ಚಾಮರಾಜನಗರ: ಶೂನ್ಯ ಕೋವಿಡ್-19 ಪಾಸಿಟಿವ್ ಜಿಲ್ಲೆ ಎಂದೇ ಹೆಸರಾಗಿದ್ದ ಜಿಲ್ಲೆಯಲ್ಲಿ ಈಗ ಒಂದೊಂದಾಗಿ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ನಗರದ ತಾಲೂಕು ಕಚೇರಿಯಲ್ಲಿ ಸರ್ಕಾರಿ ಭೂಮಾಪಕರಾಗಿರುವ 36 ವರ್ಷದ ಮಹಿಳೆ ಹಾಗೂ ಗುಂಡ್ಲುಪೇಟೆಯ ಇನ್ನೋರ್ವ ಚಾಲಕನಿಗೆ ಕೋವಿಡ್ ಇರುವುದು ದೃಢಪಟ್ಟಿದೆ.
ಮಹಿಳೆ ನಗರದ ಭಗೀರಥ ನಗರ ಹೊಸ ಬಡಾವಣೆ ನಿವಾಸಿಯಾಗಿದ್ದ ಆ ಪ್ರದೇಶವನ್ನು ಕಂಟೈನ್‌ಮೆಂಟ್ ವಲಯ ಎಂದು ಘೋಷಿಸಿ ಸೀಲ್‌ಡೌನ್ ಮಾಡಲಾಗಿದೆ. ಆ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ ಜನರ ಓಡಾಟವನ್ನು ನಿರ್ಬಂಧಿಸಲಾಗಿದೆ. ಮಹಿಳೆ ಕರ್ತವ್ಯ ನಿರ್ವಹಿಸುತ್ತಿದ್ದ ತಾಲೂಕು ಕಚೇರಿಯನ್ನು ಸ್ಯಾನಿಟೈಸ್ ಮಾಡಿ, ಮಹಿಳೆ ಕರ್ತವ್ಯ ನಿರ್ವಹಿಸುತ್ತಿದ್ದ ಕೊಠಡಿಗೆ ಬೀಗ ಹಾಕಲಾಗಿದೆ.
ಸೋಂಕು ದೃಢಪಟ್ಟಿರುವುದನ್ನು ಜಿಲ್ಲಾಡಳಿತ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಆದರೆ, ಆ ಮಹಿಳೆಯನ್ನು ಸೋಮವಾರ ಸಂಜೆ ತಾಲೂಕು ಕಚೇರಿಯಿಂದ ಆಂಬುಲೆನ್ಸ್ ಮೂಲಕ ನಗರದ ಕೋವಿಡ್ ಆಸ್ಪತ್ರೆಗೆ ಕರೆ ತರಲಾಗಿದೆ. ತಾಲೂಕು ಪಂಚಾಯಿತಿ ಕಚೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಕ್ಕೆ ಸೋಂಕು ನಿವಾರಕ ಸಿಂಪಡಿಸಲಾಗಿದೆ.
ಈ ಮಹಿಳೆಗೆ ವಾರದ ಹಿಂದೆ ಜ್ವರ ತಲೆನೋವು ಕಾಣಿಸಿಕೊಂಡಿದ್ದು ಖಾಸಗಿ ವೈದ್ಯರಲ್ಲಿ ಚಿಕಿತ್ಸೆ ಪಡೆದಿದ್ದರು. ಬಳಿಕ ನಗರದ ಫೀವರ್ ಕ್ಲಿನಿಕ್‌ನಲ್ಲಿ ರ್ಯಾಂಡಮ್ ಟೆಸ್‌ಟ್ ಮಾಡಿಸಿಕೊಂಡಿದ್ದರು. ಅದರ ಫಲಿತಾಂಶ ಸೋಮವಾರ ಬಂದಿದ್ದು, ಕೋವಿಡ್-19 ಸೋಂಕು ದೃಢಪಟ್ಟಿದೆ.
ಗುಂಡ್ಲುಪೇಟೆಯ ಹೌಸಿಂಗ್ ಬೋರ್ಡ್ ಕಾಲೋನಿ ನಿವಾಸಿ ಸರಕು ಸಾಗಾಣಿಕೆ ವಾಹನದ ಚಾಲಕನಿಗೆ ಸೋಂಕು ತಗುಲಿರುವುದು ಸೋಮವಾರ ದೃಢಪಟ್ಟಿದೆ.ಈತ ಈ ಮುಂಚೆ ಸೋಂಕಿಗೊಳಗಾಗಿದ್ದ ಚಾಲಕನ ಸಹವರ್ತಿಯಾಗಿದ್ದ ಎಂದು ತಿಳಿದುಬಂದಿದೆ.
ಈ ಎರಡು ಪ್ರಕರಣಗಳ ಬಳಿಕ ಈಗ ಜಿಲ್ಲೆಯಲ್ಲಿ ಒಟ್ಟು ನಾಲ್ವರಿಗೆ ಕೋವಿಡ್ ಸೋಂಕು ತಗುಲಿದಂತಾಗಿದ್ದು, ಇವರಲ್ಲಿ ಮುಂಬೈ ನಿವಾಸಿ ಓರ್ವ ಗುಣಮುಖನಾಗಿ ಮನೆಗೆ ತೆರಳಿದ್ದಾನೆ.