Advertisement
ಗಣಿಯ ಮ್ಯಾನೇಜರ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೀರಳದ ನೂರುದ್ದೀನ್ ಟಿಪ್ಪರ್ ಲಾರಿ ಚಾಲಕನಾಗಿದ್ದು, 3 ಗಂಟೆ ಕಾರ್ಯಾಚರಣೆ ನಡೆಸಿ ಟಿಪ್ಪರ್ ನಲ್ಲಿ ಸಿಲುಕಿದ್ದ ಈತನನ್ನು ರಕ್ಷಣೆ ಮಾಡಲಾಗಿದೆ. ಅಶ್ರಫ್, ಫ್ರಾನ್ಸಿಸ್ ಸೇರಿದಂತೆ 6 ಮಂದಿಯನ್ನು ರಕ್ಷಿಸಿ ಚಿಕಿತ್ಸೆಗಾಗಿ ಚಾಮರಾಜನಗರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.7 ಮಂದಿ ಕಾರ್ಮಿಕರನ್ನು ರಕ್ಷಿಸಲಾಗಿದೆ. ಅವರೆಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಾರಾಷ್ಟ್ರ ಮೂಲದ ಕಾರ್ಮಿಕರಾದ ಇಮ್ರಾನ್ ಮತ್ತು ಬಬ್ಲು ಎಂಬುವರು ನಾಪತ್ತೆಯಾಗಿದ್ದಾರೆ. ಆದರೆ ಇವರು ಕುಸಿತದಿಂದ ಗುಡ್ಡದ ಕೆಳಗೆ ಸಿಲುಕಿದ್ದಾರೋ ಅಥವಾ ಘಟನಾ ಸ್ಥಳದಿಂದ ಪರಾರಿಯಾಗಿದ್ದಾರೋ ಎಂಬುದು ಖಚಿತ ಪಟ್ಟಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ಉದಯವಾಣಿಗೆ ತಿಳಿಸಿದರು.
Related Articles
Advertisement
ಗುಡ್ಡ ಕುಸಿತಕ್ಕೆ ಕಾರಣ: ಮಡಹಳ್ಳಿ ಗ್ರಾಮದ ಸರ್ವೇ ನಂ-192ರಲ್ಲಿ ಸುಮಾರು 10 ಜನರಿಗೆ ಗಣಿಗಾರಿಕೆಗೆ ಅವಕಾಶ ನೀಡಿದ್ದು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಅನುಮತಿ ಪಡೆದು ಗಣಿಗಾರಿಕೆ ನಡೆಸುತ್ತಿದ್ದರು. ಆದರೆ ಗಣಿಗಾರಿಕೆಗೆ ಅನುಮತಿ ಪಡೆದವರು ನೆರೆಯ ರಾಜ್ಯ ಕೇರಳದವರಿಗೆ ಸಬ್ ಲೀಸ್ ನೀಡಿದ್ದರಿಂದ ಇವರು ಹೆಚ್ಚಿನ ಹಣದಾಸೆಗಾಗಿ ನಿಗದಿಯಾದ ಜಾಗದಲ್ಲಿ ಅಕ್ರಮವಾಗಿ ಅಧಿಕ ಆಳದಲ್ಲಿ ಅರ್ಧ ಚಂದ್ರಾಕಾರದಲ್ಲಿ ಗಣಿಗಾರಿಕೆ ಮಾಡಿದ್ದರಿಂದ ಮೇಲಿನ ಭಾರ ಹೆಚ್ಚಾದ ಹಿನ್ನೆಲೆ ಗುಡ್ಡ ಕುಸಿದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಸ್ಥಳಕ್ಕೆ ಐಜಿಪಿ ಪ್ರವೀಣ್ ಮಧುಕರ್ ಪವಾರ್, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ಡಿವೈಎಸ್‌ಪಿ ಪ್ರಿಯದರ್ಶಿಣಿ ಸಾಣೆ ಕೊಪ್ಪ, ಸುಂದರ್ ರಾಜ್, ತಹಸೀಲ್ದಾರ್ ರವಿಶಂಕರ್ ಸೇರಿದಂತೆ ಅಗ್ನಿ ಶಾಮಕದಳದ ಸಿಬ್ಬಂದಿ ಹಾಗೂ ಆರೋಗ್ಯಾಧಿಕಾರಿಗಳು ಭೇಟಿ ನೀಡಿದ್ದರು.
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ಪ್ರತಿಕ್ರಿಯೆ ನೀಡಿ ಸದ್ಯಕ್ಕೆ ಏಳು ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. ಸಾವು ನೋವಿನ ಬಗ್ಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ. ಮಹೇಂದ್ರಪ್ಪ ಎಂಬವರ ಹೆಸರಿನಲ್ಲಿ ಗಣಿಗಾರಿಕೆ ಪರವಾನಗಿ ಇದ್ದು ಲೀಗಲ್ ಆಗಿ ನಡೆಯುತ್ತಿದೆ. ಮಹಾರಾಷ್ಟ್ರ ಮೂಲದ ಕಾರ್ಮಿಕರಾದ ಇಮ್ರಾನ್ ಮತ್ತು ಬಬ್ಲು ಎಂಬುವರು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ, ಕ್ವಾರಿಯ ಮ್ಯಾನೇಜರ್ ನವೀದ್ ಎಂಬಾತನನ್ನು ಬಂಧಿಸಲಾಗಿದೆ. ಬಿಳಿಕಲ್ಲುಗಳನ್ನು ತೆಗೆಯಲು ಬ್ಲಾಸ್‌ಟ್ ಮಾಡಿದ ವೇಳೆ ಹಂತಹಂತವಾಗಿ ಗುಡ್ಡ ಕುಸಿಯಲು ಪ್ರಾರಂಭಿಸಿದ್ದರಿಂದ ಎಲ್ಲರೂ ಓಡಿಹೋಗಿದ್ದಾರೆ ಎಂದು ಕಾರ್ಮಿಕರು ಹೇಳುತ್ತಿದ್ದಾರೆ ಎಂದು ತಿಳಿಸಿದರು. ಗ್ರಾಮಸ್ಥರ ಪ್ರತಿಭಟನೆ: ಮಡಹಳ್ಳಿ ಗ್ರಾಮದಲ್ಲಿ ಗುಡ್ಡ ಕುಸಿದ ಸ್ಥಳಕ್ಕೆ ಶಾಸಕ ಸಿ.ಎಸ್.ನಿರಂಜನಕುಮಾರ್ ಬಂದಿಲ್ಲ ಎಂದು ಸ್ಥಳಿಯರು ನಿಂದನೆ ಮಾಡುತ್ತಿದ್ದಾಗ ಶಾಸಕರ ಬೆಂಬಲಿಗರು, ಶಾಸಕರ ಬಗ್ಗೆ ಅನವಶ್ಯಕವಾಗಿ ಮಾತನಾಡಬೇಡಿ ಎಂದು ನಿಂದನೆ ಮಾಡುತ್ತಿದ್ದವರ ಬಳಿ ವಾಗ್ವಾದಕ್ಕೆ ಇಳಿದಾಗ ಗ್ರಾಮಸ್ಥರು ರೊಚ್ಚಿಗೆದ್ದಾಗ ತಳ್ಳಾಟ ನೂಕಾಟ ಆಯಿತು. ಈ ಸಂದರ್ಭದಲ್ಲಿ ಗ್ರಾಮಸ್ಥರು ಅಧಿಕಾರಿಗಳ ಮುಂದೆಯೇ ಪ್ರತಿಭಟನೆಗೆ ಮುಂದಾಗಿ, ಗಣಿಗಾರಿಕೆ ನಡೆಯುತ್ತಿರುವುದರಿಂದ ಮನೆಗಳೆಲ್ಲ ಬಿರುಕು ಬಿಡುತ್ತಿವೆ. ಜಮೀನುಗಳಲ್ಲಿ ಕೃಷಿ ಚಟುವಟಿಕೆ ಮಾಡಲು ಆಗುತ್ತಿಲ್ಲ, ರಸ್ತೆಗಳೆಲ್ಲ ಹಾಳಾಗಿದೆ ಎಂದು ಪ್ರತಿಭಟನೆಗೆ ಇಳಿದರು. ಈ ಸಂದರ್ಭದಲ್ಲಿ ಪೊಲೀಸರು ಸಮಾಧಾನ ಪಡಿಸಿದರು. ಗಣಿಗಾರಿಕೆ ನಡೆಯುತ್ತಿದ್ದ ಬಗ್ಗೆ ಮಾಹಿತಿ ಇದೆ. ಯಾವ ಕಾರಣದಿಂದ ಗುಡ್ಡ ಕುಸಿದಿದೆ ಎಂದು ವಿವಿಧ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ ನಂತರ ತಿಳಿಯುತ್ತದೆ. ಏಳು ಜನರನ್ನು ರಕ್ಷಣೆ ಮಾಡಲಾಗಿದೆ. ಸಾವಿನ ಬಗ್ಗೆ ನಿಖರ ಮಾಹಿತಿ ಇಲ್ಲ.
-ಚಾರುಲತಾ ಸೋಮಲ್, ಜಿಲ್ಲಾಧಿಕಾರಿ