Advertisement

Chamarajanagar: ಸ್ಥಳೀಯರು ಹೈರಾಣ; ರೋಗಕ್ಕೆ ಆಹ್ವಾನದಂತಿರುವ ಸಿಮ್ಸ್‌ ಆಸ್ಪತ್ರೆ

03:50 PM Oct 27, 2023 | Team Udayavani |

ಚಾಮರಾಜನಗರ: ನಗರ ಹೊರವಲಯದ ಯಡಬೆಟ್ಟದ ಬಳಿ ಇರುವ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆ (ಸಿಮ್ಸ್‌)ಯ
ಮುಂದೆಯೇ ಕಲುಷಿತ ನೀರು ಹರಿಯುತ್ತಿದ್ದು, ಸುತ್ತಮುತ್ತ ಅನೈರ್ಮಲ್ಯ ವಾತಾವರಣ ಸೃಷ್ಟಿಸಿದೆ.

Advertisement

ಸಿಮ್ಸ್‌ ಬೋಧನಾ ಆಸ್ಪತ್ರೆಯಲ್ಲಿನ ಶೌಚಾಲಯ, ವಾರ್ಡ್‌, ಲ್ಯಾಬ್‌ ಸೇರಿ ಇತರೆ ಕಡೆಗಳಲ್ಲಿನ ಕಲುಷಿತ ನೀರು ಆಸ್ಪತ್ರೆ ಬಳಿಯ
ವಾಹನಗಳ ಪಾರ್ಕಿಂಗ್‌ ಪಕ್ಕದಲ್ಲಿ ನಿರ್ಮಿಸಿರುವ ಸಂಪ್‌ ಮೂಲಕ ಪೈಪ್‌ಲೈನ್‌ ನಲ್ಲಿ ಹೊರ ಹೋಗಲು ಸೂಕ್ತ ವ್ಯವಸ್ಥೆ ಇಲ್ಲ.
ಇದರಿಂದ ಪಾರ್ಕಿಂಗ್‌ ಬಳಿ ಇರುವ ಸಂಪ್‌ ನಿಂದಲೇ ಕಲುಷಿತ ನೀರು ಮೇಲೆ ಉಕ್ಕುತ್ತಿದ್ದು ಹೊರ ಬರುತ್ತಿರುವ ಗಬ್ಬು ನಾರುವ ಕಲುಷಿತ ನೀರು ಮೈದಾನ ಸೇರುತ್ತಿದೆ.

ದುರ್ವಾಸನೆ: ಕಲುಷಿತ ನೀರು ಆಸ್ಪತ್ರೆ ಮಗ್ಗುಲಲ್ಲಿಯೇ ಮೇಲೆ ಉಕ್ಕುತ್ತಿದ್ದರೂ ಅದನ್ನು ಸೂಕ್ತ ರೀತಿಯಲ್ಲಿ ಪೈಪ್‌ಲೈನ್‌ ಮೂಲಕ ಆಸ್ಪತ್ರೆ ಯಿಂದ ದೂರ ಹರಿಯು ವಂತೆ ಮಾಡುವಲ್ಲಿ ಇಲ್ಲಿನ ಸಿಮ್ಸ್‌ ಆಸ್ಪತ್ರೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ. ಇದರಿಂದ ಕಾಯಿಲೆಗೆ ಚಿಕಿತ್ಸೆ ಪಡೆಯಲು ಬರುವ ರೋಗಿಗಳು ಮತ್ತಷ್ಟು ಕಾಯಿಲೆ ಬೀಳುವ ಭೀತಿ ಎದುರಾಗಿದೆ. ಈ ಕಲುಷಿತ ನೀರು ಮೈದಾನಕ್ಕೆ ಹರಿಯುತ್ತಿರುವುದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿದ್ದು ಆಸ್ಪತ್ರೆ ಬಳಿಯೇ ಸಾಂಕ್ರಾಮಿಕ ರೋಗ ಹರಡುವ ಭಯ ಶುರುವಾಗಿದೆ ಎಂದು ರೋಗಿಗಳ ಸಂಬಂಧಿಕರು ದೂರಿದ್ದಾರೆ.

ಕ್ರಮ ಕೈಗೊಳ್ಳಿ: ಆಸ್ಪತ್ರೆ ಕಲುಷಿತ ನೀರು ಹೊರ ಹರಿಯುತ್ತಿರುವುದರಿಂದ ಆಸ್ಪತ್ರೆ ಆಸುಪಾಸಿ ನಲ್ಲಿ ಹೋಟೆಲ್‌ಗ‌ಳು ಹಾಗೂ ಹಣ್ಣು ಮಾರಾಟವೂ ಇದೆ. ಕಲುಷಿತ ನೀರಿನಿಂದ ಉತ್ಪತ್ತಿಯಾಗುವ ಸೊಳ್ಳೆ, ನೊಣ ಆಹಾರದ ಮೇಲೆ ಕುಳಿತು ಮತ್ತಷ್ಟು ಸಾಂಕ್ರಾಮಿಕ ರೋಗ ಬರುವ ಸಂಭವವಿದೆ. ಕೂಡಲೇ ಸಂಬಂಧಪಟ್ಟ ಸಿಮ್ಸ್‌ ಅಧಿಕಾರಿಗಳು ಆಸ್ಪತ್ರೆ ಕಲುಷಿತ ನೀರು ಸೂಕ್ತ
ರೀತಿಯಲ್ಲಿ ಹೊರ ಹೋಗುವಂತೆ ಮಾಡುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪೌರಾಯುಕ್ತರಿಗೆ ಮನವಿ ಮಾಡಲಾಗಿದೆ ಆಸ್ಪತ್ರೆ ಬಳಿ ಇರುವ ಟೀ ಅಂಗಡಿಗಳಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್‌ ಕಪ್‌ಗಳನ್ನು
ಹಾಕಿರುವ ಪರಿಣಾಮ ಕಲುಷಿತ ನೀರು ಹರಿಯುವ ಪೈಪ್‌ ಕಟ್ಟಿಕೊಂಡಿದೆ. ಈ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿ ಹಾಗೂ ಶಿವಪುರ ಗ್ರಾಪಂಗೆ ದೂರು ನೀಡಲಾಗಿದೆ. ಜತೆಗೆ ಕಲುಷಿತ ನೀರು ಹೊರ ಹೋಗುವಂತೆ ಮಾಡಲು ಕ್ರಮವಹಿಸಲಾಗಿದೆ. ಅಲ್ಲದೇ ಆಸ್ಪತ್ರೆ ಬಳಿ ಉತ್ಪತ್ತಿಯಾಗುವ ತ್ಯಾಜ್ಯ ಸೂಕ್ತ ವಿಲೇವಾರಿ ಆಗುತ್ತಿಲ್ಲ. ಇದರಿಂದ ಕೂಡ ತೊಂದರೆಯಾಗುತ್ತಿದ್ದು ನಗರಸಭೆ ತ್ಯಾಜ್ಯ ಸಂಗ್ರಹಿಸುವ ವಾಹನವೊಂದನ್ನು ಬಿಡುವಂತೆ ಪೌರಾಯುಕ್ತರಿಗೆ ಮನವಿ ಮಾಡಲಾಗಿದೆ ಎಂದು ಸಿಮ್ಸ್‌ ಡೀನ್‌
ಹಾಗೂ ನಿರ್ದೇಶಕರಾದ ಡಾ.ಮಂಜುನಾಥ್‌ ತಿಳಿಸಿದ್ದಾರೆ.

Advertisement

ಸಿಮ್ಸ್‌ ಆಸ್ಪತ್ರೆ ಶೌಚಾಲಯದಿಂದ ಹೊರ ಬಂದ ಕಲುಷಿತ ನೀರು ಆಸ್ಪತ್ರೆ ಮುಂದೆಯೇ ಸಾಗುತ್ತಿದ್ದು ದುರ್ವಾಸನೆ ಉಂಟಾಗಿದೆ. ಇದರಿಂದ ಸೊಳ್ಳೆಗಳು ಹೆಚ್ಚಾಗಿ ಕಾಯಿಲೆ ಹರಡುವ ಸಂಭವವಿದೆ. ಇದರ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.
● ಮಹದೇವಸ್ವಾಮಿ, ಚಾ.ನಗರ

● ಕೆ.ಎಸ್‌.ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next