Advertisement
ಚಾಮರಾಜನಗರ ಜಿಲ್ಲೆಯ ಪಾಲಿಗೆ 2021 ಮರೆಯಲಾಗದ ವರ್ಷ. ಘೋರ ದುರ್ಘಟನೆಯೊಂದು ಕರಿನೆರಳಿನಂತೆ ಸದಾ ಕಾಡುವ ವರ್ಷ. ಕೋವಿಡ್ 2ನೇ ಅಲೆಯ ಸಂದರ್ಭದಲ್ಲಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಆಕ್ಸಿಜನ್ ದೊರಕದೇ 35ಕ್ಕೂ ಹೆಚ್ಚು ಮಂದಿ ಮೃತಪಟ್ಟರು. ಆಕ್ಸಿಜನ್ ದುರಂತ ನಡೆದ ದಿನ ಹೊರತುಪಡಿಸಿ ಅನಂತರದ ಎರಡು ಮೂರು ದಿನಗಳ ಸಾವನ್ನೂ ಲೆಕ್ಕಕ್ಕೆ ತೆಗೆದುಕೊಂಡರೆ ಸಾವಿನ ಸಂಖ್ಯೆ ಇನ್ನೂ ಹೆಚ್ಚುತ್ತದೆ. ಹೀಗಾಗಿ ಜಿಲ್ಲೆಯ ಇತಿಹಾಸದಲ್ಲಿ, ಒಂದೇ ದುರ್ಘಟನೆಯಲ್ಲಿ ಅತಿ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡ ವರ್ಷವೂ 2021 ಆಗಿದೆ. 2021, ಮೇ 2ರಂದು ರಾತ್ರಿ 10.30ರಲ್ಲಿ ಕೋವಿಡ್ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಕೊರತೆ ಉಂಟಾಗಿ, ಐಸಿಯು, ವೆಂಟಿಲೇಟರ್‌ನಲ್ಲಿ ವೈದ್ಯಕೀಯ ಆಮ್ಲಜನಕ ಪಡೆಯುತ್ತಿದ್ದ 35ಕ್ಕೂ ಹೆಚ್ಚು ಮಂದಿ ಮೃತಪಟ್ಟರು. ಅಂದು ರಾತ್ರಿಯ ವೇಳೆಗೆ ವೈದ್ಯಕೀಯ ಆಮ್ಲಜನಕ ಮುಗಿದು ಹೋಗಲಿದೆ ಎಂಬ ಸಂಗತಿ ಆಸ್ಪತ್ರೆಯ ಅಧಿಕಾರಿಗಳಿಗೆ, ಜಿಲ್ಲಾಡಳಿತಕ್ಕೆ ತಿಳಿದಿತ್ತು. ಅಷ್ಟರೊಳಗೆ ಮೈಸೂರಿನಿಂದ ವೈದ್ಯಕೀಯ ಆಮ್ಲಜನಕ ಸಿಲಿಂಡರ್ ತರಿಸುವ ಬಗ್ಗೆ ಜಿಲ್ಲಾಡಳಿತ ಗಮನವನ್ನೇ ಹರಿಸಲಿಲ್ಲ. ತತ್ಪರಿಣಾಮ 35 ಕ್ಕೂ ಮಂದಿ ಕೋವಿಡ್ ರೋಗಿಗಳು, ಆಮ್ಲಜನಕ ಕೊರತೆಯಿಂದಾಗಿ ಮೃತಪಟ್ಟರು. ವಿಪರ್ಯಾ ಸವೆಂದರೆ ಇದುವರೆಗೂ ಈ ದುರ್ಘಟನೆಗೆ ಹೊಣೆ ಮಾಡಿ ಯಾರ ವಿರುದ್ಧವೂ ಸರ್ಕಾರ ಕ್ರಮ ಕೈಗೊಳ್ಳಲಿಲ್ಲ! ನ್ಯಾಯಾಂಗ ತನಿಖೆ ಆದೇಶಿಸಿತು. ಅದರ ವರದಿ ಇನ್ನೂ ಬಂದಿಲ್ಲ. ಇನ್ನು, ಕೋವಿಡ್ ಮೊದಲನೇ ಅಲೆಗಿಂತ ಎರಡನೇ ಅಲೆ ಜಿಲ್ಲೆಯನ್ನು ಹೆಚ್ಚು ಬಾಧಿಸಿತು.
ಜಿಲ್ಲೆಯಲ್ಲಿ ಒಟ್ಟು 32,677 ಮಂದಿಗೆ ಕೋವಿಡ್ ದೃಢಪಟ್ಟಿದೆ. ಇವರಲ್ಲಿ 32,129 ಮಂದಿ ಗುಣಮುಖರಾಗಿದ್ದಾರೆ. ರಾಷ್ಟ್ರಪತಿ ಭೇಟಿ: ಜಿಲ್ಲೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅ.7ರಂದು ಭೇಟಿ ನೀಡಿ ಸರ್ಕಾರಿ ವೈದ್ಯಕೀಯ ಕಾಲೇಜು ಬೋಧನಾ ಆಸ್ಪತ್ರೆ ಉದ್ಘಾಟಿಸಿದ್ದು ಜಿಲ್ಲೆಯ ಈ ವರ್ಷದ
ಪ್ರಮುಖ ವಿದ್ಯಮಾನ. ತದನಂತರ ಜಿಲ್ಲಾ ಕೇಂದ್ರದ ಹೃದಯ ಭಾಗದಲ್ಲಿದ್ದ ಜಿಲ್ಲಾಸ್ಪತ್ರೆಯ ಎಲ್ಲ ಚಟುವಟಿಕೆಗಳೂ ಚಾ.ನಗರದಿಂದ 6 ಕಿ.ಮೀ. ದೂರದ ಎಡಬೆಟ್ಟದ ಬಳಿಯ ನೂತನ
ವೈದ್ಯಕೀಯ ಕಾಲೇಜು ಸಂಕೀರ್ಣಕ್ಕೆ ವರ್ಗಾವಣೆ ಯಾಗಿವೆ.
Related Articles
Advertisement
– ಕೆ.ಎಸ್.ಬನಶಂಕರ ಆರಾಧ್ಯ