Advertisement

ಚಾಮರಾಜನಗರ: ಸರಳ ದಸರಾಕ್ಕೆ ವಿಧ್ಯುಕ್ತ ಚಾಲನೆ

04:46 PM Oct 17, 2020 | keerthan |

ಚಾಮರಾಜನಗರ: ಮೈಸೂರು ದಸರಾ ಅಂಗವಾಗಿ, ಜಿಲ್ಲೆಯಲ್ಲೂ ಆಚರಿಸುವ ಸರಳ ಸಾಂಪ್ರದಾಯಿಕ ದಸರಾ ಕಾರ್ಯಕ್ರಮಗಳಿಗೆ ನಗರದ ಚಾಮರಾಜೇಶ್ವರ ದೇವಾಲಯದಲ್ಲಿ ಶನಿವಾರ ವಿಧ್ಯುಕ್ತ ಚಾಲನೆ ನೀಡಲಾಯಿತು.

Advertisement

ಶಾಸಕ ಪುಟ್ಟರಂಗಶೆಟ್ಟಿ, ಜಿ.ಪಂ. ಅಧ್ಯಕ್ಷೆ ಅಶ್ವಿನಿ, ಉಪಾಧ್ಯಕ್ಷೆ ಶಶಿಕಲಾ, ಸದಸ್ಯ ಕೆರೆಹಳ್ಳಿ ನವೀನ್, ಚುಡಾ ಅಧ್ಯಕ್ಷ ಕುಲಗಾಣ ಶಾಂತಮೂರ್ತಿ, ತಾ.ಪಂ. ಉಪಾಧ್ಯಕ್ಷ ರವೀಶ್, ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ, ಜಿ.ಪಂ. ಸಿಇಒ ಹರ್ಷಲ್ ಬೋಯರ್ ನಾರಾಯಣರಾವ್ ಅವರ ಉಪಸ್ಥಿತಿಯಲ್ಲಿ ಚಾಮರಾಜೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ, ದೇವಾಲಯದ ಪ್ರಾಂಗಣದಲ್ಲಿ ದೀಪ ಬೆಳಗುವ ಮೂಲಕ ದಸರಾ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.

ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸದಾಶಿವ ಸುಲ್ತಾನ್‌ಪುರಿ, ಹಿರಿಯ ಸಿವಿಲ್ ನ್ಯಾಯಾಧೀಶ ರಮೇಶ್, ಎಡಿಸಿ ಆನಂದ್, ಎಎಸ್ಪಿ ಅನಿತಾ, ನಗರಸಭೆ ಆಯುಕ್ತ ರಾಜಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಗಿರೀಶ್, ದಸರಾ ಮಹೋತ್ಸವ ಸಲಹಾ ಸಮಿತಿ ಸದಸ್ಯ ಉಮ್ಮತ್ತೂರು ಇಂದುಶೇಖರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ನಂತರ ದೇವಾಲಯದ ಪ್ರಾಂಗಣದಲ್ಲಿರುವ ಚಾಮುಂಡೇಶ್ವರಿ, ಕೆಂಪನಂಜಾಂಬ ದೇವಿಗೂ ಗಣ್ಯರು ಪೂಜೆ ಸಲ್ಲಿಸಿದರು. ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಂಗಳ ವಾದ್ಯ ಮೊಳಗಿದವು.  ಗೊರವರ ಕುಣಿತ ಪ್ರದರ್ಶನ ನೀಡಿ ಕಲಾವಿದರು ಗಮನ ಸೆಳೆದರು.

ಬಳಿಕ ದೇವಾಲಯದ ಆವರಣದಲ್ಲೇ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಹಾಕಲಾಗಿರುವ ವೇದಿಕೆಯ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, 2103ರಲ್ಲಿ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಚಾಮರಾಜನಗರದಲ್ಲೂ ದಸರಾ ಕಾರ್ಯಕ್ರಮಗಳನ್ನು ಆರಂಭಿಸಲಾಯಿತು.  ಆ ಸಾಲಿನಿಂದ ಪ್ರತಿ ವರ್ಷ ಬೃಹತ್ ವೇದಿಕೆ ಹಾಕಿ ಪ್ರತಿನಿತ್ಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿತ್ತು. ಕಳೆದ ವರ್ಷ ಬರದ ಕಾರಣ ಸರಳವಾಗಿ ಆಚರಿಸಲಾಗಿತ್ತು. ಈ ವರ್ಷ ಕೋವಿಡ್ ಕಾರಣದಿಂದ ಇನ್ನಷ್ಟು ಸರಳವಾಗಿ  ದಸರಾ ಆಚರಿಸಲಾಗುತ್ತಿದೆ ಎಂದರು.

Advertisement

ರಾಜ್ಯ ಸರ್ಕಾರ ಚಾಮರಾಜನಗರ ದಸರಾ ಆಚರಣೆಗೆ 36 ಲಕ್ಷ ರೂ. ಬಿಡುಗಡೆ ಮಾಡಿದೆ. ದೇವಾಲಯದ ಒಳಗೆ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಲು 100 ಜನರಿಗೆ ಅವಕಾಶ ನೀಡಲಾಗಿದೆ. ಜನರು ಮನೆಯಲ್ಲೇ ಕುಳಿತು ಸಾಮಾಜಿಕ ಜಾಲತಾಣ, ಸ್ಥಳೀಯ ಕೇಬಲ್ ಟಿವಿ ಮೂಲಕ ಕಾರ್ಯಕ್ರಮ ವೀಕ್ಷಿಸಿ ಎಂದು ಶಾಸಕರು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಶಿಕಲಾ ಸೋಮಲಿಂಗಪ್ಪ ಮಾತನಾಡಿ, ನಾಡಹಬ್ಬ ದಸರಾ ದೇಶದಲ್ಲಿ ಮಾತ್ರವಲ್ಲ, ಅಂತಾರಾಷ್ಟ್ರೀಯವಾಗಿ ಪ್ರಖ್ಯಾತಿ ಪಡೆದಿದೆ. ಜಾತಿ ಭೇದ ಇಲ್ಲದೇ ಹಲವಾರು ವರ್ಷಗಳಿಂದ ಮೈಸೂರು ದಸರಾವನ್ನು ಆಚರಿಸಲಾಗುತ್ತಿದೆ. ಚಾಮರಾಜನಗರವು ಮೈಸೂರು ಜಿಲ್ಲೆಯ ಅವಿಭಾಜ್ಯ ಅಂಗ. ಮೈಸೂರು ಸಂಸ್ಥಾನದ ಮಹಾರಾಜ ಚಾಮರಾಜ ಒಡೆಯರ್ ಅವರು, ಚಾಮರಾಜನಗರದಲ್ಲಿ ಜನಿಸಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next