಿಯಾದ ನಂತರ ಮೈದಾನವನ್ನು ಅಭಿವೃದ್ಧಿಪಡಿಸಬಹುದು. ಅರ್ಜಿದಾರರಿಗೂ ಇದೇ ರೀತಿಯ ಸೂಚನೆ ನೀಡಲಾಗುವುದು ಎಂದು ಹೈಕೋರ್ಟ್ ಮೌಖೀಕವಾಗಿ ಹೇಳಿತು.
ಅರ್ಜಿ ಏನು?:
ಈದ್ಗಾ ಮೈದಾನದ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಪಶ್ಚಿಮ ವಲಯ ಜಂಟಿ ಆಯುಕ್ತರು 2022ರ ಆ. 6ರಂದು ಮಾಡಿರುವ ಆದೇಶ ರದ್ದುಪಡಿಸಬೇಕು. ಈದ್ಗಾ ಮೈದಾನದ ಭೂಮಿಯನ್ನು ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ ಆಫ್ ಕರ್ನಾಟಕ ಇದ ಹೆಸರಿಗೆ ಖಾತೆ ಮತ್ತು ಕಂದಾಯ ದಾಖಲೆ ನೀಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತರು ಮತ್ತು ಬೆಂಗಳೂರು ಪಶ್ಚಿಮ ವಲಯದ ಜಂಟಿ ಆಯುಕ್ತರಿಗೆ ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಇನ್ನೊಂದು ಹುಬ್ಬಳ್ಳಿ ಈದ್ಗಾ ಮೈದಾನ ಮಾಡಬೇಡಿ:
ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಲು ಯಾವುದೇ ಅನುಮತಿಯ ಅಗತ್ಯವಿಲ್ಲ. ರಮ್ಜಾನ್ ಮತ್ತು ಬಕ್ರೀದ್ ಹಬ್ಬದಂದು ಮಾತ್ರ ಪ್ರಾರ್ಥನೆಗೆ ಅನುಮತಿಸಲಾಗಿದೆ. ಆದರೆ, ಪ್ರತಿ ಶುಕ್ರವಾರದ ಪ್ರಾರ್ಥನೆಗೆ ಅವಕಾಶ ಇರುವುದಿಲ್ಲ. ಸಂಬಂಧಪಡದ ಬೇರೆ ವಿಚಾರಗಳನ್ನು ತರುವುದು ಸಮಂಜಸವಲ್ಲ. ಇದನ್ನುಇನ್ನೊಂದು ಹುಬ್ಬಳ್ಳಿ ಈದ್ಗಾ ಮೈದಾನದ ರೀತಿ ಮಾಡಬೇಡಿ ಎಂದು ಹೈಕೋರ್ಟ್ ಮೌಖೀಕವಾಗಿ ಅಭಿಪ್ರಾಯ ವ್ಯಕ್ತಪಡಿಸಿತು.