Advertisement

ನಿಲ್ಲಬೇಕಿದೆ ಚಲ್ತಾ ಹೈ ಧೋರಣೆ

08:36 AM Oct 02, 2017 | |

ಮುಂಬಯಿಯ ಎಲ್ಫಿನ್‌ಸ್ಟನ್‌ ರೋಡ್‌ ರೈಲು ನಿಲ್ದಾಣದಲ್ಲಿ ಶುಕ್ರವಾರ 23 ಮಂದಿಯನ್ನು ಬಲಿತೆಗೆದುಕೊಂಡಿರುವ ಕಾಲ್ತುಳಿತ ಘಟನೆಗೆ ಹತ್ತಾರು ಕಾರಣಗಳನ್ನು ಹೇಳಬಹುದು. ಆದರೆ ಒಟ್ಟಾರೆಯಾಗಿ ವ್ಯವಸ್ಥೆಯ ಬೇಜವಾಬ್ದಾರಿತನದ ಪರಮಾವಧಿ ಮತ್ತು ಜನರ ಚಲ್ತಾ ಹೈ ಧೋರಣೆಯೇ ನಿಜವಾದ ಕಾರಣ. ಎಲ್ಫಿನ್‌ಸ್ಟನ್‌ ರೋಡ್‌ ಎಂದಲ್ಲ ಮುಂಬಯಿಯ ಬಹುತೇಕ ರೈಲು ನಿಲ್ದಾಣದಲ್ಲಿ ಯಾವುದೇ ಸಂದರ್ಭದಲ್ಲಿ ಈ ಮಾದರಿಯ ದುರಂತ ಸಂಭವಿಸುವಂತಹ ಪರಿಸ್ಥಿತಿಯಿದೆ. ಇಕ್ಕಟ್ಟಾದ ಪಾದಚಾರಿ ಮೇಲ್ಸೇತುವೆಗಳು, ಅವುಗಳ ಮೇಲೆ ಯಾವುದೇ ಲಂಗುಲಗಾಮಿಲ್ಲದೆ ವ್ಯಾಪಾರ ಮಾಡುತ್ತಿರುವ ಬೀದಿ ವ್ಯಾಪಾರಿಗಳು, ಸೋರುವ ನಿಲ್ದಾಣಗಳು, ಕಿಕ್ಕಿರಿದು ತುಂಬಿಕೊಂಡಿರುವ ರೈಲುಗಳು ಇವೆಲ್ಲ ಉಪನಗರ ರೈಲು ನಿಲ್ದಾಣಗಳ ನಿತ್ಯ ನೋಟಗಳು.  ಮುಂಬಯಿ ಎಂದಲ್ಲ ಇಡೀ ದೇಶದಲ್ಲಿ ನಗರಗಳ ಸಮಸ್ಯೆಗಳು ಹೆಚ್ಚುಕಡಿಮೆ ಒಂದೇ ರೀತಿ ಇವೆ. 

Advertisement

ಮುಂಬಯಿಯ ರೈಲುಗಳು ಕಿಕ್ಕಿರಿದು ತುಂಬಲು, ನಿಲ್ದಾಣಗಳು ನಡೆಯಲೂ ಅಸಾಧ್ಯವಾದಂಥ ದಟ್ಟಣೆಯಿಂದ ಕೂಡಿರಲು ಮುಂಬಯಿಯ ಅತಿಯಾದ ಜನಸಂಖ್ಯೆಯೇ ಮುಖ್ಯ ಕಾರಣ. ದೇಶದ ಅತಿ ದೊಡ್ಡ ನಗರ, ವಾಣಿಜ್ಯ ರಾಜಧಾನಿ ಎಂಬೆಲ್ಲ ವಿಶೇಷತೆಗಳನ್ನು ಹೊತ್ತುಕೊಂಡಿರುವ ಮುಂಬಯಿಯ ಮೂಲಸೌಕರ್ಯ ಇನ್ನೂ ಸುಮಾರು ಆರೇಳು ದಶಕಗಳಷ್ಟು ಹಿಂದಿನಂತೆಯೇ ಇದೆ. ಹೆಚ್ಚುತ್ತಿರುವ ಜನಸಂಖ್ಯೆಗೆ ಆ ಪ್ರಮಾಣದ ಮೂಲಸೌಕರ್ಯ ಒದಗಿಸುವಲ್ಲಿ ಆಡಳಿತ ವಿಫ‌ಲವಾಗಿದ್ದು, ಎಲ್ಲ ಸಮಸ್ಯೆಗಳ ಮೂಲ ಇಲ್ಲಿದೆ. ಹೇಳಿಕೇಳಿ ಮುಂಬಯಿ ಅವ್ಯವಸ್ಥಿತವಾಗಿ ಬೆಳೆದಿರುವ ಬೃಹತ್‌ ನಗರಿ. ಅದರಲ್ಲೂ ಅಲ್ಲಿನ ಸಾರ್ವಜನಿಕ ಸಾರಿಗೆಯ ಮೇಲಿರುವ ಒತ್ತಡ ವಿಪರೀತವಾದದ್ದು, ಒಂದೇ ಒಂದು ತಾಸು ಲೋಕಲ್‌ ರೈಲುಗಳ ಓಡಾಟ ಸ್ಥಗಿತಗೊಂಡರೆ ಇಡೀ ಮುಂಬಯಿಯೇ ಸ್ತಬ್ಧವಾಗುವಂತಹ ಪರಿಸ್ಥಿತಿ. ಹೀಗಾಗಿಯೇ ಈ ಲೋಕಲ್‌ ರೈಲುಗಳನ್ನು ಇಲ್ಲಿನ ನಗರದ ಜೀವನಾಡಿ ಎಂದು ಕರೆಯುತ್ತಾರೆ. ಆದರೆ ಈ ಜೀವನಾಡಿಗೆ ಮೂಲಸೌಕರ್ಯಗಳನ್ನು ಕಲ್ಪಿಸಲು 70 ವರ್ಷಗಳ ಬಳಿಕವೂ ಸಾಧ್ಯವಾಗಿಲ್ಲ. ಸದ್ಯ ಮುಂಬಯಿಯ ಜನಸಂಖ್ಯೆ 2 ಕೋಟಿಯ ಆಸುಪಾಸಿನಲ್ಲಿದೆ. ಈ ಪೈಕಿ ನಿತ್ಯ ಸುಮಾರು 75 ಲಕ್ಷ ಜನರು ಓಡಾಟಕ್ಕೆ ಲೋಕಲ್‌ ರೈಲುಗಳನ್ನು ಅವಲಂಬಿಸಿದ್ದಾರೆ. ಇವರೆಲ್ಲ ರೈಲು ಇಳಿದು ರಸ್ತೆಗೆ ತಲುಪಲು ಬಳಸುವುದು ಫ‌ೂಟ್‌ ಓವರ್‌ ಬ್ರಿಜ್‌ಗಳನ್ನು. ಮೂರೂ ಲೋಕಲ್‌ ಲೈನ್‌ಗಳಲ್ಲಿ ಸುಮಾರು 300ರಷ್ಟು ಫ‌ೂಟ್‌ಓವರ್‌ ಬ್ರಿಜ್‌ಗಳಿದ್ದು, ಈ ಪೈಕಿ ಹೆಚ್ಚಿನ ಫ‌ೂಟ್‌ಓವರ್‌ ಬ್ರಿಜ್‌ಗಳು ಹೇಗಿವೆ ಎಂದರೆ ಇದರಲ್ಲಿ ನಾಲ್ಕು ಮಂದಿ ಏಕಕಾಲದಲ್ಲಿ ಸರಾಗವಾಗಿ ನಡೆದುಕೊಂಡು ಹೋಗಲು ಸಾಧ್ಯವಾಗುವುದಿಲ್ಲ. ಜತೆಗೆ ಎರಡೂ ಬದಿಗಳಲ್ಲಿ ವಿವಿಧ ಸರಕುಗಳನ್ನು ಮಾರುವ ವ್ಯಾಪಾರಿಗಳು ಒಂದಷ್ಟು ಸ್ಥಳ ಆಕ್ರಮಿಸಿಕೊಂಡಿರುತ್ತಾರೆ. ಕೆಲವು ನಿಲ್ದಾಣಗಳಲ್ಲಿ ಈಗಲೂ ಬ್ರಿಟಿಷರ ಕಾಲದಲ್ಲಿ ನಿರ್ಮಿಸಲ್ಪಟ್ಟ ಫ‌ೂಟ್‌ಓವರ್‌ ಬ್ರಿಜ್‌ಗಳು ಇವೆ! ಹಾಗೆಂದು ಈ ದುರಂತಕ್ಕೆ ರೈಲ್ವೇ ಇಲಾಖೆಯನ್ನು ಅಥವಾ ರೈಲ್ವೇ ಸಚಿವರನ್ನು ದೂಷಿಸುವುದರಲ್ಲಿ ಅರ್ಥವಿಲ್ಲ. ಫ‌ೂಟ್‌ಓವರ್‌ ಬ್ರಿಜ್‌ಗಳನ್ನು ವಿಸ್ತರಿಸಲು/ಹೊಸದಾಗಿ ನಿರ್ಮಿಸಲು ರೈಲ್ವೇ ಸಚಿವರೇ ಬಂದು ಅನುಮತಿ ನೀಡಬೇಕೆಂದು ಕಾಯುವುದು ಸರಿಯಲ್ಲ. ಅದರಲ್ಲೂ ಮೊನ್ನೆ ದುರಂತ ಸಂಭವಿಸಿದ ಫ‌ೂಟ್‌ಓವರ್‌ ಬ್ರಿಜ್‌ನ್ನು ವಿಸ್ತರಿಸಲು ಒಂದು ವರ್ಷದ ಹಿಂದೆಯೇ ಅನುಮತಿ ನೀಡಲಾಗಿತ್ತು. ಆದರೆ ಟೆಂಡರ್‌ ಕರೆದು ಕಾಮಗಾರಿ ಪ್ರಾರಂಭವಾಗಿರಲಿಲ್ಲ. ಇದರಲ್ಲಿ ಎದ್ದು ಕಾಣುವುದು ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯ. ಅಂತೆಯೇ ನಗರದ ಜನರೂ ಕೂಡ ಎಲ್ಲ ಅನನುಕೂಲತೆಗಳನ್ನು ಸಹಿಸಿಕೊಂಡು ವ್ಯವಸ್ಥೆಯ ಜತೆಗೆ ಹೊಂದಾಣಿಕೆ ಮಾಡಿಕೊಂಡು ಸಾಗುತ್ತಿದ್ದಾರೆಯೇ ಹೊರತು ಜಡ್ಡುಗಟ್ಟಿರುವ ವ್ಯವಸ್ಥೆಯನ್ನು ಎಚ್ಚರಿಸುವ ದಿಟ್ಟತನವನ್ನು ತೋರಿಸುವುದಿಲ್ಲ. ವ್ಯವಸ್ಥೆಯಲ್ಲಿ ಸಮಸ್ಯೆಯಿದೆ ಎಂದು ಜನರಿಗೆ ಅರಿವಾಗುವುದೇ ಈ ಮಾದರಿಯ ದುರಂತ ನಡೆದಾಗ. ಈ ಚಲ್ತಾ ಹೈ ಧೋರಣೆಯಿಂದಾಗಿಯೇ ವ್ಯವಸ್ಥೆ ಯಾರಿಗೂ ಉತ್ತರದಾಯಿಯಲ್ಲ ಎಂಬ ಮನೋಭಾವ ಬೆಳೆಸಿಕೊಂಡಿದೆ. ಈ ಮನೋಭಾವ ಬದಲಾದರೆ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣಬಹುದು.

Advertisement

Udayavani is now on Telegram. Click here to join our channel and stay updated with the latest news.

Next