ಬೆಂಗಳೂರು: ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ 24 ಸೋಂಕಿತರು ಮೃತಪಟ್ಟ ಘಟನೆಗೆ ಸಂಬಂಧಿಸಿ ನಿವೃತ್ತ ನ್ಯಾ| ಎ.ಎನ್. ವೇಣುಗೋಪಾಲ ಗೌಡ ನೇತೃತ್ವದ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ರಾಜ್ಯ ಮಟ್ಟದ ಮೇಲ್ವಿಚಾರಣ ಸಮಿತಿ ಒಂದು ವಾರದೊಳಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಹೈಕೋರ್ಟ್ ಆದೇಶಿಸಿದೆ.
ಕೋವಿಡ್ ನಿರ್ವಹಣೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾ| ಎ.ಎಸ್. ಓಕ್ ಹಾಗೂ ನ್ಯಾ| ಅರವಿಂದ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿತು.
ನಿವೃತ್ತ ನ್ಯಾ| ಎ.ಎನ್. ವೇಣುಗೋಪಾಲ ಗೌಡ ನೇತೃತ್ವದ ಸಮಿತಿ ಕೋವಿಡ್‌ಗೆ ಸಂಬಂಧಿಸಿ ಆಸ್ಪತ್ರೆಗಳಿಗೆ ಭೇಟಿ ನೀಡಿ ವಿಚಾರಣೆ ನಡೆಸುತ್ತಿದೆ. ಅದರಂತೆ ಚಾಮರಾಜನಗರ ಘಟನೆಯ ಬಗ್ಗೆಯೂ ಈ ಸಮಿತಿ ವಿಚಾರಣೆ ನಡೆಸಿ ಸತ್ಯ ಶೋಧನೆ ನಡೆಸಿ ಮೇ 10ಕ್ಕೆ ವರದಿಯನ್ನು ಸಲ್ಲಿಸಲಿ. ಇಂತಹ ಘಟನೆಗಳು ರಾಜ್ಯದಲ್ಲಿ ಮರುಕಳಿಸಬಾರದು ಎಂಬ ಉದ್ದೇಶದಿಂದ ವಿಚಾರಣೆಗೆ ವಹಿಸಲಾಗುತ್ತಿದೆ. ಸಮಿತಿಗೆ ಸರಕಾರ ಅಗತ್ಯ ಸಹಕಾರ ನೀಡಬೇಕು ಎಂದು ನ್ಯಾಯಪೀಠ ಆದೇಶಿಸಿತು.
ದಾಖಲೆ ಜಪ್ತಿಗೆ ಆದೇಶ :
ಆಕ್ಸಿಜನ್ ಕೊರತೆಯಿಂದ ಕೋವಿಡ್ ಸೋಂಕಿತರು ಸಾವನ್ನಪ್ಪಿದ್ದ ಘಟನೆಯ ಹಿನ್ನೆಲೆಯಲ್ಲಿ ಘಟನೆ ನಡೆದ ದಿನಗಳು ಮತ್ತು ಆಕ್ಸಿಜನ್ ಪೂರೈಕೆಗೆ ಸೀಮಿತವಾಗಿ ಚಾಮರಾಜನಗರ ಜಿಲ್ಲಾಸ್ಪತ್ರೆ, ಚಾಮರಾಜನಗರ ಮತ್ತು ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಗಳ ಎಲ್ಲ ದಾಖಲೆಗಳನ್ನು ಜಪ್ತಿ ಮಾಡುವಂತೆ ಸರಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದ ಹೈಕೋರ್ಟ್, ಈ ದಾಖಲೆಗಳನ್ನು ನ್ಯಾ| ವೇಣುಗೋಪಾಲ ಗೌಡ ನೇತೃತ್ವದ ಸಮಿತಿ ಹಾಗೂ ಸರಕಾರ ನೇಮಿಸಿರುವ ಐಎಎಸ್ ಅಧಿಕಾರಿಗೆ ಲಭ್ಯವಾಗಿಸುವಂತೆ ಸೂಚಿಸಿತು.
ನ್ಯಾಯಾಂಗ ತನಿಖೆಗೆ ಆದೇಶ :
ವಿಚಾರಣೆ ವೇಳೆ ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಸಲು ರಾಜ್ಯ ಸರಕಾರ ಒಪ್ಪಿದ್ದು, ಈ ಸಂಬಂಧ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಅದರಂತೆ ಹೈಕೋರ್ಟ್ ನಿವೃತ್ತ ನ್ಯಾ| ಬಿ. ಎ. ಪಾಟೀಲ್ ಅವರನ್ನು ನೇಮಿಸಲಾಗಿದೆ ಎಂದು ನ್ಯಾಯಪೀಠಕ್ಕೆ ಮಾಹಿತಿ ನೀಡಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ ಆದೇಶದ ಪ್ರತಿಯನ್ನು ಸಲ್ಲಿಸಿದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು.