Advertisement
ಮಾ. 15ರಂದು ರೈಲ್ವೆ ವಿದ್ಯುದೀಕರಣ ಸಂಸ್ಥೆಯ ಉಪ ಮುಖ್ಯ ಎಲೆಕ್ಟ್ರಿಕಲ್ ಎಂಜಿನಿಯರ್ ಅವರು ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ಶಾಖಾಧಿಕಾರಿ ಗಳಿಗೆ ಈ ಸಂಬಂಧ ಪತ್ರ ಬರೆದಿದ್ದಾರೆ. ಮೈಸೂರು ಮತ್ತು ಚಾಮರಾಜನಗರ ನಡವಿನ ಒಟ್ಟು 61 ಕಿ.ಮೀ. ಉದ್ದದ ರೈಲ್ವೆ ಮಾರ್ಗವನ್ನು ವಿದ್ಯು ದೀಕರಣಗೊಳಿಸುವ ಕಾಮಗಾರಿ ಯನ್ನು ಪವರ್‌ಗುರು ಇನ್‌ಫ್ರಾಟೆಕ್ ಪ್ರೈವೇಟ್ ಲಿಮಿಡೆಡ್‌ಗೆ 2021 ರ ಜನವರಿ 22ರಂದು ಟೆಂಡರ್ ಮೂಲಕ ನೀಡಲಾಗಿದೆ. ಈ ಕಾಮಗಾರಿಯನ್ನು 12 ತಿಂಗಳೊಳಗೆ ಅಂದರೆ 2022ರ ಜನವರಿಯೊಳಗೆ ಪೂರ್ಣಗೊಳಿಸಬೇಕೆಂಬ ಷರತ್ತು ವಿಧಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
Related Articles
Advertisement
ನನೆಗುದಿಗೆ ಬಿದ್ದ ಹೆಜ್ಜಾಲ- ಚಾ.ನಗರ ಮಾರ್ಗ
ಬೆಂಗಳೂರಿನ ಹೆಜ್ಜಾಲದಿಂದ, ಕನಕಪುರ, ಮಳವಳ್ಳಿ, ಕೊಳ್ಳೇಗಾಲ ಮೂಲಕ ಚಾಮರಾಜನಗರ ತಲುಪುವ 129 ಕಿ.ಮೀ. ಉದ್ದದ, 1330 ಕೋಟಿ ರೂ. ವೆಚ್ಚದ ನೂತನ ರೈಲ್ವೆ ಮಾರ್ಗವನ್ನು ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ, ಅಂದಿನ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ತಮ್ಮ ಬಜೆಟ್‌ನಲ್ಲಿ ಘೋಷಿಸಿದ್ದರು. ಅದಕ್ಕಾಗಿ ಪ್ರಥಮ ಹಂತವಾಗಿ 10 ಕೋಟಿ ರೂ. ನೀಡಿದ್ದರು. ಹಿಂದಿನ ಸಂಸದ ಆರ್. ಧ್ರುವನಾರಾಯಣ ಈ ಯೋಜನೆಯನ್ನು ಕಾರ್ಯಗತಗೊಳಿಸಲು ಶಕ್ತಿ ಮೀರಿ ಶ್ರಮಿಸಿದ್ದರು. ಇದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದ ಯೋಜನೆ. ಇದರ ಕಾಮಗಾರಿಗೆ ಕೇಂದ್ರ ಅನುದಾನ ನೀಡಿದರೆ,
ರಾಜ್ಯ ಸರ್ಕಾರ ಭೂಸ್ವಾಧೀನ ಮಾಡಿಕೊಡಬೇಕು. ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಭೂಸ್ವಾಧೀನಕ್ಕೆ ಬೇಕಾದ ಅನುದಾನ ರಾಜ್ಯ ಸರ್ಕಾರದಲ್ಲಿಲ್ಲ ಎಂದು ಹೇಳಿದ್ದರು. ಹಾಗಾಗಿ ಆ ಯೋಜನೆ ನನೆಗುದಿಗೆ ಬಿದ್ದಿತ್ತು. ಈಗ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವುದರಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆಸಕ್ತಿವಹಿಸಿದರೆ ಈ ಯೋಜನೆ ಕಾರ್ಯರೂಪಕ್ಕೆ ಬರುತ್ತದೆ. ಇದರಿಂದ ರೈಲು ಮಾರ್ಗವನ್ನೇ ಕಾಣದ ಮಳವಳ್ಳಿ, ಕೊಳ್ಳೇಗಾಲ, ಯಳಂದೂರು, ಸಂತೆಮರಹಳ್ಳಿ ಭಾಗದ ಜನರಿಗೆ ಬಹಳ ಅನುಕೂಲವಾಗುತ್ತದೆ. ಚಾ.ನಗರ ಬೆಂಗಳೂರು ನಡುವೆ ಹತ್ತಿರದ ಮಾರ್ಗವೊಂದು ಲಭ್ಯವಾಗುತ್ತದೆ.
ಉಪಯೋಗವೇನು?
ರೈಲ್ವೆ ಮಾರ್ಗ ವಿದ್ಯುದೀಕರಣದಿಂದ ಮೊದಲನೆಯ ಅನುಕೂಲ ಡೀಸೆಲ್ ಇಂಧನದ ಉಳಿತಾಯ ಮತ್ತು ಪರಿಸರ ಮಾಲಿನ್ಯ ಕಡಿತ. ಎರಡನೆಯದಾಗಿ ರೈಲಿನ ವೇಗ ಜಾಸ್ತಿಯಾಗಲಿದೆ. ಚಾಮರಾಜನಗರದಿಂದ ಮೈಸೂರಿಗೆ ಪ್ರತಿನಿತ್ಯ ಸಾವಿರಾರು ಕಟ್ಟಡ ಕಾರ್ಮಿಕರು ಸಂಚರಿಸುತ್ತಾರೆ. ಇವರಿಗಾಗಿಯೇ ಇಜ್ಜತ್ ಪಾಸ್ ಗಳನ್ನು ವಿತರಿಸಲಾಗಿದೆ. ಅಲ್ಲದೇ ಮೈಸೂರಿನಿಂದ ಚಾಮರಾಜನಗರಕ್ಕೆ, ಚಾಮರಾಜನಗರದಿಂದ ಮೈಸೂರಿಗೆ ಸರ್ಕಾರಿ, ಖಾಸಗಿ ಉದ್ಯೋಗಿಗಳು, ಉದ್ಯೋಗ ನಿಮಿತ್ತ ಓಡಾಡುತ್ತಿದ್ದಾರೆ. ಅವರು ರೈಲನ್ನು ಅವಲಂಬಿಸಿದ್ದಾರೆ. ಮಾರ್ಗದ ವಿದ್ಯುದೀಕರಣದಿಂದ ಮೈಸೂರೇ ಕೊನೆಯ ನಿಲ್ದಾಣವಾಗಿರುವ ಕೆಲವು ರೈಲುಗಳನ್ನು ಚಾಮರಾಜನಗರಕ್ಕೂ ವಿಸ್ತರಿಸಬಹುದು. ಹಾಗಾದಾಗ ನಿತ್ಯ ರೈಲಿನಲ್ಲಿ ಓಡಾಡುವ ಉದ್ಯೋಗಿಗಳಿಗೆ, ಕೂಲಿ ಕಾರ್ಮಿಕರಿಗೆ ಬಹಳ ಅನುಕೂಲವಾಗಲಿದೆ. ರೈಲುಗಳ ಸೀಮಿತ ಸಂಖ್ಯೆಯಿಂದಾಗಿ ಚಾಮರಾಜನಗರ ಮತ್ತು ಮೈಸೂರಿನ ನಡುವೆ ರಸ್ತೆ ಮೂಲಕ ಬಸ್‌ಗಳಲ್ಲಿ ಸಂಚರಿಸುವ ಬಡ ಮತ್ತು ಮಧ್ಯಮ ವರ್ಗದ ಪ್ರಯಾಣಿಕರು ಕಡಿಮೆ ದರದಲ್ಲಿ ರೈಲಿನಲ್ಲಿ ಸಂಚರಿಸುವ ಅನುಕೂಲ ದೊರಕುತ್ತದೆ.
ಕೆ.ಎಸ್. ಬನಶಂಕರ ಆರಾಧ್ಯ