ಚಾಮರಾಜನಗರ: ವಿಶ್ವ ವಿಖ್ಯಾತ ಮಾಜಿ ಸ್ಪಿನ್ನರ್ ಶ್ರೀಲಂಕಾದ ಮುತ್ತಯ್ಯ ಮುರಳೀದರನ್ ನಗರದ ಹೊರ ವಲಯದಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ 400 ಕೋಟಿ ರೂ. ವೆಚ್ಚದಲ್ಲಿ ಬೆವರೆಜ್ ಅಂಡ್ ಕನ್ಫೆಕ್ಷನರಿ ಘಟಕ ಸ್ಥಾಪಿಸುತ್ತಿದ್ದಾರೆ.
ಕೆಲ್ಲಂಬಳ್ಳಿ, ಬದನಗುಪ್ಪೆ ಕೈಗಾರಿಕಾ ಪ್ರದೇಶದ 46 ಎಕರೆ ಪ್ರದೇಶದಲ್ಲಿ ಘಟಕ ಆರಂಭಿಸುತ್ತಿದ್ದು ಇದರಿಂದಾಗಿ 800 ಮಂದಿಗೆ ಉದ್ಯೋಗ ಸಿಗುವ ನಿರೀಕ್ಷೆಯಿದೆ.
ಆರು ತಿಂಗಳ ಹಿಂದೆಯೇ ಅವರು ಜಮೀನು ಖರೀದಿಸಿದ್ದು, ರಾಜ್ಯಮಟ್ಟದಲ್ಲೇ ಯೋಜನೆಗೆ ಅನುಮತಿ ಸಿಕ್ಕಿದೆ. ಘಟಕ ನಿರ್ಮಾಣ ಕಾರ್ಯ ಸಾಗಿದ್ದು, ಮುಂದಿನ ವರ್ಷ ಕಾರ್ಖಾನೆ ಆರಂಭವಾಗುವ ಸಾಧ್ಯತೆ ಇದೆ.
ಮುತ್ತಯ್ಯ ಬೆವರೇಜ್ ಅಂಡ್ ಕನ್‌ಫೆಕ್ಷನರಿ ಪ್ರೈ ಲಿಮಿಟೆಡ್ ಎಂಬ ಹೆಸರಿನಲ್ಲಿ ಕಾರ್ಖಾನೆ ಸ್ಥಾಪಿಸುತ್ತಿದ್ದು, ಇದು ತಂಪು ಪಾನೀಯ ಹಾಗೂ ಚಾಕಲೇಟ್ ತಯಾರಿಕಾ ಘಟಕ ಎಂದು ತಿಳಿದುಬಂದಿದೆ.
ಕಾರ್ಖಾನೆ ನಿರ್ಮಾಣ ಸಂಬಂಧ ಯೋಜನೆ, ಭೂಮಿ ಹಂಚಿಕೆ, ಮಂಜೂರಾತಿ ಎಲ್ಲ ಬೆಂಗಳೂರು ಕೇಂದ್ರ ಕಚೇರಿಯಲ್ಲೇ ಆಗಿದ್ದು, ಈ ಸಂಬಂಧ ಮುತ್ತಯ್ಯ ಮುರಳೀಧರನ್ ಕಾರ್ಖಾನೆ ಸ್ಥಳಕ್ಕೆ ಇನ್ನೂ ಭೇಟಿ ಕೊಟ್ಟಿಲ್ಲ.
ಚಾಮರಾಜನಗರದಲ್ಲಿ ಕೈಗಾರಿಕೆಗಳು ಇಲ್ಲ ಎಂಬ ಕೊರಗಿತ್ತು. 2013 ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ, ಉಸ್ತುವಾರಿ ಸಚಿವರಾಗಿದ್ದ ಎಚ್ ಎಸ್ ಮಹದೇವ ಪ್ರಸಾದ್ ಬದನಗುಪ್ಪೆ ಬಳಿ ಕೈಗಾರಿಕಾ ವಸಾಹತು ಸ್ಥಾಪಿಸಿದ್ದರು. ಅದೀಗ ಫಲ ನೀಡುತ್ತಿದ್ದು ದೊಡ್ಡ ಕಂಪೆನಿಗಳು ತಮ್ಮ ತಯಾರಿಕಾ ಘಟಕ ಸ್ಥಾಪನೆಗೆ ಮುಂದಾಗಿವೆ.