ಚಾಮರಾಜನಗರ : ಜಿಲ್ಲೆಯಲ್ಲಿ ಇಂದು ಕೋವಿಡ್‌ನಿಂದ ಓರ್ವ ಮಹಿಳೆ ಮೃತಪಟ್ಟಿದ್ದಾರೆ. 33 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. 37 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು 211 ಸಕ್ರಿಯ ಪ್ರಕರಣಗಳಿವೆ.
ಚಾಮರಾಜನಗರ ಸಮೀಪದ ಜಾಲಹಳ್ಳಿ ಹುಂಡಿ ಗ್ರಾಮದ 48 ವರ್ಷದ ಮಹಿಳೆ ಮೃತಪಟ್ಟವರು. ಇವರು ಜು.26ರಂದು ನಗರದ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಜು.29ರಂದು ತಡರಾತ್ರಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಯವರ ಕಚೇರಿ ಪ್ರಕಟಣೆ ತಿಳಿಸಿದೆ. ಜಿಲ್ಲೆಯಲ್ಲಿ ಕೋವಿಡ್ ಸಾವಿನ ಸಂಖ್ಯೆ 6ಕ್ಕೇರಿದೆ.
ಪಿಎಫ್‌ಐ ಕಾರ್ಯಕರ್ತರಿಂದ ಅಂತ್ಯಕ್ರಿಯೆ: ಮೃತ ಮಹಿಳೆಯ ಅಂತ್ಯಕ್ರಿಯೆಯನ್ನು ನಗರದ ಹೊರ ವಲಯದ ನಿಗದಿತ ಜಾಗದಲ್ಲಿ ಕೋವಿಡ್ ಶಿಷ್ಟಾಚಾರಗಳ ಪ್ರಕಾರ ನೆರವೇರಿಸಲಾಯಿತು. ಪಿಎಫ್‌ಐ ಕಾರ್ಯಕರ್ತರು ಪಿಪಿಐ ಕಿಟ್ ಧರಿಸಿ ಶವವನ್ನು ಹೂಳುವ ಮೂಲಕ ಅಂತ್ಯಕ್ರಿಯೆ ನಡೆಸಿದರು. ಮೃತ ಮಹಿಳೆಯ ಕುಟುಂಬದವರು ದೂರದಿಂದಲೇ ಪೂಜೆ ಸಲ್ಲಿಸಿದರು. ಮೃತರ ಕುಟುಂಬದವರು ನೀಡಿದ ಹೂವಿನ ಹಾರವನ್ನು ಪಿಎಫ್‌ಐ ಕಾರ್ಯಕರ್ತರೇ ಶವದ ಮೇಲಿರಿಸಿ ಅಂತಿಮ ನಮನ ಸಲ್ಲಿಸಿದರು.
ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 624ಕ್ಕೇರಿದೆ. ಇವರಲ್ಲಿ 406 ಮಂದಿ ಗುಣಮುಖರಾಗಿದ್ದಾರೆ. 5 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊಳ್ಳೇಗಾಲ ತಾಲೂಕಿನಿಂದ 18, ಚಾಮರಾಜನಗರ ತಾಲೂಕಿನಿಂದ 05, ಗುಂಡ್ಲುಪೇಟೆ ತಾಲೂಕಿನಿಂದ 04, ಯಳಂದೂರು ತಾಲೂಕಿನಿಂದ 5 ಹಾಗೂ ಹನೂರು ತಾಲೂಕಿನಿಂದ 1 ಪ್ರಕರಣ ವರದಿಯಾಗಿದೆ. ಇಂದು 598 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು.
ಪ್ರತ್ಯೇಕವಾಗಿ ಸಿಇಟಿ ಪರೀಕ್ಷೆ ಬರೆದ ವಿದ್ಯಾರ್ಥಿನಿ: ತಂದೆ ತಾಯಿಗೆ ಕೋವಿಡ್ ಪಾಸಿಟಿವ್ ಇದ್ದ ಕಾರಣ, ಸಿಇಟಿ ಪರೀಕ್ಷೆಯನ್ನು ವಿದ್ಯಾರ್ಥಿನಿಯೋರ್ವರು ಪ್ರತ್ಯೇಕವಾಗಿ ಬರೆದರು. ಈ ವಿದ್ಯಾರ್ಥಿನಿಗೆ ನಗರದ ವೈದ್ಯಕೀಯ ಕಾಲೇಜಿನ ವಿಶೇಷ ಕೊಠಡಿಯಲ್ಲಿ ಪ್ರತ್ಯೇಕವಾಗಿ ಪರೀಕ್ಷೆ ಬರೆಸಲಾಯಿತು.