ಬೆಂಗಳೂರು: ಚಾಮರಾಜಪೇಟೆ ಆಟದ ಮೈದಾನದಲ್ಲಿ ಎಲ್ಲ ಸಮುದಾಯಗಳ ಹಬ್ಬ, ಪ್ರಾರ್ಥನೆ ಹಾಗೂ ಆಚರಣೆಗಳಿಗೆ ಅನುಮತಿ ನೀಡುವ ಕುರಿತಂತೆ 2006ರಲ್ಲಿಯೇ ಸ್ಥಳೀಯ ಶಾಸಕರು ಹಾಗೂ ಇನ್ನಿತರ ಪ್ರಮುಖರು ಮಾಡಿಕೊಂಡ ಒಪ್ಪಂದವನ್ನು ಈವರೆಗೆ ಜಾರಿಗೆ ತಂದಿಲ್ಲ.
ಮೈದಾನ ಬಳಕೆ ಕುರಿತಂತೆ 2006ರ ಸೆಪ್ಟಂಬರ್‌ನಲ್ಲಿ ಚಾಮರಾಜಪೇಟೆಯ ಅಂದಿನ ಎಸಿಪಿ ಹಾಗೂ ಶಾಸಕ ಜಮೀರ್ ಅಹ್ಮದ್, ಪ್ರಮುಖರಾದ ಪ್ರಮೀಳಾ ನೇಸರ್ಗಿ, ಆರ್.ವಿ. ದೇವರಾಜ್ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಈ ವೇಳೆ ಮೈದಾನವನ್ನು ಯಾವುದೇ ರೀತಿಯಲ್ಲಿ ಮಾರ್ಪಡಿಸದೆ ಯಥಾಸ್ಥಿತಿಯಲ್ಲಿ ಇರಿಸುವಂತೆ ನೋಡಿಕೊಳ್ಳಬೇಕು. ಅಲ್ಲಿ ನಿರ್ಮಿಸಲಾದ ಶೌಚಗೃಹವನ್ನು ಸಾರ್ವಜನಿಕ ಬಳಕೆಗೆ ಮುಕ್ತವಾಗಿಸಬೇಕು. ಮುಖ್ಯವಾಗಿ ಮೈದಾನದಲ್ಲಿ ದಸರಾ, ಶಿವರಾತ್ರಿ, ಗಣೇಶೋತ್ಸವ, ಕರ್ನಾಟಕ ರಾಜ್ಯೋತ್ಸವ, ಕ್ರೀಡಾಕೂಟ ಮುಂತಾದ ಚಟುವಟಿಕೆಗಳನ್ನು ನಡೆಸಲು ಅನುಮತಿಸಬೇಕು ಎಂದು ಒಪ್ಪಂದ ಮಾಡಿಕೊಳ್ಳಲಾಗಿತ್ತು.
ಅದಾದ ಬಳಿಕ ಪೊಲೀಸ್ ಇಲಾಖೆ ಮತ್ತು ಬಿಬಿಎಂಪಿ ಮುಸ್ಲಿಂ ಸಮುದಾಯದವರಿಗೆ ವರ್ಷದಲ್ಲಿ ಎರಡು ಬಾರಿ ಪ್ರಾರ್ಥನೆ ಸಲ್ಲಿಸಲು ಮಾತ್ರ ಅವಕಾಶ ನೀಡುತ್ತಿವೆ. ಬೇರೆ ಯಾವುದೇ ಸಮಾರಂಭ, ಆಚರಣೆಗೂ ಅನುಮತಿ ನೀಡುತ್ತಿಲ್ಲ. ಇದು 2006ರಲ್ಲಿ ಸ್ಥಳೀಯ ಮುಖಂಡರು ಮಾಡಿಕೊಂಡ ಒಪ್ಪಂದದ ಉಲ್ಲಂಘನೆಯಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈ ಬಾರಿ 3 ಅರ್ಜಿ ಸಲ್ಲಿಕೆ :
ಚಾಮರಾಜಪೇಟೆಯ ಆಟದ ಮೈದಾನದಲ್ಲಿ ಸಭೆ- ಸಮಾರಂಭ ನಡೆಸಲು ಈ ಬಾರಿ 3 ಅರ್ಜಿಗಳು ಸಲ್ಲಿಕೆಯಾಗಿವೆ. ಶ್ರೀರಾಮಸೇನೆಯಿಂದ ಜೂ. 21ರಂದು ಯೋಗ ದಿನಾಚರಣೆ, ವಿಶ್ವ ಸಾಧನಾ ಪರಿಷತ್ ವತಿಯಿಂದ ಆ. 14-15ರಂದು ಸ್ವಾತಂತ್ರ್ಯ ದಿನಾಚರಣೆ ಹಾಗೂ ವಂದೇ ಮಾತರಂ ಸಮಾಜ ಸಂಸ್ಥೆಯಿಂದ ಆ. 15ರಂದು ಸ್ವಾತಂತ್ರ್ಯ ದಿನ ಆಚರಣೆ ಅವಕಾಶ ನೀಡುವಂತೆ ಮನವಿ ಪತ್ರ ಸಲ್ಲಿಸಲಾಗಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಮತ್ತು ಬಿಬಿಎಂಪಿ ಸ್ಥಳೀಯ ಅಧಿಕಾರಿಗಳು ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಬಿಬಿಎಂಪಿ ಆಡಳಿತ ವಿಭಾಗದ ವಿಶೇಷ ಆಯುಕ್ತ ರಂಗಪ್ಪ ತಿಳಿಸಿದ್ದಾರೆ.