Advertisement

Karnataka Poll 2023: “ಕೈ’ಗೆ ಕೃಷ್ಣರಾಜ, ಚಾಮರಾಜ ಕ್ಷೇತ್ರದ ಟಿಕೆಟ್‌ ಕಗ್ಗಂಟು

03:49 PM Apr 05, 2023 | Team Udayavani |

ಮೈಸೂರು: ಜಿಲ್ಲೆಯಲ್ಲಿ 8 ಕ್ಷೇತ್ರಗಳಿಗೆ ಕಾಂಗ್ರೆಸ್‌ ಟಿಕೆಟ್‌ ಫೈನಲ್‌ ಮಾಡಿದ್ದು, 3 ಕ್ಷೇತ್ರ ಬಾಕಿ ಉಳಿದಿದೆ. ಈ ಪೈಕಿ ಕೃಷ್ಣರಾಜ ಮತ್ತು ಚಾಮರಾಜ ಕ್ಷೇತ್ರದ ಟಿಕೆಟ್‌ ಹಂಚಿಕೆ ವರಿಷ್ಠರಿಗೆ ಕಗ್ಗಂಟಾಗಿ ಪರಿಣಮಿಸಿದೆ.

Advertisement

ಶತಾಯಗತಾಯ ಜಿಲ್ಲೆಯಲ್ಲಿ ಅತಿ ಹೆಚ್ಚು ಶಾಸಕರನ್ನು ಗೆಲ್ಲಿಸಿಕೊಂಡು ಅಧಿಕಾರದ ಕನಸು ಕಾಣುತ್ತಿರುವ ಕಾಂಗ್ರೆಸ್‌, 11 ಕ್ಷೇತ್ರಗಳ ಪೈಕಿ ಈಗಾಗಲೇ 08 ಕ್ಷೇತ್ರಗಳಿಗೆ ಟಿಕೆಟ್‌ ಹಂಚಿಕೆ ಮಾಡಿದೆ. ಆದರೆ, ನಗರ ವ್ಯಾಪ್ತಿಯ ಕೃಷ್ಣರಾಜ, ಚಾಮರಾಜ ಕ್ಷೇತ್ರಕ್ಕೆ ಟಿಕೆಟ್‌ ಫೈನಲ್‌ ಕಗ್ಗಂಟಾಗಿದ್ದು, 2ನೇ ಪಟ್ಟಿಯಲ್ಲಿ ಯಾರಿಗೆ ಮಣೆಹಾಕುತ್ತಾರೆ ಎಂಬದನ್ನು ಕಾದು ನೋಡಬೇಕಿದೆ.

ಚಾಮರಾಜದಲ್ಲಿ ಬಂಡಾಯದ ಬಿಸಿ: ಒಕ್ಕಲಿಗ ಸಮು ದಾಯದ ಬಾಹುಳ್ಯವಿರುವ ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಮಾಜಿ ಶಾಸಕ ವಾಸು ಮತ್ತು ಮುಖಂಡ ಕೆ.ಹರೀಶ್‌ಗೌಡ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಇವರಿಬ್ಬರಲ್ಲಿ ಒಬ್ಬರಿಗೆ ಟಿಕೆಟ್‌ ನೀಡಿದರೆ ಬಂಡಾಯ ಉಲ್ಬಣವಾಗುವ ಸಾಧ್ಯತೆಗಳಿವೆ. ಎಐಸಿಸಿ ಸದಸ್ಯರಾಗಿರುವ ವಾಸು ಕ್ಷೇತ್ರದಲ್ಲಿ 4 ಬಾರಿ ಸ್ಪರ್ಧಿಸಿ ಒಮ್ಮೆ ಗೆದ್ದಿದ್ದಾರೆ. ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ಅವರ ರಾಜಕೀಯ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇತ್ತ ಮತ್ತೋರ್ವ ಮುಖಂಡ ಕೆ.ಹರೀಶ್‌ಗೌಡ ಕೂಡ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಕಳೆದೆರಡು ವರ್ಷದಿಂದ ಸಿದ್ಧತೆ ನಡೆಸಿದ್ದಾರೆ.

ಚಾಮರಾಜ ಕ್ಷೇತ್ರದಲ್ಲಿ ಗೆಲ್ಲ ಬೇಕೆಂದು ಕಳೆದ 12 ವರ್ಷದಿಂದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿ ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಸೇರ್ಪಡೆಗೊಂಡ ಹರೀಶ್‌ಗೌಡರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯರ ಬೆಂಬಲವಿದೆ. ಇತ್ತ ಪಕ್ಷದ ವರಿಷ್ಠರು ಯಾರ ಕೈಹಿಡಿಯಲಿದ್ದಾರೆ ಎಂಬು ದು ಕ್ಷೇತ್ರದ ಜನರಲ್ಲಿ ಕುತೂಹಲ ಮೂಡಿಸಿದೆ.

ಕ್ಷೇತ್ರದಲ್ಲಿ ಮೂವರು ಆಕಾಂಕ್ಷಿಗಳು: ಇತ್ತ ಬ್ರಾಹ್ಮಣ, ಲಿಂಗಾಯತ ಸಮುದಾಯದ ಮತಗಳೇ ಹೆಚ್ಚಿರುವ ಕೃಷ್ಣರಾಜ ಕ್ಷೇತ್ರದಲ್ಲಿ ಮಾಜಿ ಶಾಸಕ ಕುರುಬ ಸಮಾಜದ ಎಂ.ಕೆ.ಸೋಮಶೇಖರ್‌, ಲಿಂಗಾಯತ ಸಮುದಾ ಯದ ಮುಖಂಡ ಪ್ರದೀಪ್‌ ಕುಮಾರ್‌, ಮುಡಾ ಮಾಜಿ ಅಧ್ಯಕ್ಷ ಮೋಹನ್‌ ಕುಮಾರ್‌ರ ಪುತ್ರ ಬ್ರಾಹ್ಮಣ ಸಮುದಾಯದ ಯುವ ಮುಖಂಡ ಎನ್‌. ಎಂ.ನವೀನ್‌ ಕುಮಾರ್‌ ಕಾಂಗ್ರೆಸ್‌ನಿಂದ ಕಣಕ್ಕಿಳಿ ಯಲು ಪೈಪೋಟಿ ನಡೆಸಿದ್ದಾರೆ.

Advertisement

ಇನ್ನಿಲ್ಲದ ಕಸರತ್ತು: ಈ ಕ್ಷೇತ್ರದಲ್ಲಿ 2004, 2013ರ ಚುನಾವಣೆಯಲ್ಲಿ ಗೆದ್ದು 2 ಬಾರಿ ಶಾಸಕರಾಗಿದ್ದ ಎಂ.ಕೆ. ಸೋಮಶೇಖರ್‌ 2018ರ ಚುನಾವಣೆಯಲ್ಲಿ ಪರಾಭವಗೊಂಡಿದ್ದು,ಮತ್ತೆ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಟಿಕೆಟ್‌ ಗಾಗಿ ತೀವ್ರ ಪೈಟೋಟಿ ನಡೆಸಿದ್ದಾರೆ. ಹಾಗೆಯೇ ಕಳೆದ ಕೆಲ ವರ್ಷಗಳಿಂದ ಕ್ಷೇತ್ರ ಪರ್ಯಟನೆ ನಡೆಸುತ್ತಿರುವ ನವೀನ್‌ ಕುಮಾರ್‌, ಪ್ರದೀಪ್‌ ಕುಮಾರ್‌ ಅವರೂ ಕಾಂಗ್ರೆಸ್‌ ಟಿಕೆಟ್‌ಗಾಗಿ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಸೋಮಶೇಖರ್‌ರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲವಿದೆ. ಪಕ್ಷವು ಹೊಸಬರಿಗೆ ಮಣೆ ಹಾಕಲಿ ದೆಯೇ? ಎಂಬ ಪ್ರಶ್ನೆಯೂ ಇದೆ. ಒಟ್ಟಾರೆ ಕೆ.ಆರ್‌. ಕ್ಷೇತ್ರದಲ್ಲಿ ಈ ಮೂವರಲ್ಲಿ ಯಾರಿಗೇ ಟಿಕೆಟ್‌ ನೀಡಿ ದರೂ ಕಾಂಗ್ರೆಸ್‌ಗೆ ಬಂಡಾಯದ ಬಿಸಿ ತಟ್ಟಲಿದೆ.

ಲಾಭ ಮಾಡಿಕೊಳ್ಳಲು ಮುಂದಾದ ಜೆಡಿಎಸ್‌: ಈ ಮೂವರು ಆಕಾಂಕ್ಷಿಗಳ ಟಿಕೆಟ್‌ ಕಚ್ಚಾಟವನ್ನೇ ಲಾಭ ಮಾಡಿಕೊಳ್ಳಲು ಕಾದು ಕುಳಿತಿರುವ ಜೆಡಿಎಸ್‌, ಕಾಂಗ್ರೆಸ್‌ನಿಂದ ಟಿಕೆಟ್‌ ವಂಚಿತರಾಗುವ ಪ್ರಬಲ ಆಕಾಂಕ್ಷಿ ಯನ್ನು ತನ್ನತ್ತ ಸೆಳೆದು ಅವರಿಗೆ ಟಿಕೆಟ್‌ ನೀಡುವ ಯೋಚನೆಯಲ್ಲಿದೆ ಎಂದು ಹೇಳಲಾಗಿದೆ.

ಚಾಮುಂಡೇಶ್ವರಿ ಸೋಲಿನ ಪ್ರತ್ಯುತ್ತರಕ್ಕೆ ಕಾರ್ಯತಂತ್ರ : ಮಾಜಿ ಸಿಎಂ ಸಿದ್ದರಾಮಯ್ಯ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಂಡಿದ್ದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಶಾಸಕ ಜಿ.ಟಿ.ದೇವೇಗೌಡರಿಗೆ ಪ್ರಬಲ ಪ್ರತಿರೋಧವೊಡ್ಡುವ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ಕಾರ್ಯತಂತ್ರ ರೂಪಿಸಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದ್ದು, ಕಳೆದ 2008ರ ಚುನಾವಣೆಯಿಂದಲೂ ಸ್ಪರ್ಧಿಸಲು ಜಿಪಂ ಮಾಜಿ ಅಧ್ಯಕ್ಷ ಮರೀಗೌಡ ಕಣ್ಣಿಟ್ಟಿದ್ದಾರೆ. ಜತೆಗೆ ಮತ್ತೋರ್ವ ಜಿಪಂ ಮಾಜಿ ಅಧ್ಯಕ್ಷ ಕೂರ್ಗಳ್ಳಿ ಮಹದೇವ್‌, ಜಿಪಂ ಮಾಜಿ ಸದಸ್ಯ ರಾಕೇಶ್‌ ಪಾಪಣ್ಣ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್‌ ಕುಮಾರ್‌ ಅವರು ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಹಾಗೆಯೇ ಕೆಲ ತಿಂಗಳ ಹಿಂದೆ ಶಾಸಕ ಜಿ.ಟಿ.ದೇವೇಗೌಡ ಅವರ ವಿರುದ್ಧ ಸಿಡಿದೆದ್ದು, ಜೆಡಿಎಸ್‌ಗೆ ಗುಡ್‌ಬೈ ಹೇಳಿ ಕಾಂಗ್ರೆಸ್‌ ಪಕ್ಷವನ್ನು ಸೇರಿದ್ದ ಮೈಮುಲ್‌ ಮಾಜಿ ಅಧ್ಯಕ್ಷರಾದ ಮಾವಿನಹಳ್ಳಿ ಸಿದ್ದೇಗೌಡರೂ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಈ ಮಧ್ಯೆ ಮಾವಿನಹಳ್ಳಿ ಸಿದ್ದೇಗೌಡರಿಗೆ ಟಿಕೆಟ್‌ ಸಿಗುವ ಸಾಧ್ಯತೆ ಹೆಚ್ಚಾಗಿದೆ.

-ಸತೀಶ್‌ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next