ಚಾಮರಾಜನಗರ : ಅಪ್ರಾಪ್ತ ಬಾಲಕಿಯನ್ನು ಬಲವಂತವಾಗಿ ಮದುವೆ ಮಾಡಿಕೊಂಡು ದೈಹಿಕ ಸಂಪರ್ಕ ಬೆಳೆಸಿ ಗರ್ಭಿಣಿಯಾಗಲು ಕಾರಣನಾದ ವ್ಯಕ್ತಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್‌ಸ್ ನ್ಯಾಯಾಲಯ 10 ವರ್ಷ ಸಾದಾ ಸಜೆ ಹಾಗೂ 10 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದೆ.
ಉಮ್ಮತ್ತೂರು ಗ್ರಾಮದ ಚಂದ್ರಶೇಖರ್ (29) ಅಲಿಯಾಸ್ ಚಂದ್ರ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಈತನಿಗೆ ಮೊದಲೇ ಮದುವೆಯಾಗಿ ಮೂವರು ಮಕ್ಕಳಿದ್ದಾರೆ. ಕೂಲಿ ಕೆಲಸಕ್ಕೆ ಹೋಗುತ್ತಿದ್ದಾಗ ಪರವೂರಿನ 17 ವರ್ಷ ವಯಸ್ಸಿನ ಅಪ್ತಾಪ್ತ ಬಾಲಕಿಯನ್ನು ಪರಿಚಯ ಮಾಡಿಕೊಂಡು ಕಳೆದ 2015ರ ನವೆಂಬರ್ 2ರಂದು ಬೆಂಗಳೂರಿಗೆ ಕರೆದುಕೊಂಡು ಹೋಗಿ ಸುಳ್ಳು ಹೇಳಿ ಬಲವಂತವಾಗಿ ಬಾಲಕಿಯ ಕುತ್ತಿಗೆಗೆ ಅರಿಶಿನದ ದಾರ ಕಟ್ಟಿ ಮದುವೆ ಮಾಡಿಕೊಂಡಿದ್ದ. ಅಲ್ಲದೇ ಬಾಲಕಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ಗರ್ಭಿಣಿಯಾಗಲು ಕಾರಣನಾಗಿದ್ದ.
ಸಾಕ್ಷ್ಯಾಧಾರಗಳು ಹಾಗೂ ವೈದ್ಯಾಧಿಕಾರಿಗಳ ಪರೀಕ್ಷಾ ವರದಿಗಳಿಂದ ಆರೋಪ ಧೃಡಪಟ್ಟಿತ್ತು. ಸಂತೇಮರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನ್ಯಾಯಾಲಯವು ವಿಚಾರಣೆ ನಡೆಸಿ ಕೃತ್ಯವೆಸಗಿರುವುದು ಸಾಬೀತಾದ ಕಾರಣ ದಂಡ ಸಂಹಿತೆ ಕಲಂ 376 ಮತ್ತು ಪೋಕ್ಸೊ ಕಾಯ್ದೆ ಕಲಂ 4ರ ಅನ್ವಯ 10 ವರ್ಷಗಳ ಸಾದಾ ಸಜೆ, 10 ಸಾವಿರ ರೂ ದಂಡ ಹಾಗೂ ದಂಡ ತೆರಲು ತಪ್ಪಿದ್ದಲ್ಲಿ ಮತ್ತೆ ಒಂದು ತಿಂಗಳು ಸಜೆ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕಲಂ 9ರ ಅನ್ವಯ ಒಂದು ತಿಂಗಳ ಕಠಿಣ ಶಿಕ್ಷೆ 5 ಸಾವಿರ ರೂ ದಂಡ. ದಂಡ ತೆರಲು ತಪ್ಪಿದ್ದಲ್ಲಿ ಒಂದು ತಿಂಗಳ ಸಾದಾ ಸಜೆ ಹಾಗೂ ಪೋಕ್ಸೊ ಕಾಯ್ದೆ ಐಪಿಸಿ ಕಲಂ 495, 496ರನ್ವಯ 3 ವರ್ಷ ಶಿಕ್ಷೆ, 5 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದೆ.
ದಂಡ ತೆರಲು ತಪ್ಪಿದ್ದಲ್ಲಿ ಮತ್ತೆ ಒಂದು ತಿಂಗಳು ಶಿಕ್ಷೆ. ಕಲಂ 12ರ ಅನ್ವಯ ಎರಡು ವರ್ಷ ಶಿಕ್ಷೆ 5 ಸಾವಿರ ರೂ ದಂಡ. ತಪ್ಪಿದ್ದಲ್ಲಿ ಒಂದು ತಿಂಗಳು ಸಜೆ ಶಿಕ್ಷೆಯನ್ನು ಏಕಕಾಲದಲ್ಲಿ ಅನುಭವಿಸತಕ್ಕದ್ದು ಎಂದು ತೀರ್ಪು ನೀಡಿದೆ. ಕಾನೂನು ಸೇವಾ ಪ್ರಾಧಿಕಾರದಿಂದ 20 ಸಾವಿರ ರೂ ಹಣವನ್ನು ನೊಂದ ಬಾಲಕಿಗೆ ಪರಿಹಾರ ರೂಪದಲ್ಲಿ ನೀಡುವಂತೆ ಪ್ರಧಾನ ಜಿಲ್ಲಾ ಮತ್ತು ಸೆಷನ್‌ಸ್ ನ್ಯಾಯಾಧೀಶರಾದ ಬಿ.ಎಸ್. ಭಾರತಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೆ. ಯೋಗೇಶ್ ಅವರು ವಾದ ಮಂಡಿಸಿದ್ದರು.
ಇದನ್ನೂ ಓದಿ : ರಾಜ್ಯದಲ್ಲಿ 12,009 ಹೊಸ ಕೋವಿಡ್ ಪ್ರಕರಣ ಪತ್ತೆ : 50 ಮಂದಿ ಬಲಿ