Advertisement

ಹಳೆ ಮಿತ್ರನ ಹಣಿಯಲು ಶ್ರೀನಿವಾಸ್‌ ಪ್ರಸಾದ್‌ ಪಣ

12:01 AM Apr 08, 2019 | Sriram |

ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದ ನಾಲ್ಕು ಹಾಗೂ ಮೈಸೂರು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡಿರುವ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ, ಸಂಸದ ಆರ್‌.ಧ್ರುವನಾರಾಯಣ ಮತ್ತು ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್‌ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

Advertisement

ಬಿಜೆಪಿಯಿಂದ ಬೇರೆ ಯಾರೇ ಅಭ್ಯರ್ಥಿಯಾಗಿದ್ದರೂ ಏಕಪಕ್ಷೀಯವಾಗಬಹುದಾಗಿದ್ದ ಕ್ಷೇತ್ರದ ಚುನಾವಣೆ, ಶ್ರೀನಿವಾಸಪ್ರಸಾದ್‌ ಅವರ ರಂಗಪ್ರವೇಶದಿಂದ ತೀವ್ರ
ಪೈಪೋಟಿ ಕಾಣುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಲ್ಲಿದ್ದು, ಧ್ರುವನಾರಾಯಣರನ್ನು ಬೆಂಬಲಿಸಿದ್ದ ಶ್ರೀನಿವಾಸಪ್ರಸಾದ್‌, ಈಗ ಅದೇ ಧ್ರುವ
ವಿರುದಟಛಿ ಕಣಕ್ಕಿಳಿದಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 10 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದು, ಬಿಎಸ್‌ಪಿಯಿಂದ ಡಾ.ಶಿವಕುಮಾರ್‌ ಮೊದಲ ಬಾರಿಗೆ ಚುನಾವಣೆ
ಎದುರಿಸುತ್ತಿದ್ದಾರೆ.

ಕಣ ಚಿತ್ರಣ: ಕಳೆದೆರಡು ಅವಧಿಯಿಂದ ಧ್ರುವನಾರಾಯಣ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಹ್ಯಾಟ್ರಿಕ್‌ ಗೆಲುವಿನ ಕನಸು ಕಾಣುತ್ತಿದ್ದಾರೆ. ಆದರೆ, ಅವರ ಕನಸು ಈಡೇರಲು ಬಿಜೆಪಿಯ ಶ್ರೀನಿವಾಸಪ್ರಸಾದ್‌ ಪ್ರಬಲ ಅಡ್ಡಿಯಾಗಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಧ್ರುವನಾರಾಯಣ, ಬಿಜೆಪಿ ಅಭ್ಯರ್ಥಿ ಎ.ಆರ್‌.ಕೃಷ್ಣಮೂರ್ತಿ ವಿರುದ್ಧ 1.48 ಲಕ್ಷ ಮತಗಳ ಅಂತರದಿಂದ ಜಯಗಳಿಸಿದ್ದರು. ಆಗ ಲೋಕಸಭಾ ಕ್ಷೇತ್ರವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 7ರಲ್ಲಿ ಕಾಂಗ್ರೆಸ್‌ ಶಾಸಕರಿದ್ದರು. 1 ಕ್ಷೇತ್ರದಲ್ಲಿ ಜೆಡಿಎಸ್‌ ಶಾಸಕರಿದ್ದರು.

ಆದರೆ, ಈ ಬಾರಿ, 4ರಲ್ಲಿ ಕಾಂಗ್ರೆಸ್‌, 2ರಲ್ಲಿ ಬಿಜೆಪಿ, ಒಬ್ಬ ಜೆಡಿಎಸ್‌, ಒಬ್ಬರು ಬಿಎಸ್‌ಪಿ ಶಾಸಕರಿದ್ದಾರೆ. ಜೆಡಿಎಸ್‌ -ಕಾಂಗ್ರೆಸ್‌ ಮೈತ್ರಿಯಿರುವುದರಿಂದ ಇನ್ನೊಂದು ಕ್ಷೇತ್ರದ
ಜೆಡಿಎಸ್‌ ಬೆಂಬಲ ಕಾಂಗ್ರೆಸ್‌ಗೆ.

ಸಾಧನೆ ನೋಡಿ ಮತ ನೀಡಿ: ಕಾಂಗ್ರೆಸ್‌ ಅಭ್ಯರ್ಥಿ ಧ್ರುವನಾರಾಯಣ ಅವರು, ತಾವು ಎರಡು ಅವಧಿ ಸಂಸದರಾಗಿ ಕ್ಷೇತ್ರದಲ್ಲಿ ಮಾಡಿರುವ ಗಣನೀಯ ಪ್ರಮಾಣದ ಅಭಿವೃದ್ಧಿ ಕೆಲಸಗಳನ್ನು ನೋಡಿ ತಮ್ಮನ್ನು ಗೆಲ್ಲಿಸ ಬೇಕು ಎಂದು ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಪರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ, ಶಾಸಕರಾದ ನರೇಂದ್ರ, ಎಸ್‌.ಯತೀಂದ್ರ, ಅನಿಲ್‌ಕುಮಾರ್‌, ತಿ.ನರಸೀಪುರದ ಜೆಡಿಎಸ್‌ ಶಾಸಕ ಅಶ್ವಿ‌ನ್‌ಕುಮಾರ್‌, ಅಲ್ಲದೆ, ಮಾಜಿ ಸಂಸದ ಎಂ.ಶಿವಣ್ಣ, ಮಾಜಿ ಸಚಿವೆ ಗೀತಾ ಮಹದೇವಪ್ರಸಾದ್‌, ಗಣೇಶ್‌ ಪ್ರಸಾದ್‌, ಮಾಜಿ
ಶಾಸಕರಾದ ಎ.ಆರ್‌. ಕೃಷ್ಣಮೂರ್ತಿ, ಎಸ್‌ .ಬಾಲರಾಜು, ಎಸ್‌. ಜಯಣ್ಣ, ಕಳಲೆ ಕೇಶವಮೂರ್ತಿ ಮುಖಂಡತ್ವ ವಹಿಸಿ ಬಿರುಸಿನ ಪ್ರಚಾರ ನಡೆಸಿದ್ದಾರೆ.

Advertisement

ನಾಡಿಮಿಡಿತ ತಿಳಿಸುತ್ತಿರುವ ಪ್ರಸಾದ್‌: ಇತ್ತ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್‌, ತಾವು ಕ್ಷೇತ್ರದಲ್ಲಿ ಈ ಹಿಂದೆ 5 ಬಾರಿ ಸಂಸದರಾಗಿದ್ದು, ಕ್ಷೇತ್ರದ ನಾಡಿಮಿಡಿತ ತಮಗೆ ಚೆನ್ನಾಗಿ ತಿಳಿದಿದೆ. ಅಲ್ಲದೆ,ದೇಶದ ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ.

ಹಾಗಾಗಿ, ತಮಗೆ ಮತ ನೀಡಬೇಕು ಎಂದು ಮನವಿ ಮಾಡುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಪರವಾಗಿ ಶಾಸಕರಾದ ಸಿ.ಎಸ್‌.ನಿರಂಜನಕುಮಾರ್‌, ಹರ್ಷವರ್ಧನ್‌, ಜಿಲ್ಲಾಧ್ಯಕ್ಷ ಪ್ರೊ.ಮಲ್ಲಿಕಾರ್ಜುನಪ್ಪ, ಮಾಜಿ ಶಾಸಕರಾದ ಸಿ.ಗುರುಸ್ವಾಮಿ, ಜಿ.ಎನ್‌.ನಂಜುಂಡಸ್ವಾಮಿ, ಭಾರತಿ ಶಂಕರ್‌, ಜಿ.ಪಂ.ಮಾಜಿ ಅಧ್ಯಕ್ಷರಾದ ಎಸ್‌. ಮಹದೇವಯ್ಯ,ಎಂ.ರಾಮಚಂದ್ರ, ಮುಖಂಡರಾದ ಸಿ.ಬಸವೇಗೌಡ.ನಿಜಗುಣರಾಜು, ಹನುಮಂತಶೆಟ್ಟಿ, ಮಲ್ಲೇಶ್‌, ವೆಂಕಟ ರಮಣಸ್ವಾಮಿ (ಪಾಪು) ಮತ್ತಿತರರು ಮುಖಂಡತ್ವ ವಹಿಸಿ ತುರುಸಿನ ಪ್ರಚಾರ ಕೈಗೊಂಡಿದ್ದಾರೆ. ಬಿಎಸ್‌ಪಿಗೆ ಮಾಜಿ ಸಚಿವ ಎನ್‌.ಮಹೇಶ್‌ ಅವರೇ ಆಧಾರ. ಅಭ್ಯರ್ಥಿ ಡಾ.ಶಿವಕುಮಾರ್‌ ಅವರ ಗೆಲುವಿಗೆ ಹೆಗಲು ಕೊಟ್ಟು ಮಹೇಶ್‌ ಪ್ರಚಾರ ನಡೆಸುತ್ತಿದ್ದಾರೆ.

ನಿರ್ಣಾಯಕ ಅಂಶ
ಕ್ಷೇತ್ರದಲ್ಲಿ ದಲಿತ ಮತದಾರರು ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಬಳಿಕ, ಲಿಂಗಾಯತರು, ನಾಯಕರು, ಉಪ್ಪಾರರು, ಕುರುಬರು, ಒಕ್ಕಲಿಗರು, ಅಲ್ಪಸಂಖ್ಯಾತ
ಮತದಾರರಿದ್ದಾರೆ. ದಲಿತ ಸಮುದಾಯ ಜಿಲ್ಲೆಯಲ್ಲಿ ಸಾಧಾರಣವಾಗಿ ಕಾಂಗ್ರೆಸ್‌ ಬೆಂಬಲಿಸುತ್ತಿತ್ತು. ಆದರೆ, ಈ ಬಾರಿ ದಲಿತ ನಾಯಕ ವಿ.ಶ್ರೀನಿವಾಸಪ್ರಸಾದ್‌ ಬಿಜೆಪಿಯಿಂದ ಸ್ಪರ್ಧಿಸಿರುವುದರಿಂದ ದಲಿತ ಮತಗಳು ಹಂಚಿ ಹೋಗಲಿವೆ. ಅಲ್ಲದೆ, ಬಿಎಸ್‌ಪಿ ಸಹ ಕ್ಷೇತ್ರದಲ್ಲಿ ದಲಿತ ಮತಗಳನ್ನು ಕಸಿಯಲಿದೆ. ಲಿಂಗಾಯತರು ಎರಡನೇ ಸ್ಥಾನದಲ್ಲಿದ್ದಾರೆ. ಬಿಜೆಪಿಯ ಮತಬ್ಯಾಂಕ್‌ ಎನಿಸಿದ ಲಿಂಗಾಯತರಲ್ಲಿ ಶೇ.60ರಷ್ಟು ಮತಗಳು ಬಿಜೆಪಿಗೆ ಹೋದರೂ, ಶೇ.40ರಷ್ಟು ಮತಗಳು ತಮಗೆ ದೊರೆಯಲಿವೆ ಎಂಬುದು ಕಾಂಗ್ರೆಸ್‌ನ ಪ್ರಮುಖರೊಬ್ಬರ ಅನಿಸಿಕೆ.

ಮೂರನೇ ಸ್ಥಾನದಲ್ಲಿರುವ ನಾಯಕ ಸಮುದಾಯದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಗೆ ಹೋಗಲಿವೆ.ಉಪ್ಪಾರರು, ಕುರುಬರು, ಅಲ್ಪಸಂಖ್ಯಾತರು ಮತ್ತು ಒಕ್ಕಲಿಗರ ಮತಗಳಲ್ಲಿ ಹೆಚ್ಚಿನ ಪ್ರಮಾಣ ಕಾಂಗ್ರೆಸ್‌ಗೆ ಹೋಗಲಿವೆ ಎನ್ನುವುದು ರಾಜಕೀಯ ನಾಯಕರ ಲೆಕ್ಕಾಚಾರ. ಈ ಸಮೀಕರಣಗಳನ್ನು ನೋಡಿದಾಗ ಕ್ಷೇತ್ರದಲ್ಲಿ ದಲಿತರು ಮತ್ತು ಲಿಂಗಾಯತರ ಮತಗಳು ನಿರ್ಣಾಯಕವಾಗಲಿವೆ.

ಕ್ಷೇತ್ರ ವ್ಯಾಪ್ತಿ
ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಚಾ.ನಗರ ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ಹನೂರು ವಿಧಾನಸಭಾ ಕ್ಷೇತ್ರಗಳು, ಮೈಸೂರು ಜಿಲ್ಲೆಯ ನಂಜನಗೂಡು, ತಿ.ನರಸೀಪುರ, ವರುಣಾ ಹಾಗೂ ಹೆಗ್ಗಡದೇವನಕೋಟೆ ವಿಧಾನಸಭಾ ಕ್ಷೇತ್ರಗಳಿವೆ. ಮೂಡಣದ ಮಲೆಮಹದೇಶ್ವರ ಬೆಟ್ಟದಿಂದ, ಪಡುವಣದ ಕಬಿನಿ ಜಲಾಶಯದವರೆಗೂ ಕ್ಷೇತ್ರದ ವ್ಯಾಪ್ತಿ ಹಬ್ಬಿದೆ.

– ಕೆ.ಎಸ್‌.ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next