ಚಾಮರಾಜನಗರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿ ಚಾಮರಾಜನಗರದ ಪಾಲಿಗೆ ಸುವರ್ಣ ಕಾಲ ಅನ್ನಬಹುದು. ಅವರ ಬಳಿಕ ಬಂದು ಎರಡನೇ ಬಜೆಟ್ ಮಂಡಿಸುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಗಡಿಜಿಲ್ಲೆಗೆ ನೀಡಿರುವುದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ. ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಚಾಮರಾಜನಗರ ಜಿಲ್ಲೆಗೆಂದೇ ನಿಗದಿಪಡಿಸಿ ನೀಡಿರುವುದು ಒಟ್ಟು 8.5 ಕೋಟಿ ರೂ. ಅನುದಾನ ಮಾತ್ರ. ಇದು ಬರದಿಂದ ಬಿಸಿಯಾದ ನೆಲಕ್ಕೆ ನೀರು ಹನಿ ನೀರು ಚಿಮುಕಿಸಿದಂತಾಗಿದೆ ಅಷ್ಟೇ.
ರೇಷ್ಮೆ ಪುನಶ್ಚೇತನ: ಚಾಮರಾಜನಗರ ಪಟ್ಟಣದಲ್ಲಿ ಈಗಾಗಲೇ ಮುಚ್ಚಿ ಹೋಗಿರುವ ರೇಷ್ಮೆ ಕಾರ್ಖಾನೆ ಪುನಶ್ಚೇತನಕ್ಕೆ 5 ಕೋಟಿ ರೂ. ಹಾಗೂ ಸಂತೆಮರಹಳ್ಳಿ ರೇಷ್ಮೆ ಕಾರ್ಖಾನೆ ಆಧುನೀಕರಣ ಹಾಗೂ ಯುವಕರಿಗೆ ತರಬೇತಿ ನೀಡಲು 2 ಕೋಟಿ ರೂ. ಗಳನ್ನು ಬಜೆಟ್‌ನಲ್ಲಿ ಮೀಸಲಿರಿಸಲಾಗಿದೆ. ಇದಲ್ಲದೇ, ಬಾಲಕಿಯರಿಗೆ ಪ್ರತ್ಯೇಕ ಕ್ರೀಡಾ ವಸತಿ ನಿಲಯ ಸ್ಥಾಪಿಸಲು 10 ಜಿಲ್ಲೆಗಳಿಗೆ ಒಟ್ಟು 15 ಕೋಟಿ ರೂ. ನೀಡಲಾಗಿದೆ. ಅದರಲ್ಲಿ ಚಾಮರಾಜನಗರ ಜಿಲ್ಲೆಯೂ ಒಂದು.
ನಿರೀಕ್ಷೆ ಹುಸಿ: ಇದಿಷ್ಟು ಬಿಟ್ಟರೆ ಚಾಮರಾಜನಗರ ಜಿಲ್ಲೆಗೆ ರಾಜ್ಯ ಬಜೆಟ್‌ನಲ್ಲಿ ಇನ್ನೇನೂ ದೊರಕಲಿಲ್ಲ. ಕಳೆದ ಬಜೆಟ್‌ನಲ್ಲೂ ಅಷ್ಟೇ. ನಾಲ್ಕು ಜಿಲ್ಲೆಗಳ ಮೆಡಿಕಲ್ ಕಾಲೇಜು ಆಸ್ಪತ್ರೆಗಳ ನಿರ್ಮಾಣಕ್ಕೆ ಒಟ್ಟು 200 ಕೋಟಿ ರೂ. ನೀಡಿದ್ದರು. ಅಷ್ಟು ಬಿಟ್ಟು ಬೇರಾವ ಅನುದಾನ ನೀಡಿರಲಿಲ್ಲ. ಈ ಬಾರಿಯಂತೂ ಕೇವಲ 8.5 ಕೋಟಿ ರೂ. ಗಳ ಅನುದಾನ ನೀಡುವ ಮೂಲಕ ಗಡಿಜಿಲ್ಲೆಯನ್ನು ತೀವ್ರವಾಗಿ ನಿರ್ಲಕ್ಷಿಸಿದ್ದಾರೆ. ಮುಖ್ಯಮಂತ್ರಿಯವರು ಈ ಬಾರಿಯಾದರೂ ಜಿಲ್ಲೆಗೆ ಒಂದಷ್ಟು ಅನುದಾನ, ಹೊಸ ಯೋಜನೆಗಳನ್ನು ನೀಡಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ನಿರೀಕ್ಷೆಗಳು ಹುಸಿಯಾಗಿವೆ.
ಈಗಾಗಲೇ ಚಾಮರಾಜನಗರ ಗುಂಡ್ಲುಪೇಟೆ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಯಾಗಿದೆ. ಜಿಲ್ಲಾ ಕೇಂದ್ರ ಚಾಮರಾಜನಗರಕ್ಕೆ ತಿ.ನರಸೀಪುರದಿಂದ ಕಾವೇರಿ ನೀರು ಪೂರೈಸಲಾಗುತ್ತಿದ್ದು, ಈಗಿನ ಜನಸಂಖ್ಯೆಗೆ ಈ ನೀರು ಸಾಲುತ್ತಿಲ್ಲ. ಹೀಗಾಗಿ ಪಟ್ಟಣಕ್ಕೆ ತಡಿ ಮಾಲಂಗಿಯಿಂದ ಪೈಪುಗಳ ಮೂಲಕ ನೀರು ಪೂರೈಸುವ ಈ ಯೋಜನೆಗೆ 220 ಕೋಟಿ ರೂ. ಅಂದಾಜು ತಯಾರಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಜಿಲ್ಲಾ ಕೇಂದ್ರದಲ್ಲಿ ಈಗಿರುವ ಪ್ರದೇಶಕ್ಕಿಂತ ಜನವಸತಿ ಪ್ರದೇಶ ವಿಸ್ತರಣೆಯಾಗಿಲ್ಲ. ಆಶ್ರಯ, ಅಂಬೇಡ್ಕರ್, ಬಸವ ವಸತಿ ಯೋಜನೆಯಡಿ ಮನೆ ನೀಡುವಂತೆ 15 ಸಾವಿರದಷ್ಟು ಮಂದಿ ನಗರಸಭೆಗೆ ಚುಡಾಕ್ಕೆ ಈ ಅರ್ಜಿ ಸಲ್ಲಿಸಿದ್ದಾರೆ. ನಗರದ ಸಮೀಪದ ಮಾಲೆಗೆರೆ ಬಳಿ ಜಮೀನುಗಳನ್ನು ಖರೀದಿಸಿ 5 ಸಾವಿರ ನಿವೇಶನಗಳನ್ನು ವಿತರಿಸಲು ಬಜೆಟ್‌ನಲ್ಲಿ ಅನುದಾನಕ್ಕಾಗಿ ಉಸ್ತುವಾರಿ ಸಚಿವ ಕ್ಷೇತ್ರದ ಶಾಸಕ ಸಿ. ಪುಟ್ಟರಂಗಶೆಟ್ಟಿ ಬೇಡಿಕೆಯಿಟ್ಟಿದ್ದರು. ನಗರದ ಹೊಸ ಬಡಾವಣೆಗಳಿಗೆ ಒಳಚರಂಡಿ ಮುಂದುವರಿದ ಕಾಮಗಾರಿಗೆ 50 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಇದ್ಯಾವುದೂ ಬಜೆಟ್‌ನಲ್ಲಿ ಪ್ರಸ್ತಾಪವಾಗಿಲ್ಲ.
ಪ್ರವಾಸಿ ತಾಣಗಳ ನಿರ್ಲಕ್ಷ್ಯ: ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿದ್ದು, ಪ್ರವಾಸಿ ತಾಣಗಳ ಅಭಿವೃದ್ಧಿ ಮತ್ತು ಪ್ರವಾಸಿಗರನ್ನು ಆಕರ್ಷಿಸುವ ಯೋಜನೆಗಳನ್ನು ರೂಪಿಸಿ ಅಭಿವೃದ್ಧಿ ಪಡಿಸಲು ಹಣ ಬಿಡುಗಡೆ ಮಾಡಬಹುದೆಂದು ನಿರೀಕ್ಷಿಸಲಾಗಿತ್ತು. ಚಾಮರಾಜನಗರ ತಾಲೂಕಿನ ಬದನಗುಪ್ಪೆ-ಕೆಲ್ಲಂಬಳ್ಳಿ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿ ಪಡಿಸಲು ಸ್ಥಳ ಮೀಸಲಿರಿಸಲಾಗಿದೆ. ಅಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ನೂತನ ಬಜೆಟ್‌ನಲ್ಲಿ ಅನುದಾನ ನಿರೀಕ್ಷೆ ಮಾಡಲಾಗಿತ್ತು. ಆದರೆ, ಈ ಮೇಲಿನ ಎಲ್ಲ ನಿರೀಕ್ಷೆಗಳು ನಿರೀಕ್ಷೆಯಾಗಿಯೇ ಉಳಿದಿವೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ರಾಮನಗರ, ಹಾಸನ, ಮಂಡ್ಯ ಜಿಲ್ಲೆಗಳಿಗೆ ಹೆಚ್ಚಿನ ಅನುದಾನ ನೀಡಿ, ಗಡಿ ಜಿಲ್ಲೆ ಚಾಮರಾಜನಗರವನ್ನು ಕಡೆಗಣಿಸಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಸಿಲ್ಕ್ ಫ್ಯಾಕ್ಟರಿಗೆ 5 ಕೋಟಿ ರೂ.: ಚಾಮರಾಜನಗರದ ತಿ.ನರಸೀಪುರ ರಸ್ತೆಯಲ್ಲಿರುವ ಮುಚ್ಚಿ ಹೋಗಿರುವ ಸರ್ಕಾರಿ ರೇಷ್ಮೆ ಕಾರ್ಖಾನೆ ಪುನಶ್ಚೇತನಕ್ಕೆ 5 ಕೋಟಿ ರೂ. ಕಲ್ಪಿಸಲಾಗಿದೆ. ಕಳೆದ ಬಾರಿ ಬಿಜೆಪಿ, ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿಯವರು ಜಿಲ್ಲೆಯ ಕೊಂಬುಡಿಕಿಯಲ್ಲಿ ಗ್ರಾಮವಾಸ್ತವ್ಯ ಮಾಡಿದ್ದರು. ಜಿಲ್ಲೆಯ ಪರಿಸ್ಥಿತಿ ಬಗ್ಗೆ ಅವರಿಗೆ ಅರಿವಿತ್ತು. ಆದರೂ ಜಿಲ್ಲೆಗೆ ಹೆಚ್ಚಿನ ಅನುದಾನ ನೀಡದಿರುವುದು ಜನತೆಗೆ ನಿರಾಸೆ ಮೂಡಿಸಿದೆ.
* ಕೆ.ಎಸ್. ಬನಶಂಕರ ಆರಾಧ್ಯ