ಚಾಮರಾಜನಗರ: ಆನೆ ದಾಳಿಗೆ ಯುವಕನೋರ್ವ ಬಲಿಯಾಗಿರುವ ಘಟನೆ ಬಿಳಿಗಿರಿ ರಂಗನಬೆಟ್ಟ ಹುಲಿ ಸಂರಕ್ಷಣಾ ಪ್ರದೇಶದ ವ್ಯಾಪ್ತಿಯ ಕತ್ತೆಕಾಲ್ ಪೋಡು ಗ್ರಾಮದಲ್ಲಿ ಬುಧವಾರ ತಡ ರಾತ್ರಿ ಜರುಗಿದೆ.
ಹನೂರು ತಾಲೂಕಿನ ಹುತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕತ್ತೆಕಾಲ್ ಪೋಡು ಗ್ರಾಮದ ನಿವಾಸಿ ಮಾದ (23) ಮೃತಪಟ್ಟ ವ್ಯಕ್ತಿಯಾಗಿದ್ದಾನೆ.
ಘಟನೆ ವಿವರ: ಕತ್ತೆಕಾಲ್ ಪೋಡು ಗ್ರಾಮದ ನಿವಾಸಿ ಮಾದ ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ಬೈಲೂರು ವಲಯ ವ್ಯಾಪ್ತಿಯ ಹಿರಿಯಂಬಲ ಗ್ರಾಮಕ್ಕೆ ಹೋಗಿ ವಾಪಸ್ ಗ್ರಾಮಕ್ಕೆ ಬರುವಾಗ ಜಮೀನಿಗೆ ಲಗ್ಗೆಯಿಟ್ಟಿದ್ದ ಆನೆ ಏಕಾಏಕಿ ದಾಳಿ ನಡೆಸಿದ ಪರಿಣಾಮ ಸ್ಥಳದಲ್ಲಿ ಮೃತಪಟ್ಟಿದ್ದಾನೆ. ತಡರಾತ್ರಿ ಘಟನೆ ನಡೆದಿದ್ದರಿಂದ ಯಾರೊಬ್ಬರಿಗೂ ಮಾಹಿತಿ ಇರಲಿಲ್ಲ. ಗುರುವಾರ ಬೆಳಗ್ಗೆ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ತಕ್ಷಣ ವಲಯ ಅರಣ್ಯ ಅಧಿಕಾರಿ ಪ್ರಮೋದ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹವನ್ನು ಹನೂರು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ.
ಘಟನೆ ಸಂಬಂಧ ಮೃತ ಮಾದ ತಾಯಿ ರಂಗಮ್ಮ ಹನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮಾಜಿ ಶಾಸಕ ನರೇಂದ್ರ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ, ಆನೆ ದಾಳಿಗೆ ಮೃತಪಟ್ಟಿರುವ ಯುವಕನಿಗೆ ಸರ್ಕಾರದಿಂದ ಮೊದಲ ಹಂತದಲ್ಲಿ 5 ಲಕ್ಷ ಪರಿಹಾರ ನೀಡಲು ಡಿಎಫ್ಓ ಅವರಿಗೆ ತಿಳಿಸಿದ್ದೇನೆ. ಉಳಿದ ಹತ್ತು ಲಕ್ಷವನ್ನು ಆದಷ್ಟು ಬೇಗ ಕೊಡಿಸಲು ಕ್ರಮ ವಹಿಸುವಂತೆ ಸೂಚನೆ ನೀಡಿದ್ದೇನೆ ಎಂದರು.