ಚಾಮರಾಜನಗರ: ರೈತರು ತಮ್ಮ ಜಮೀನಿನಲ್ಲಿ ಬೆಳೆದ ತೇಗದ ಮರಗಳನ್ನು ಕಟಾವು ಮಾಡಲು ಅರಣ್ಯ ಇಲಾಖೆ ಅಧಿಕಾರಿಗಳು ತೊಂದರೆ ನೀಡುತ್ತಿದ್ದಾರೆ ಎಂದುಆರೋಪಿಸಿ ಜಿಲ್ಲಾ ರೈತಸಂಘದಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಸುಲ್ತಾನ್ ಷರೀಫ್ ವೃತ್ತದಲ್ಲಿರುವ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಮುಂಭಾಗ ಧರಣಿ ನಡೆಸಲಾಯಿತು. ಈ ವೇಳೆ ಪ್ರತಿಭಟನಾಕಾರರು, ನಮ್ಮ ಮರ ನಮ್ಮ ಹಕ್ಕು, ನಮ್ಮ ಜಮೀನಿನಲ್ಲಿರುವ ಮರ ಕಡಿಯಲು ಅವಕಾಶ ನೀಡದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಧಿಕ್ಕಾರ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ಹೊರಹಾಕಿದರು.
ಈ ವೇಳೆ ರೈತಸಂಘದ ರಾಜ್ಯ ಕಾರ್ಯದರ್ಶಿ ಡಾ. ಗುರುಪ್ರಸಾದ್ ಮಾತನಾಡಿ, ರೈತರು ತಮ್ಮ ಜಮೀನಿನಲ್ಲಿ ಬೆಳೆದ ತೇಗದ ಮರಗಳನ್ನು ಕಟಾವು ಮಾಡಲು ಅನುಮತಿ ನೀಡುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಾರೆ. ತೇಗದ ಮರವನ್ನು ತಮ್ಮ ಸ್ವಂತ ಬಳಕೆಗೆ, ಮನೆ ಕಟ್ಟಲು ಬಳಸುವ ಸಲುವಾಗಿ ಕಟಾವು ಲೈಸೆನ್ಸ್‌ಗಾಗಿ ಅರ್ಜಿ ಸಲ್ಲಿಸಿದರೆ 2-3 ವರ್ಷ ಕಾದರೂ ಲೈಸೆನ್ಸ್ ನೀಡುವುದಿಲ್ಲ. ರೈತರು ತಮ್ಮ ಮರ ಕಡಿಯಲು ಅರಣ್ಯ ಇಲಾಖೆ ಕಚೇರಿಗೆ ವರ್ಷಗಟ್ಟಲೆ ಅಲೆಯಬೇಕಾಗಿದೆ. ನಮ್ಮ ಜಮೀನಲ್ಲಿರುವ ತೇಗದ ಮರಗಳನ್ನು ಕಟಾವು ಮಾಡಲು ಕಟ್ಟಿಂಗ್ ಆರ್ಡರ್, ಟ್ರಾನ್ಸ್‌ಪೋರ್ಟ್ ಆರ್ಡರ್ ಎಂದು ಇಲ್ಲ ಸಲ್ಲದ ಕಾನೂನುಗಳನ್ನು ನಮ್ಮ ಜಿಲ್ಲೆಯಲ್ಲಿ ಮಾತ್ರ ಹೇರುತ್ತಿದ್ದಾರೆ. ರೈತರು ತಮ್ಮ ಜಮೀನುಗಳಲ್ಲಿ ನ್ಯಾಯಯುತವಾಗಿ ಬೆಳೆದ ಮರಗಳನ್ನು ಕಡಿಯಲು ಅವಕಾಶ ನೀಡುತ್ತಿಲ್ಲ. ಈ ವಿಳಂಬ ನೀತಿಯಿಂದಾಗಿ ರೈತರು ರೋಸಿ ಹೋಗಿದ್ದಾರೆ. ಆದ್ದರಿಂದ ಅಧಿಕಾರಿಗಳು ತಕ್ಷಣವೇ ಇದೆಲ್ಲವನ್ನು ನಿಲ್ಲಿಸಿ ಮರಗಳನ್ನು ಕಟಾವು ಮಾಡಿ, ಬಳಕೆ ಮಾಡಲು ಅವಕಾಶ ಕಲ್ಪಿಸಿಕೊಡಬೇಕು. ಇಲ್ಲವೇ ಈ ವಿಷಯವಾಗಿ ನಾವು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಕಾಡು ಪ್ರಾಣಿಗಳ ಹಾವಳಿಯು ಹೆಚ್ಚಾಗಿದ್ದು, ಬೆಳೆ ನಷ್ಟವನ್ನು ಸಹ ನೀಡುತ್ತಿಲ್ಲ. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಹುಲಿ- ಚಿರತೆಗಳ ದಾಳಿಯೂ ಸಹ ನಡೆಯುತ್ತಿದ್ದು, ಇದರ ಬಗ್ಗೆ ಮಾಹಿತಿ ನೀಡಿದರೂ ಸಹ ಸ್ಥಳಕ್ಕೆ ಅರಣ್ಯ ಇಲಾಖೆಯವರು ಬಂದು ಪರಿಶೀಲನೆ ನಡೆಸಿ, ಬೋನ್ ಇಡಲು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಸಾಮಿಲ್‌ಗಳಿಗಾಗಿ ರೈತರಿಂದ ಕಡಿಮೆ ಬೆಲೆಗೆ ಖರೀದಿ ಮಾಡುವ ಮಾರಾಟಗಾರರು ಅರಣ್ಯ ಇಲಾಖಾಧಿಕಾರಿಗಳಿಗೆ ಲಂಚ ನೀಡಿ ರಾತ್ರೋರಾತ್ರಿ ಮರ ಕಡಿದು ಸಾಮಿಲ್ ಗಳಿಗೆ ಸಾಗಿಸುತ್ತಾರೆ. ಅರಣ್ಯ ಇಲಾಖೆಯ ನಾನಾ ಕಾನೂನುಗಳಿಗೆ ಹೆದರಿ ಕೆಲವು ರೈತರು ಮಾರಾಟಗಾರರಿಗೆ ಮರ ಕೊಟ್ಟುಬಿಡುತ್ತಾರೆ. ಇವರು ಎಲ್ಲಾ ಸಾಮಿಲ್‌ಗಳಲ್ಲೂ ಸಿಸಿ ಟಿವಿ ಅಳವಡಿಸಿ ಪರಿಶೀಲನೆ ಮಾಡುತ್ತೀದ್ದೇವೆ ಎಂಬುವುದು ಶುದ್ಧ ಸುಳ್ಳು ಎಂದು ಆರೋಪಿಸಿದರು.
ರೈತಸಂಘದ ಜಿಲ್ಲಾಧ್ಯಕ್ಷ ಮಾಡ್ರಹಳ್ಳಿ ಮಹದೇವಪ್ಪ, ಮುಖಂಡರಾದ ಮಹೇಶ್, ಗುರು, ಷಣ್ಮುಖಸ್ವಾಮಿ, ಮಣಿ, ಶ್ರೀನಿವಾಸ್, ರಘು, ಬಸವರಾಜು ಇದ್ದರು.