ಚಾಮರಾಜನಗರ: ಏಳು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ನಗರದ ಮಕ್ಕಳ ಸ್ನೇಹಿ ಹಾಗೂ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್‌ಸ್ ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ.
ಕೊಳ್ಳೇಗಾಲ ತಾಲೂಕಿನ ಗ್ರಾಮದ ನಿವಾಸಿ 24 ವರ್ಷದ ಸತೀಶ (ಕ್ವಾಟ್ಲೆ ಸತೀಶ) ಶಿಕ್ಷೆಗೆ ಗುರಿಯಾದ ಅಪರಾಧಿ.
2021ರ ಜುಲೈ 25ರಂದು ಈ ಘಟನೆ ನಡೆದಿತ್ತು. ಪ್ರಕರಣದ ಆರೋಪಿ ಸತೀಶ ರಾತ್ರಿ 8.30ರ ಸಮಯದಲ್ಲಿ 7 ವರ್ಷದ ಅಪ್ರಾಪ್ತ ಬಾಲಕಿ ಅಂಗಡಿಗೆ ಹೋಗಿ ವಾಪಸಾಗುತ್ತಿದ್ಧಾಗ, ನಿರ್ಜನ ಪ್ರದೇಶಕ್ಕೆ ಎತ್ತಿಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್ ಶಿವರಾಜ್ ಆರ್ ಮುಧೋಳ್ ಪ್ರಕರಣದ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಮಕ್ಕಳ ಸ್ನೇಹಿ ಹಾಗೂ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್‌ಸ್ ನ್ಯಾಯಾಧೀಶರಾದ ಎ.ಸಿ. ನಿಶಾರಾಣಿ ಅವರು ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಕೃತ್ಯವೆಸಗಿದ ಸತೀಶನಿಗೆ ಪೋಕ್ಸೋ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ ಕಲಂ ಅಡಿಯಲ್ಲಿ 20 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ್ದಾರೆ. ಅಲ್ಲದೇ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ನೊಂದ ಬಾಲಕಿಗೆ 2 ಲಕ್ಷ ರೂ. ಪರಿಹಾರ ಧನ ನೀಡಬೇಕೆಂದು ಆದೇಶಿಸಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೆ. ಯೋಗೇಶ್ ವಾದಮಂಡಿಸಿದ್ದರು.
ಇದನ್ನೂ ಓದಿ: ನೀತಿ ಸಂಹಿತೆ ಉಲ್ಲಂಘನೆ: ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಎಫ್ ಐಆರ್