Advertisement

ಜನಪ್ರತಿನಿಧಿಗಳಿಗೆ ಸವಾಲಾಗಿರುವ ನೀರಿನ ಯೋಜನೆ 

02:27 PM Mar 14, 2018 | |

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಹಲವು ಭಾಗಗಳಿಗೆ ಕಿನ್ನಿಗೋಳಿ ಬಹುಗ್ರಾಮ ನೀರಿನ ಯೋಜನೆ ಸಮರ್ಪಕವಾಗಿ ಬಂದರೆ ನೀರಿನ ಸಮಸ್ಯೆಯೇ ಇರುವುದಿಲ್ಲ . ಉಲ್ಲಂಜೆ ಹಾಗೂ ಕೆಮ್ಮಡೆ ಪರಿಸರದಲ್ಲಿ ಎರಡುವರೆ ಸೆಂಟ್ಸ್‌ ಸೈಟ್‌ ಮನೆಗಳಿದ್ದು, ಈ ಪ್ರದೇಶದಲ್ಲಿ ನೀರಿನ ಸಮಸ್ಯೆ ಇದೆ. ಈ ಸಮಸ್ಯೆ ನಿವಾರಣೆಗೆ ಉಲ್ಲಂಜೆ ಪ್ರದೇಶದಲ್ಲಿ ಕಳೆದ ವರ್ಷ ತೆರೆದ ಬಾವಿ ತೋಡಿದ್ದು ಅದಕ್ಕೆ ಈ ವರ್ಷ ಪಂಪ್‌ ಅಳವಡಿಕೆಯಾಗಲಿದೆ. ಕೆಮ್ಮಡೆಯಲ್ಲಿ ಕೊಳವೆ ಬಾವಿ ಮಾಡಿದ್ದು ಅದಕ್ಕೂ ಪಂಪ್‌ ಅಳವಡಿಸುವ ಕಾರ್ಯ ನಡೆಯಲಿದೆ.

Advertisement

ಇನ್ನೂ ಆರಂಭವಾಗದ ಯೋಜನೆ
ಮೆನ್ನಬೆಟ್ಟು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಶ್ರೀರಾಮ ಮಂದಿರ, ಕನ್ಸೆಟ್ಟಾ ಆಸ್ಪತ್ರೆ, ಜಲ್ಲಿಗುಡ್ಡೆ ಸಹಿತ 3ಓವರ್‌ ಹೆಡ್‌ ಟ್ಯಾಂಕ್‌ಗಳಿಗೆ ಕಳೆದ ವರ್ಷ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ನೀರು ಬರುತ್ತಿತ್ತು. ಇದರಿಂದ ಸಮಸ್ಯೆ ತಕ್ಕ ಮಟ್ಟಿಗೆ ಪರಿಹಾರವಾಗಿತ್ತು. ಆದರೇ ಈ ವರ್ಷ ಬಹುಗ್ರಾಮ ಕುಡಿಯುವ ನೀರು ಯೋಜನೆ ಇನ್ನೂ ಆರಂಭವಾಗಿಲ್ಲ . ಗ್ರಾಮ ಪಂಚಾಯತ್‌ ಉಳಿದ ಟ್ಯಾಂಕ್‌ಗಳಿಗೆ ಪಂಚಾಯತ್‌ ಕೊಳವೆ ಬಾವಿ ಹಾಗೂ 2 ತೆರೆದ ಬಾವಿ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಮೆನ್ನಬೆಟ್ಟು ಗ್ರಾಮ ಪಂಚಾಯತ್‌ನಲ್ಲಿ ನಂದಿನಿ ನದಿಯು ಸ್ವಲ್ಪ ಭಾಗ ಹರಿಯುತ್ತಿದ್ದರೂ ಕುಡಿಯುವ ನೀರಿನ ಯೋಜನೆಗೆ ಬಳಸಿಕೊಳ್ಳಲು ಯೋಜನೆ ಸಿದ್ಧಪಡಿಸಿಕೊಳ್ಳಬೇಕಾಗಿದೆ.

 ಮೆನ್ನಬೆಟ್ಟು ಗ್ರಾ. ಪಂ. ವ್ಯಾಪ್ತಿಯ ಉಲ್ಲಂಜೆ, ಕೆಮ್ಮಡೆ, ನೇಕಾರ ಕಾಲನಿಯಲ್ಲಿ 400ಕ್ಕೂ ಮಿಕ್ಕ ಎರಡೂವರೆ ಸೆಂಟ್ಸ್‌ ಮನೆ ನಿವೇಶನಗಳಿದ್ದು, ಅಲ್ಲಿನ ಮನೆಗಳನ್ನು ಸೇರಿಸಿ 965 ಕುಡಿಯುವ ನೀರಿನ ಸಂಪರ್ಕ ಇದೆ. 5 ಕೊಳವೆ ಬಾವಿ ಮೂಲಕ ನೀರು ಸರಬರಾಜು ನಡೆಯುತ್ತಿದೆ.

ಆದರೆ ಎರಡು ಕೊಳವೆ ಬಾವಿಗಳು ನಿರುಪಯೋಗವಾಗಿದೆ. ಮೆನ್ನಬೆಟ್ಟು ಗ್ರಾಮ ಪಂಚಾಯತ್‌ ನಲ್ಲಿ 4,374 ಜನಸಂಖ್ಯೆ ಹೊಂದಿದೆ. ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕಿನ್ನಿಗೋಳಿ ಪೇಟೆ ಹಾಗೂ ರುದ್ರಭೂಮಿ ಪರಿಸರ, ಕಂಗುತೋಟ ವ್ಯಾಪ್ತಿಯಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಉಲ್ಲಂಜೆ ಪರಿಸರದಲ್ಲಿ ಎನ್‌ಆರ್‌ಇಜಿ ಯೋಜನೆಯಲ್ಲಿ 2017-18 ರ ಸಾಲಿನಲ್ಲಿ ತೆರೆದ ಬಾವಿ ತೋಡಿದ್ದು ಅಲ್ಲಿ ಪಂಪು ಅಳವಡಿಸುವ ಕೆಲಸ ಪ್ರಗತಿಯಲ್ಲಿದೆ.

ಒಡೆದು ಹೋದ ನೀರಿನ ಪೈಪ್‌
ಮೂರುಕಾವೇರಿ-ಕಿನ್ನಿಗೋಳಿ -ಕಾರ್ನಾಡ್‌ ರಾಜ್ಯ ಹೆದ್ದಾರಿ ರಸ್ತೆ ವಿಸ್ತರಿಸುವ ಕಾಮಗಾರಿಯಿಂದ ಕಿನ್ನಿಗೋಳಿ ಪೇಟೆ ಹಾಗೂ ಸೈಂಟ್‌ ಮೇರಿಸ್‌ ಶಾಲೆಯಿಂದ ಕುಡಿಯುವ ನೀರಿನ ಪೈಪ್‌ಲೈನ್‌ ಒಡೆದು ಹಾಳಾಗಿದ್ದು ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ. ಹೊಸ ಪೈಪ್‌ ಲೈನ್‌ಗೆ ಜಿಲ್ಲಾ ಪಂಚಾಯತ್‌ನಿಂದ ಯೋಜನೆ ಪಟ್ಟಿ ತಯಾರಿಸಲಾಗಿದೆ.

Advertisement

ಟ್ಯಾಂಕರ್‌ ಮೂಲಕ ನೀರು
ಮೆನ್ನಬೆಟ್ಟು ವ್ಯಾಪಿಯಲ್ಲಿ ಎರಡು ಕೊಳವೆ ಬಾವಿಗಳಲ್ಲಿ ನೀರು ಕಡಿಮೆ ಇರುವುದರಿಂದ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ. ಈ ನಿಟ್ಟಿನಲ್ಲಿ ಸೈಂಟ್‌ ಮೇರಿಸ್‌ ಶಾಲೆಯ ಹತ್ತಿರದ ದೊಡ್ಡ ಟ್ಯಾಂಕ್‌ಗೆ ಟ್ಯಾಂಕರ್‌ ಮೂಲಕ ತುಂಬಿಸಿ ನೀರು ಸರಬರಾಜು ಮಾಡಲಾಗುತ್ತಿದೆ.
– ರಮ್ಯಾ ಕೆ., ಪಿಡಿಒ
ಮೆನ್ನಬೆಟ್ಟು ಗ್ರಾ.ಪಂ.

ದೊಡ್ಡ ಹಿನ್ನಡೆ
ಕಳೆದ ವರ್ಷವೂ ನಾವು ನೀರಿನ ಸಮಸ್ಯೆ ಮನಗಂಡು ಟ್ಯಾಂಕರ್‌ ಮೂಲಕ ಉಲ್ಲಂಜೆ, ನೇಕಾರ ಕಾಲನಿ ಪ್ರದೇಶದಲ್ಲಿ ನೀರನ್ನು ನೀಡಲಾಗಿದೆ. ಈ ವರ್ಷವು ಸರಿಯಾದ ನೀರಿನ ಮೂಲ ಇಲ್ಲದೆ ಸಮಸ್ಯೆ ಉಂಟಾಗಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಈ ವರ್ಷ ಬಂದಿಲ್ಲ. ಇದು ನಮಗೆ ದೊಡ್ಡ ಹಿನ್ನಡೆಯಾಗಿದೆ.
– ಸರೋಜಿನಿ ಗುಜರನ್‌,
ಅಧ್ಯಕ್ಷೆ, ಮೆನ್ನಬೆಟ್ಟು ಗ್ರಾ.ಪಂ.

‌ರಘುನಾಥ ಕಾಮತ್‌, ಕೆಂಚನಕೆರೆ

Advertisement

Udayavani is now on Telegram. Click here to join our channel and stay updated with the latest news.

Next