ಚಾಮರಾಜನಗರ: ನಗರದ ಕೋವಿಡ್ ಪರೀಕ್ಷಾ ಪ್ರಯೋಗಾಲಯದ ತಂತ್ರಜ್ಞೆಗೆ ಶನಿವಾರ ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಭಾನುವಾರ ಜಿಲ್ಲೆಯ ಸೋಂಕು ಪ್ರಕರಣಗಳ ಫಲಿತಾಂಶ ಲಭ್ಯವಾಗಲಿಲ್ಲ.
ನಗರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕೋವಿಡ್ ಪರೀಕ್ಷೆ ಮಾಡುವ ಪ್ರಯೋಗಾಲಯ ಕಾರ್ಯನಿರ್ವಹಿಸುತ್ತಿದೆ. ಈ ಪ್ರಯೋಗಾಲಯದಲ್ಲಿ ಕರ್ತವ್ಯ ನಿರ್ವಹಿಸುವ ತಂತ್ರಜ್ಞೆಯೋರ್ವರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಪ್ರಯೋಗಾಲಯವನ್ನು ಸ್ಯಾನಿಸೈಸ್ ಮಾಡಿ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
ಹೀಗಾಗಿ ಶನಿವಾರ ಮತ್ತು ಭಾನುವಾರ ಜಿಲ್ಲೆಯ ಗಂಟಲು ದ್ರವ ಮಾದರಿಗಳ ಪರೀಕ್ಷೆ ನಡೆಸಲಾಗಲಿಲ್ಲ. ಶನಿವಾರ ಮತ್ತು ಭಾನುವಾರದ ಮಾದರಿಗಳನ್ನು ಬೆಂಗಳೂರಿಗೆ ಕಳುಹಿಸಿ ಪರೀಕ್ಷೆ ಮಾಡಿಸಲಾಗುವುದು ಎಂದು ತಿಳಿದು ಬಂದಿದೆ.
ಕೋವಿಡ್ ಪ್ರಯೋಗಾಲಯವನ್ನು ಎಷ್ಟು ದಿನಗಳವರೆಗೆ ಮುಚ್ಚಿರಲಾಗುವುದು ಎಂಬುದು ಖಚಿತಗೊಂಡಿಲ್ಲ. ಈ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ನಿರ್ಧಾರಕ್ಕೆ ಬಂದಿಲ್ಲ. ಇದರಿಂದಾಗಿ ಜಿಲ್ಲೆಯ ಶಂಕಿತ ರೋಗಿಗಳ ಗಂಟಲು ದ್ರವ ಮಾದರಿಗಳ ಪರೀಕ್ಷೆ ಹೊರ ಜಿಲ್ಲೆಗೆ ಕಳುಹಿಸಿಕೊಡಬೇಕಾಗಿದೆ. ಹೀಗಾಗಿ ಫಲಿತಾಂಶ ಬರುವುದೂ ಕೂಡ ವಿಳಂಬವಾಗಲಿದೆ.
ಜಿಲ್ಲೆಯಲ್ಲಿ ಕೋವಿಡ್ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲೇ ಪ್ರಯೋಗಾಲಯ ಬಂದ್ ಆಗಿರುವುದು ಆರೋಗ್ಯ ಇಲಾಖೆಗೂ, ಶಂಕಿತರಿಗೂ ಸಮಸ್ಯೆಯಾಗಿದೆ.