ಚಾಮರಾಜನಗರ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿ ವಿಚಾರಣಾ ಕೈದಿಯಾಗಿದ್ದಾಗ ಮೃತಪಟ್ಟರೂ, ಬಾಲಕಿಯ ಭವಿಷ್ಯದ ದೃಷ್ಟಿಯಿಂದ ಆಕೆಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ 5 ಲಕ್ಷ ರೂ. ಪರಿಹಾರ ಮತ್ತು ರಾಜ್ಯ ಸರ್ಕಾರದಿಂದ ಉನ್ನತ ಶಿಕ್ಷಣ, ಪದವಿ, ಸ್ನಾತಕೋತ್ತರ ಪದವಿ, ಪಿಎಚ್ ಡಿ ಅಥವಾ ಐಎಎಸ್ ಶಿಕ್ಷಣಕ್ಕೆ ಬೇಕಾದ ಸೌಲಭ್ಯವನ್ನು ಕಲ್ಪಿಸಬೇಕೆಂದು ನಗರದ ಜಿಲ್ಲಾ ಮತ್ತು ಸೆಷನ್ಸ್ ಪೋಕ್ಸೋ ನ್ಯಾಯಾಲಯ ಸೋಮವಾರ (ಫೆ.15) ತೀರ್ಪು ನೀಡಿದೆ.
ಯಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರ ನಿವಾಸಿ 65 ವರ್ಷದ ರಂಗಶೆಟ್ಟಿ ಎಂಬ ವ್ಯಕ್ತಿ, 2019ರ ಸೆಪ್ಟೆಂಬರ್ 19ರಂದು ಸಂಜೆ 6.15ರರ ವೇಳೆ, ತನ್ನ ಗ್ರಾಮದ 11 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ. ಆ ಬಾಲಕಿ ತನ್ನ ಮನೆಯಾಚೆ ಮೂತ್ರ ವಿಸರ್ಜನೆಗೆ ಹೋಗಿದ್ದಾಗ ಈ ಕೃತ್ಯ ಮಾಡಿದ್ದ. ಯಳಂದೂರು ಠಾಣೆ ಪೊಲೀಸರು ಆರೋಪಿ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಇದನ್ನೂ ಓದಿ:ಮಾಜಿ ರಾಜ್ಯಸಭಾ ಸದಸ್ಯ, ಗವರ್ನರ್, ನ್ಯಾ. ರಾಮ ಜೋಯಿಸ್ ಇನ್ನಿಲ್ಲ
ವಿಚಾರಣೆ ಮುಗಿಯುವ ಮುನ್ನವೇ ಆರೋಪಿ ನ್ಯಾಯಾಂಗ ಬಂಧನಲ್ಲಿ ಮೃತಪಟ್ಟಿದ್ದ. ತನ್ನ ಮೇಲೆ ಅತ್ಯಾಚಾರ ನಡೆದಿರುವುದನ್ನು ನೊಂದ ಬಾಲಕಿ ನ್ಯಾಯಾಲಯದಲ್ಲಿ ಸಾಕ್ಷ್ಯಾಧಾರಗಳ ಸಮೇತ ಸಾಕ್ಷಿ ನುಡಿದಿದ್ದಳು. ಆರೋಪ ಸಾಬೀತಾದ ಕಾರಣ, ಅಪ್ರಾಪ್ತ ಬಾಲಕಿಗೆ ಅನ್ಯಾಯವಾಗಬಾರದೆಂಬ ಸಾಮಾಜಿಕ ಕಳಕಳಿಯಿಂದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸದಾಶಿವ ಸುಲ್ತಾನಪುರಿ ಅವರು ಕಾನೂನು ಸೇವಾ ಪ್ರಾಧಿಕಾರದಿಂದ 5 ಲಕ್ಷ ರೂ. ಪರಿಹಾರಕ್ಕೆ ಆದೇಶಿಸಿದ್ದಾರೆ.
ಇದನ್ನೂ ಓದಿ: ಟೂಲ್‌ಕಿಟ್ ರಚಿಸಿದ್ದೇ ದಿಶಾ, ನಿಕಿತಾ, ಶಂತನು! ಟೆಲಿಗ್ರಾಂ ಮೂಲಕ ಥನ್‌ಬರ್ಗ್‌ಗೆ ರವಾನೆ
ಈ 5 ಲಕ್ಷ ರೂ.ಗಳನ್ನು ಬ್ಯಾಂಕಿನಲ್ಲಿ ನಿಗದಿತ ಠೇವಣಿ ಇಟ್ಟು ಅದರಿಂದ ಬರುವ ಬಡ್ಡಿಯನ್ನು ಬಾಲಕಿ ಪ್ರಾಪ್ತಳಾಗುವವರೆಗೆ ವಿನಿಯೋಗಿಸಬಹುದು. ಅವಳ ಎಲ್ಲ ರೀತಿಯ ಶಿಕ್ಷಣದ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಬೇಕು ಎಂದು ಸೋಮವಾರ (ಫೆ.15) ಆದೇಶಿಸಿತು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಯೋಗೇಶ್ ವಾದ ಮಂಡಿಸಿದ್ದರು.