ಚಾಮರಾಜನಗರ: ಜಿಲ್ಲೆಯ ದೇವಾಲಯಗಳಲ್ಲಿ ಕನ್ನಡದಲ್ಲೇ ಮಂತ್ರಘೋಷ ಮಾಡುವ ಸಲುವಾಗಿ ಅರ್ಚಕರಿಗೆ ಕನ್ನಡ ಮಂತ್ರಗಳನ್ನು ಹೇಳಿಕೊಡುವ ವಿಶಿಷ್ಟ ಕಾರ್ಯಾಗಾರ ನಗರದಲ್ಲಿ ಸೋಮವಾರ ನಡೆಯಿತು. ತನ್ಮೂಲಕ ಇನ್ನು ಮುಂದೆ ಜಿಲ್ಲೆಯ ದೇವಾಲಯಗಳಲ್ಲಿ ಸಂಸ್ಕೃತದೊಂದಿಗೆ ಕನ್ನಡ ಮಂತ್ರ ಘೋಷಗಳು ಮೊಳಗಲಿವೆ.
ಜಿಲ್ಲಾಡಳಿತ, ಮುಜರಾಯಿ ಇಲಾಖೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಅರ್ಚಕರಿಗೆ ಕನ್ನಡದಲ್ಲೇ ದೇವರ ಪೂಜೆ, ಮಂತ್ರಘೋಷ, ವಿಧಿ ವಿಧಾನಗಳ ಕುರಿತು ಆಯೋಜಿಸಲಾಗಿದ್ದ ಕಾರ್ಯಾಗಾರಕ್ಕೆ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಚಾಲನೆ ನೀಡಿದರು.
ಜಿಲ್ಲೆಯ ದೇವಾಲಯಗಳಲ್ಲಿ ಭಕ್ತರಿಗೆ ಅರ್ಥವಾಗುವ ಕನ್ನಡ ಭಾಷೆಯಲ್ಲಿ ಮಂತೊ್ರೀಚ್ಛಾರ ನಡೆಯಬೇಕೆಂಬುದು, ಸಾಹಿತಿಯೂ ಆಗಿರುವ ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಅವರ ಇಚ್ಛೆಯಾಗಿತ್ತು. ಇದನ್ನು ಜಾರಿಗೊಳಿಸುವ ಸಲುವಾಗಿ ಜಿಲ್ಲೆಯ ಮುಜರಾಯಿ ದೇವಾಲಯಗಳ ಅರ್ಚಕರಿಗೆ ಕನ್ನಡದಲ್ಲಿ ಮಂತ್ರ ಹೇಳುವ ವಿಧಾನಗಳನ್ನು ತಿಳಿಸಿಕೊಡುವ ಸಲುವಾಗಿ ಈ ಕಾರ್ಯಾಗಾರವನ್ನು ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್ ಅವರ ನೇತೃತ್ವದಲ್ಲಿ ಸೋಮವಾರ ನಗರದಲ್ಲಿ ಆಯೋಜಿಸಲಾಗಿತ್ತು.
ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ, ಭಕ್ತರ ಒಳಿತಿಗಾಗಿ, ಸಮಸ್ಯೆ ಪರಿಹಾರಕ್ಕಾಗಿ ಪೂಜೆ, ಮಂತ್ರ ಘೋಷ ಮಾಡುವ ಪ್ರಕ್ರಿಯೆ ಕನ್ನಡದಲ್ಲೇ ನಡೆದರೆ ಭಕ್ತರ ಮನಸ್ಸಿಗೆ ಪರಿಣಾಮಕಾರಿಯಾಗಿ ತಲುಪುತ್ತದೆ ಎಂಬ ಆಶಯದೊಂದಿಗೆ ಅರ್ಚಕರಿಗಾಗಿ ಹಿರೇಮಗಳೂರು ಕಣ್ಣನ್ ಅವರಿಂದ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದರು.
ಮಂತ್ರ ಪಠಣ ಪೂಜಾ ವಿಧಿವಿಧಾನಗಳನ್ನು ನೆರವೇರಿಸುವ ವೇಳೆ ಸಂಸ್ಕೃತದೊಂದಿಗೆ ಕನ್ನಡವೂ ಸೇರಿದರೆ ಅರ್ಥಪೂರ್ಣವಾಗಲಿದೆ. ಸರ್ವಜನರ ಒಳಿತಿಗಾಗಿ ನೆರವೇರುವ ಪೂಜಾ ಕೈಂಕರ್ಯ, ಮಂತ್ರಘೋಷಗಳು, ಪ್ರಾರ್ಥನೆ ಸರಳವಾಗಿ ಕನ್ನಡದಲ್ಲಿಯೂ ಆಗುವ ಮೂಲಕ ಜನರಿಗೆ ಮುಟ್ಟುವಂತಾಗಲಿ. ಸಂಸ್ಕೃತವನ್ನು ಉಳಿಸಿಕೊಂಡು ಮೂಲ ಉದ್ದೇಶಕ್ಕೆ ಯಾವುದೇ ಧಕ್ಕೆ ಬಾರದ ಹಾಗೇ ಮಾರ್ಗದರ್ಶನ ಮಾಡಿಸುವ ಉದ್ದೇಶದೊಂದಿಗೆ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಡಾ. ರವಿ ತಿಳಿಸಿದರು.
ಜಿಲ್ಲೆಯ ಜನರು ಪ್ರಬುದ್ದರಾಗಿದ್ದಾರೆ. ಯಾವುದೇ ಉತ್ತಮ ಕಾರ್ಯಗಳಿಗೆ ಜಿಲ್ಲಾಡಳಿತದ ಜೊತೆಗೆ ಟೊಂಕ ಕಟ್ಟಿ ನಿಲ್ಲುತ್ತಾರೆ. ಕೊರೊನಾ ವಿರುದ್ದದ ಹೋರಾಟದಲ್ಲಿಯೂ ಸಹಕರಿಸಿ ರಾಷ್ಟ್ರ ಮಟ್ಟದಲ್ಲಿ ಜಿಲ್ಲೆ ಗಮನಸೆಳೆಯಲು ಕಾರಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್ ಅವರು ಕಾರ್ಯಾಗಾರದಲ್ಲಿ ಕನ್ನಡ ಭಾಷೆಯಲ್ಲೇ ಅರ್ಚನೆ, ರಾಷ್ಟ್ರಾಶೀರ್ವಾದ, ಮಂಗಳಾರತಿ, ಮತ್ತಿತ್ತರ ಕನ್ನಡ ಮಂತ್ರಗಳನ್ನು ಅರ್ಚಕರಿಗೆ ಬೋಧಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್, ತಹಶೀಲ್ದಾರ್ ಚಿದಾನಂದ ಗುರುಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಬಿ.ಎಸ್.ವಿನಯ್, ಹಿರಿಯ ಸಾಹಿತಿ ಕೆ.ವೆಂಕಟರಾಜು, ಹಿಮವದ್ ಗೋಪಾಲಸ್ವಾಮಿ ಬೆಟ್ಟದ ದೇವಾಲಯದ ಅರ್ಚಕ ಗೋಪಿ, ಚಾಮರಾಜೇಶ್ವರ ದೇವಾಸ್ಥಾನದ ಅರ್ಚಕ ರಾಮಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.