ಚಾಮರಾಜನಗರ: ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಶಿಶು ಯೋಜನಾ ಅಭಿವೃದ್ಧಿ ಅಧಿಕಾರಿ (ಸಿಡಿಪಿಓ) ಹೆಳವರಹುಂಡಿಯ ಮದುವೆ ಸಮಾರಂಭದಲ್ಲಿ ಹಾಜರಿರಲಿಲ್ಲ. ಆದರೆ ಮದುವೆಯಲ್ಲಿ ಊಟ ಮಾಡಿದ್ದಾರೆಂದು ಖಚಿವಾಗಿದ್ದು ಆ ಸಾಲಿನಲ್ಲಿ ಊಟ ಮಾಡಿದ ನಗರದ ಇಬ್ಬರನ್ನು ಕ್ವಾರಂಟೈನ್ ನಲ್ಲಿರಿಸಲಾಗಿದೆ.
ಈ ಮಾಹಿತಿ ಶನಿವಾರ ಬೆಳಕಿಗೆ ಬಂದು, ಈ ಪ್ರಕರಣ ಮತ್ತೊಮ್ಮೆ ತಿರುವು ಪಡೆದಿದೆ.
ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹೆಳವರಹುಂಡಿಯಲ್ಲಿ ನಡೆದಿದ್ದ ಮದುವೆಯ ವಧು ಚಾ.ನಗರದ ಸೋಮವಾರಪೇಟೆಯವರು. ಕೋವಿಡ್ ಸೋಂಕಿತ, ಮಂಡ್ಯ ಜಿಲ್ಲೆಯ ಸಿಡಿಪಿಓ ಹೆಳವರಹುಂಡಿಯ ತಮ್ಮ ಅಜ್ಜಿ ಮನೆಗೆ ಬಂದಿದ್ದರು. ಪಕ್ಕದ ಮನೆಯಲ್ಲೇ ಮದುವೆ ನಡೆಯುತ್ತಿತ್ತು. ಪಕ್ಕದ ಮನೆಯಾದ್ದರಿಂದ ಸಿಡಿಪಿಓ ಅವರ ಅಜ್ಜಿ ಮನೆಯವರು ಊಟಕ್ಕೆ ತೆರಳಿದ್ದರು. ಅವರ ಜೊತೆ ಸೋಂಕಿತ ಸಿಡಿಪಿಓ ಸಹ ಊಟಕ್ಕೆ ಕುಳಿತಿದ್ದರು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಂ.ಸಿ. ರವಿ ತಿಳಿಸಿದರು.
ಈ ವಿಷಯ ಶನಿವಾರ ಮಧ್ಯಾಹ್ನ ತಿಳಿದುಬಂದಿತು. ಮದುವೆಗೆ ಹೋಗಿದ್ದ ಸೋಮವಾರಪೇಟೆಯವರು ಈ ಮಾಹಿತಿ ನೀಡಿದರು. ನಂತರ ಸಿಡಿಪಿಓ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲಾಯಿತು. ಊಟ ಮಾಡಿದ್ದು ನಿಜ. ಆದರೆ ಮದುವೆ ಮನೆಗೆ ಹೋಗಲಿಲ್ಲ. ವಧೂವರರ ಬಳಿ ತೆರಳಿ ಶುಭಾಶಯ ಕೋರಿಲ್ಲ ಎಂದು ಸಿಡಿಪಿಓ ತಿಳಿಸಿದರು ಎಂದು ಡಿಎಚ್‌ಓ ಹೇಳಿದರು.
ಸಿಡಿಪಿಓ ಊಟಕ್ಕೆ ಕುಳಿತಿದ್ದ ಸಾಲಿನಲ್ಲಿ ಊಟ ಮಾಡಿದವರ ಪೈಕಿ ಇಬ್ಬರು ಚಾ.ನಗರದ ಸೋಮವಾರಪೇಟೆಯವರು. ಆ ಇಬ್ಬರು ಪುರುಷರನ್ನು ನಗರದ ಕ್ವಾರಂಟೈನ್ ಕೇಂದ್ರದಲ್ಲಿ ಕ್ವಾರಂಟೈನ್‌ನಲ್ಲಿರಿಸಲಾಗಿದೆ ಎಂದು ಅವರು ತಿಳಿಸಿದರು.
ಸೋಂಕಿತ ಸಿಡಿಪಿಓ, ಮದುವೆಗೆ ಹೋಗಿಲ್ಲ ಎಂದು ಶುಕ್ರವಾರ ಜಿಲ್ಲಾಧಿಕಾರಿ ಡಾ. ರವಿ ಸ್ಪಷ್ಟನೆ ನೀಡಿದ್ದರು. ಮದುವೆ ಮನೆಯಲ್ಲಿ ಊಟಕ್ಕೆಂದು ಹಾಕಲಾಗಿದ್ದ ಶಾಮಿಯಾನದಲ್ಲಿ ಕುಳಿತು ಸಿಡಿಪಿಓ ಊಟ ಮಾಡಿದ್ದು, ಆ ವಿಷಯವನ್ನು ಸಿಡಿಪಿಓ ಮುಚ್ಚಿಟ್ಟಿದ್ದರು. ಶನಿವಾರ ಆತ ಊಟ ಮಾಡುವ ಫೋಟೋ ನೋಡಿದ ಮದುವೆ ಮನೆಯವರು ಈ ವಿಷಯವನ್ನು ಆರೋಗ್ಯ ಇಲಾಖೆಯ ಗಮನಕ್ಕೆ ತಂದರು. ಆ ನಂತರ ಆರೋಗ್ಯಾಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.