Advertisement

ಚಾಮರಾಜನಗರ: ಮಾದರಿ ನೀತಿ ಸಂಹಿತೆ ಜಾರಿ

07:43 AM Mar 12, 2019 | Team Udayavani |

ಚಾಮರಾಜನಗರ: ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣೆಗೆ ಮಾ.19ರಂದು ಅಧಿಸೂಚನೆ ಹೊರಡಿಸಲಾಗುವುದು. ಅಭ್ಯರ್ಥಿಗಳು ಅಂದಿನಿಂದ ನಾಮಪತ್ರ ಸಲ್ಲಿಸಬಹುದು. ನಾಮಪತ್ರ ಹಿಂತೆಗೆದುಕೊಳ್ಳಲು ಮಾ. 29 ಕೊನೆಯ ದಿನಾಂಕವಾಗಿದ್ದು, ಚುನಾವಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ತಕ್ಷಣದಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೆ ಆದೇಶಿಸಲಾಗಿದೆ  ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ತಿಳಿಸಿದರು.

Advertisement

ನಗರದ ಜಿಲ್ಲಾಡಳಿತ ಭವನದ ಜಿಪಂ ಸ್ಥಾಯಿಸಮಿತಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಸೂಚಿತ ದಿನಾಂಕದಿಂದ ಮಾ. 26ರವರೆಗೆ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯೊಳಗೆ ನಾಮಪತ್ರ ಸಲ್ಲಿಸಬಹುದು ಎಂದರು.

ನಾಮ ನಿರ್ದೇಶನ ಪತ್ರಗಳ ಪರಿಶೀಲನೆ ಮಾ. 27ರಂದು ನಡೆಯಲಿದೆ. ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಮಾ. 29 ಕೊನೆಯ ದಿನ. ಏಪ್ರಿಲ್‌ 18ರಂದು ಮತದಾನ ನಡೆಯಲಿದ್ದು, ಮೇ 23ರಂದು ಮತ ಎಣಿಕೆ ನಡೆಯಲಿದೆ. ಮೇ 27ರಂದು ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದರು.

8 ವಿಧಾನಸಭಾ ಕ್ಷೇತ್ರಗಳು: ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ, ನಂಜನಗೂಡು, ವರುಣಾ, ತಿ.ನರಸೀಪುರ ವಿಧಾನಸಭಾ ಕ್ಷೇತ್ರಗಳು, ಚಾಮರಾಜನಗರ ಜಿಲ್ಲೆಯ ಹನೂರು, ಕೊಳ್ಳೇಗಾಲ, ಚಾಮರಾಜನಗರ, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳು ಒಳಪಡುತ್ತವೆ. ಚಾ.ನಗರ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 16,67,044 ಮತದಾರರಿದ್ದಾರೆ. ಈ ಪೈಕಿ 8,34,392 ಪುರುಷ ಹಾಗೂ 8,32,541 ಮಹಿಳಾ ಮತದಾರರು ಹಾಗೂ ಇತರೆ 111 ಮತದಾರರಿದ್ದಾರೆ.

ಭಾವಚಿತ್ರವಿರುವ ಮತದಾರರ ಪಟ್ಟಿ: ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ 8 ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ  ಭಾವಚಿತ್ರವಿರುವ ಮತದಾರರ ಪಟ್ಟಿಯನ್ನು ಉಪಯೋಗಿಸಲಾಗುತ್ತಿದೆ. ಮತದಾರರ ಪಟ್ಟಿಯಲ್ಲಿ ಶೇ.100 ರಷ್ಟು ಭಾವಚಿತ್ರವಿರುವ ಮತದಾರರು ಇರುತ್ತಾರೆ.

Advertisement

ನಾಮಪತ್ರ ಸಲ್ಲಿಕೆ ಸಂದರ್ಭ ಅಫಿಡವಿಟ್‌: ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಂದ ನಾಮಪತ್ರದ ನಮೂನೆ-2ಎ ರ ಜೊತೆಯಲ್ಲಿ ತಿದ್ದುಪಡಿಯಂತೆ ನಮೂನೆ-26 ರಲ್ಲಿ ಅಫಿಡವಿಟ್‌ ಪಡೆಯಲಾಗುತ್ತದೆ ಹಾಗೂ ಅಭ್ಯರ್ಥಿಗಳು ಸರ್ಕಾರಕ್ಕೆ ಪಾವತಿಸಬೇಕಾದ ಬಾಕಿ ಯಾವುದು ಇರುವುದಿಲ್ಲ ಎಂಬ ಬಗ್ಗೆ ದೃಢೀಕರಣ ಪತ್ರ ನೀಡಬೇಕಾಗಿರುತ್ತದೆ.

ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ಆಸ್ತಿ ವಿವರವನ್ನು ಘೋಷಿಸಬೇಕಾಗಿರುತ್ತದೆ ಹಾಗೂ ಅಭ್ಯರ್ಥಿಗಳು ತಮ್ಮ ಆದಾಯದ ಕುರಿತು ಕಳೆದ 5 ವರ್ಷದಲ್ಲಿ ಆದಾಯ ತೆರಿಗೆ ಪಾವತಿಸಿರುವ ಬಗ್ಗೆ ಘೋಷಿಸುವುದರ ಜೊತೆಗೆ ಪತ್ನಿ ಮತ್ತು ಹಿಂದೂ ಅವಿಭಜಿತ ಕುಟುಂಬ ಸದಸ್ಯರು ಮತ್ತು ಅವಲಂಬಿತರ ಆದಾಯ ತೆರಿಗೆ ಕುರಿತು ಘೋಷಿಸಬೇಕಾಗಿರುತ್ತದೆ. 

ಧ್ವನಿವರ್ಧಕ ನಿರ್ಬಂಧ: ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರಕ್ಕಾಗಿ ಧ್ವನಿವರ್ಧಕಗಳನ್ನು ಬಳಕೆ ಮಾಡುವ ಸಂಬಂಧ, ರಾತ್ರಿ 10 ರಿಂದ ಬೆಳಗ್ಗೆ 6.00 ಗಂಟೆಯವರೆಗೆ ಯಾವುದೇ ತರಹದ ಧ್ವನಿವರ್ಧಕಗಳನ್ನು ಬಳಸಿ, ಚುನಾವಣಾ ಪ್ರಚಾರ ಮಾಡುವಂತಿಲ್ಲ.  

ತಂಡಗಳ ವಿವರ: ಜಿಲ್ಲಾ ವ್ಯಾಪ್ತಿಯಲ್ಲಿ ಮಾದರಿ ನೀತಿ ಸಂಹಿತೆ ಪಾಲನೆ ಸಂಬಂಧ, ಫ್ಲೆçಯಿಂಂಗ್‌ ಸ್ಕ್ವಾಡ್‌ 12 ತಂಡಗಳು (3 ಪಾಳಿಗಳಲ್ಲಿ), ಸ್ಟ್ಯಾಟಿಕ್‌ ಸರ್ವೈಲೆನ್ಸ್‌ 12 ತಂಡಗಳು (3 ಪಾಳಿಗಳಲ್ಲಿ), 63 ಸೆಕ್ಟರ್‌ ಅಧಿಕಾರಿಗಳು, ಅಭ್ಯರ್ಥಿಗಳ ಚುನಾವಣಾ ವೆಚ್ಚ ಪರಿಶೀಲನೆಗಾಗಿ ಅಧಿಕಾರಿಗಳ ತಂಡ, ವೀಡಿಯೋ ಸರ್ವೈಲೆನ್ಸ್‌ 12 ತಂಡಗಳು, ವೀಡಿಯೋ ವೀವಿಂಗ್‌ 04 ತಂಡಗಳನ್ನು ನೇಮಕ ಮಾಡಲಾಗಿರುತ್ತದೆ. ಹಾಗೂ 10 ಅಂತರರಾಜ್ಯ ಚೆಕ್‌ಪೋಸ್ಟ್‌ ಮತ್ತು 8 ಅಂತರ್‌ ಜಿಲ್ಲಾ ಚೆಕ್‌ಪೋಸ್ಟ್‌ಗಳನ್ನು ತೆರೆಯಲು ಕ್ರಮ ವಹಿಸಲಾಗಿದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೇಂದರ್‌ಕುಮಾರ್‌ ಮೀನಾ ಸುದ್ದಿಗೋಷ್ಠಿಯಲ್ಲಿ ಇದ್ದರು.

ಮಾಹಿತಿಗೆ ಕಂಟ್ರೋಲ್‌ ರೂಂ: ಮತದಾರರ ಪಟ್ಟಿಗೆ ಹಾಗೂ ಚುನಾವಣಾ ವಿಷಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ತಿಳಿಸಲು ಜಿಲ್ಲಾಧಿಕಾರಿಗಳ ಕಛೇರಿಯ ಕೊಠಡಿ ಸಂಖ್ಯೆ 104/1 ರಲ್ಲಿ ಮತದಾರರ ಸಹಾಯವಾಣಿ 1950 (ಟೋಲ್‌ ಫ್ರೀ) ಸ್ಥಾಪಿಸಲಾಗಿದ್ದು, ಸದರಿ ಸಹಾಯವಾಣೆಯು 24*7 ಅವಧಿಯಲ್ಲಿ ಕಾರ್ಯ ನಿರ್ವಹಿಸಲಿದ್ದು, ಸಾರ್ವಜನಿಕರು ಟೋಲ್‌ ಫ್ರೀ ಸಂಖ್ಯೆ: 1950 ಕ್ಕೆ ಕರೆ ಮಾಡಿ ಮತದಾರರ ಪಟ್ಟಿ, ಮತದಾನ ಮತ್ತು ಚುನಾವಣಾ ವಿಷಯಗಳಿಗೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿಯನ್ನು ಪಡೆಯಬಹುದಾಗಿರುತ್ತದೆ ಎಂದು ಚುನಾವಣಾಧಿಕಾರಿ ಕಾವೇರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next