Advertisement

ಸಚಿವ ಸುರೇಶ್ ಕುಮಾರ್ ಅವರನ್ನು ಟೀಕಿಸುವ ನೈತಿಕತೆ ಶಾಸಕ ಪುಟ್ಟರಂಗ ಶೆಟ್ಟಿಗೆ ಇಲ್ಲ

07:17 PM Jul 21, 2020 | Hari Prasad |

ಚಾಮರಾಜನಗರ: ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಸಾಕಷ್ಟು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್‌ ಕುಮಾರ್ ಅವರನ್ನು ಟೀಕಿಸುವ ನೈತಿಕತೆ ಶಾಸಕ ಸಿ. ಪುಟ್ಟರಂಗ ಶೆಟ್ಟಿ ಅವರಿಗಿಲ್ಲ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಗಲ ಶಿವಕುಮಾರ್ ಟೀಕಿಸಿದ್ದಾರೆ.

Advertisement

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಗೆ ತಮಗೆ ಆಹ್ವಾನ ನೀಡಿಲ್ಲ ಎಂಬ ನೆಪ ಇಟ್ಟುಕೊಂಡು ಪುಟ್ಟರಂಗ ಶೆಟ್ಟಿ ಅವರು ಸುರೇಶ್‌ ಕುಮಾರ್ ಅವರು ಜಿಲ್ಲೆಗೆ ಏನನ್ನೂ ಮಾಡಿಲ್ಲ ಎಂಬ ಧಾಟಿಯಲ್ಲಿ ಆರೋಪಿಸಿರುವುದು ಸರಿಯಲ್ಲ ಎಂದರು.

ಸಭೆ ನಡೆಯುವ ಬಗ್ಗೆ ಶಾಸಕರಿಗೆ ಆಹ್ವಾನ ನೀಡದಿರುವ ವಿಚಾರ ಸಚಿವ ಸುರೆಶ್ ಕುಮಾರ್ ಅವರ ಗಮನಕ್ಕೆ ಬಂದ ತಕ್ಷಣವೇ ಸ್ವತಃ ಸಚಿವರೇ ಕ್ಷಮೆಯಾಚಿಸುವ ಮೂಲಕ ಉದಾರತೆ ಮೆರೆದಿದ್ದಾರೆ.

ಹೀಗಿರುವಾಗ ಸಚಿವರು ಕೋವಿಡ್ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಶಾಸಕ ಪುಟ್ಟರಂಗ ಶೆಟ್ಟಿ ಅವರು ಆರೋಪಿಸಿದ್ದಾರೆ, ಆದರೆ, ರಾಜಕೀಯ ಮಾಡುತ್ತಿರುವವರು ಯಾರು ಎಂಬುದು ಜನತೆಗೆ ಗೊತ್ತಿದೆ ಎಂದು ಮಂಗಲ ಶಿವಕುಮಾರ್ ಅವರು ವಾಸ್ತವ ಅಂಶಗಳನ್ನು ತೆರೆದಿಟ್ಟರು.

ಶಾಸಕರು ದಿನ ಬೆಳಗಾದರೆ ಪುಣಜನೂರು ಹೆದ್ದಾರಿಯಲ್ಲೇ ಹೆಚ್ಚು ಓಡಾಡುತ್ತಾರೆ. ಅದು ಅವರ ಕ್ಷೇತ್ರ ವ್ಯಾಪ್ತಿಯಲ್ಲೇ ಆ ಹೆದ್ದಾರಿ ಇದೆ. ಹೀಗಿದ್ದೂ ಒಂದು ದಿನವೂ ಆ ರಸ್ತೆ ಹದಗೆಟ್ಟಿರುವ ಬಗ್ಗೆ ಚಕಾರ ಎತ್ತಿಲ್ಲ. ತಾವೇ ಸಚಿವರನ್ನು ಸ್ಥಳಕ್ಕೆ ಕರೆದೊಯ್ದು ಪರಿಸ್ಥಿತಿ ವಿವರಿಸಬೇಕಿತ್ತು. ಅದು ನಿಜವಾದ ರಾಜಕಾರಣ. ಆದರೆ, ರಸ್ತೆ ಪರಿಶೀಲನೆಗೆ ನನ್ನನ್ನು ಕರೆಯಲಿಲ್ಲ ಎಂಬ ಆರೋಪ ಅವರ ಸಣ್ಣತನವನ್ನು ತೋರುತ್ತದೆ ಎಂದು ಆರೋಪಿಸಿದರು.

Advertisement

ಕೆರೆಗೆ ನೀರು ತುಂಬಿಸುವ ವಿಚಾರದಲ್ಲಿ ಗುಂಡ್ಲುಪೇಟೆ ಕೆರೆ ಅಭಿವೃದ್ಧಿ ಪೂರ್ಣಗೊಂಡಿದ್ದರೂ ಅಲ್ಲಿಗೆ ನೀರು ಬಿಡಿಸದೇ ರಾಜಕೀಯ ಮಾಡಿದವರು ಯಾರು ಎಂಬುದನ್ನು ಅರಿಯಬೇಕು ಎಂದು ಮಂಗಲ ಶಿವಕುಮಾರ್ ಲೇವಡಿ ಮಾಡಿದರು.

ಇನ್ನೋರ್ವ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಾರಾಯಣ ಪ್ರಸಾದ್ ಮಾತನಾಡಿ,  ಸುರೇಶ್‌ ಕುಮಾರ್ ಅವರು ಉಸ್ತುವಾರಿಯಾದ ನಂತರ 34 ಬಾರಿ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಆಗ ಇಲ್ಲದ ಆರೋಪವನ್ನು ಶಾಸಕರು ಈಗ ಮಾಡುತ್ತಿರುವುದನ್ನು ಗಮನಿಸಿದರೆ ಇದರಲ್ಲೇ ಬೇರೇನೋ ತಂತ್ರ ಇರುವಂತೆ ಕಾಣುತ್ತಿದೆ. ಇದು ರಾಜ್ಯಾಧ್ಯಕ್ಷರಿಂದ ಬಂದಿರುವ ಸೂಚನೆ ಇರಬಹುದೇನೋ ಎಂಬ ಅನುಮಾನ ಮೂಡುತ್ತದೆ. ಶಾಸಕರದ್ದು ಹತಾಶೆಯ ಆರೋಪ ಎಂದು ಟೀಕಿಸಿದರು‌

ಬಿಜೆಪಿ ಮುಖಂಡರಾದ ರಾಚಯ್ಯ, ಜಯಸುಂದರ್, ನಟರಾಜಗೌಡ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next