Advertisement

ಸರ್ಕಾರಿ ಡಿಗ್ರಿ ಕಾಲೇಜಿಗೆ ಸವಾಲಾದ ದಾಖಲಾತಿ

10:40 AM Oct 15, 2021 | Team Udayavani |

ರಾಯಚೂರು: ತಾಲೂಕು ಮಟ್ಟದ ಸರ್ಕಾರಿ ಡಿಗ್ರಿ ಕಾಲೇಜುಗಳಿಗೆ ಬನ್ನಿರೋ ಎಂದರೆ ಇಣುಕಿ ನೋಡದ ವಿದ್ಯಾರ್ಥಿಗಳು ರಾಯಚೂರು ಸರ್ಕಾರಿ ಪದವಿ ಕಾಲೇಜಿಗೆ ಮುಗಿಬಿದ್ದಿದ್ದಾರೆ. ಕೇವಲ ಬಿಎ ಪ್ರಥಮ ವರ್ಷದ ವಿಭಾಗ ಒಂದರಲ್ಲೇ ಈ ವರ್ಷ ಬರೋಬ್ಬರಿ 1202 ದಾಖಲಾತಿ ನಡೆದಿದ್ದು, ಬೋಧಕ ಸಿಬ್ಬಂದಿ ಕಂಗೆಡಿಸಿದೆ.

Advertisement

ಕಾಲೇಜಿಗೆ ತುಂಬ ಬೇಡಿಕೆ ಇರುವುದು ನಿಜಕ್ಕೂ ಖುಷಿಯ ವಿಚಾರವಾದರೂ ನಿರ್ವಹಣೆ ಮಾಡುವ ಸವಾಲು ಎದುರಾಗಿದೆ. ಕಾಲೇಜಿನಲ್ಲಿ ಕೇವಲ 17 ಕೋಣೆಗಳಿದ್ದು, ಬಿಎ, ಬಿಕಾಂ, ಬಿಎಸ್ಸಿ ಮತ್ತು ಬಿಸಿಎ ತರಗತಿ ನಡೆಸಬೇಕಿದೆ. ಅಲ್ಲದೇ, ಪ್ರಸಕ್ತ ವರ್ಷದಿಂದ ಎನ್‌ಇಪಿ ಜಾರಿಯಾಗುತ್ತಿದ್ದು, ಈ ಬಗ್ಗೆಯೂ ಸ್ಪಷ್ಟತೆ ಇಲ್ಲ. ಇಂಥ ಹೊತ್ತಲ್ಲಿ ಈ ಮಟ್ಟದ ದಾಖಲಾತಿ ಆಡಳಿತ ಮಂಡಳಿ ನಿದ್ದೆಗೆಡಿಸಿದೆ.

ಕಳೆದ ವರ್ಷ ಲಾಕ್‌ಡೌನ್‌ ವೇಳೆ ಬಿಎ ವಿಭಾಗ- 663, ಬಿಕಾಂ ವಿಭಾಗ-388, ಬಿಎಸ್ಸಿ ವಿಭಾಗ-211 ಹಾಗೂ ಬಿಸಿಎ ವಿಭಾಗದಲ್ಲಿ 40 ಮಕ್ಕಳು ದಾಖಲಾಗಿದ್ದರು. ಆದರೆ, ಈ ವರ್ಷ ಬಿಎ ವಿಭಾಗದಲ್ಲಿ 1202 ವಿದ್ಯಾರ್ಥಿಗಳು ದಾಖಲಾಗಿದ್ದು, ಇಂದಿಗೂ ಬರುತ್ತಿದ್ದಾರೆ. ಇನ್ನೂ ಬಿಕಾಂ ವಿಭಾಗಕ್ಕೆ 453, ಬಿಎಸ್ಸಿ ವಿಭಾಗಕ್ಕೆ 207 ಹಾಗೂ ಬಿಸಿಎ ವಿಭಾಗಕ್ಕೆ 80 ವಿದ್ಯಾರ್ಥಿಗಳು ದಾಖಲಾಗಿದ್ದು, ದಾಖಲಾತಿಗೆ ಇನ್ನೂ ಕಾಲಾವಕಾಶ ಇರುವ ಕಾರಣ ಈ ಸಂಖ್ಯೆ ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ.

ವಿಜಯಪುರ ಮಹಿಳಾ ವಿಶ್ವವಿದ್ಯಾಲಯದ ಕಾಲೇಜು ಇದ್ದರೂ ವಿದ್ಯಾರ್ಥಿನಿಯರು ಮಾತ್ರ ಅಲ್ಲಿ ದಾಖಲಾತಿ ಪಡೆಯಲು ಮುಂದಾಗುತ್ತಿಲ್ಲ. ಇದು ಕೂಡ ದಾಖಲಾತಿ ಹೆಚ್ಚಳಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಈಗ ವಿದ್ಯಾರ್ಥಿಗಳನ್ನು ಎ,ಬಿ,ಸಿ ವರ್ಗಗಳನ್ನಾಗಿ ಮಾಡಿ ಬೆಳಗ್ಗೆ ಹಾಗೂ ಮಧ್ಯಾಹ್ನ ಎರಡು ಹಂತದಲ್ಲಿ ಬೋಧನೆ ಮಾಡಲು ಚಿಂತನೆ ನಡೆಸಲಾಗಿದೆ.

ಕೂಡಲು ಬೆಂಚ್‌ಗಳಿಲ್ಲ

Advertisement

ಎಲ್ಲ ಮಕ್ಕಳು ಏಕಕಾಲಕ್ಕೆ ಕಾಲೇಜಿಗೆ ಬಂದರೆ ಕೂಡಲು ಸ್ಥಳಾಭಾವ ಎದುರಾಗಲಿದೆ. ಈ ಕಾರಣಕ್ಕೆ ಪಕ್ಕದ ಮಹಿಳಾ ಕಾಲೇಜಿನ ಎರಡು ಕಟ್ಟಡ ಕೂಡ ಸುಪರ್ದಿಗೆ ಪಡೆಯಲಾಗಿದೆ. ಅಲ್ಲಿಯೂ ತರಗತಿ ನಡೆಸಲು ಚಿಂತನೆ ನಡೆಸಲಾಗಿದೆ. ಆದರೆ, ವಿದ್ಯಾರ್ಥಿಗಳಿಗೆ ಕೂಡಲು ಬೆಂಚ್‌ಗಳೇ ಇಲ್ಲ. ಎಲ್ಲ ವಿದ್ಯಾರ್ಥಿಗಳು ಏಕಕಾಲಕ್ಕೆ ಬಂದರೆ ಕೂಡಲು ಸ್ಥಳ ಇರುವುದಿಲ್ಲ. ಜನಪ್ರತಿನಿಧಿ ಗಳನ್ನು ಕೇಳಿದರೆ ಅಷ್ಟು ಪ್ರಮಾಣದ ಬೆಂಚ್‌ ನೀಡಲು ಆಗುವುದಿಲ್ಲ ಎಂದಿದ್ದಾರೆ. ಹೀಗಾಗಿ 500 ಬೆಂಚ್‌ ನೀಡುವಂತೆ ಆಯುಕ್ತ ಕಚೇರಿಗೆ ಪ್ರಸ್ತಾವನೆ ಕೂಡ ಸಲ್ಲಿಸಲಾಗಿದೆ.

ಅಂತಿಮ ವರ್ಷದ ಪರೀಕ್ಷೆ ಶುರು

ಒಂದೆಡೆ ಸರ್ಕಾರ ಈಚೆಗಷ್ಟೇ ಕಾಲೇಜುಗಳನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಿದ್ದು, ತರಗತಿಗಳು ಶುರುವಾಗಿದೆ. ಇನ್ನೂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಎನ್‌ಇಪಿ ಶಿಕ್ಷಣ ಪದ್ಧತಿ ಜಾರಿಗೊಳಿಸಿದ್ದು, ಆ ಪಠ್ಯವೂ ಇನ್ನೂ ಶುರುವಾಗಿಲ್ಲ. ಏತನ್ಮಧ್ಯೆ ಗುಲ್ಬರ್ಗ ವಿಶ್ವವಿದ್ಯಾಲಯ ಅಂತಿಮ ವರ್ಷದ ಪರೀಕ್ಷೆ ದಿನಾಂಕ ಪ್ರಕಟಿಸಿದ್ದು, ಇದೇ ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರ ತೆರೆದಿದೆ. ಇದರಿಂದ ಮತ್ತೆ ಕೆಲ ದಿನಗಳ ಕಾಲ ಬೋಧನೆ ಸ್ಥಗಿತಗೊಳಿಸಬೇಕಿದೆ. ಸರ್ಕಾರಿ ಪದವಿ ಕಾಲೇಜಿನಲ್ಲಿ ದಾಖಲಾತಿಗೆ ಮಿತಿ ನಿಗದಿ ಮಾಡದಂತೆ ನಿರ್ದೇಶಕರೇ ತಿಳಿಸಿದ್ದಾರೆ. ಹೀಗಾಗಿ ಎಷ್ಟು ಜನ ವಿದ್ಯಾರ್ಥಿಗಳು ಬಂದರೂ ದಾಖಲು ಮಾಡಿಕೊಳ್ಳಬೇಕಿದೆ. ಮಹಿಳಾ ಕಾಲೇಜು, ಆಯಾ ತಾಲೂಕುಗಳ ಕಾಲೇಜಿಗೆ ಹೋಗುವಂತೆ ತಿಳಿಸಿದರೂ ವಿದ್ಯಾರ್ಥಿಗಳು ಕೇಳುತ್ತಿಲ್ಲ. ಕೂಡಲು ಅಗತ್ಯ ಬೆಂಚ್‌ಗಳು ಇಲ್ಲ. ಈ ಬಗ್ಗೆ ಸಂಬಂಧಿಸಿದವರ ಗಮನಕ್ಕೆ ತರಲಾಗಿದೆ. ನಿರ್ವಹಣೆ ಸವಾಲು ಇರುವುದು ನಿಜ. – ಆರ್‌. ಮಲ್ಲನಗೌಡ, ಪ್ರಾಚಾರ್ಯರು, ಸರ್ಕಾರಿ ಪದವಿ ಕಾಲೇಜು, ರಾಯಚೂರು

– ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next