Advertisement

ಪೊಲೀಸರಿಗೆ ಸವಾಲಾಗುತ್ತಿದೆ ಆನ್‌ಲೈನ್‌ ದೋಖಾ!

10:51 PM Oct 14, 2019 | Sriram |

ಉಡುಪಿ: ಪೇಪರ್‌ಲೆಸ್‌ ಹಾಗೂ ಆನ್‌ಲೈನ್‌ ವ್ಯವಹಾರಗಳು ಹೆಚ್ಚುತ್ತಿರುವ ಜತೆ ಜತೆಗೆ ಆನ್‌ಲೈನ್‌ ವಂಚನೆಗಳ ಪ್ರಮಾಣವೂ ಅಧಿಕವಾಗುತ್ತಿದೆ. ಇದನ್ನು ಭೇದಿಸುವುದು ಪೊಲೀಸರಿಗೂ ಸವಾಲಿನ ಕೆಲಸವಾಗುತ್ತಿದೆ.

Advertisement

ಜಿಲ್ಲೆಯ ಸೆನ್‌ ಠಾಣೆಯಲ್ಲಿ 2018ರಲ್ಲಿ 19 ಪ್ರಕರಣಗಳು ದಾಖಲಾಗಿವೆ. 2019ರ ಅಕ್ಟೋಬರ್‌ ವರೆಗೆ 20 ಪ್ರಕರಣಗಳು ದಾಖಲಾಗಿವೆ. ಸೈಬರ್‌ ವಿಭಾಗದಲ್ಲಿರುವ ಪೊಲೀಸರಿಗೂ ಸೈಬರ್‌ ಪ್ರಕರಣಗಳ ಬಗ್ಗೆ ತರಬೇತಿ ನೀಡಲಾಗಿದೆ. ಪೊಲೀಸ್‌ ಇಲಾಖೆಯ ಸೈಬರ್‌ ಸೆಲ್‌ಗ‌ೂ ತಂತ್ರಜ್ಞಾನ ಪರಿಣತರ ನೇಮಕಕ್ಕೆ ಗೃಹ ಇಲಾಖೆ ಮುಂದಾಗಿದೆ. ಹಣಕ್ಕಾಗಿ ಎಟಿಎಂ ಪಿನ್‌ ಪಡೆದು ವಂಚನೆ, ಸ್ಕಿಮ್ಮಿಂಗ್‌ ಅಪರಾಧಗಳು ಹೆಚ್ಚಾಗಿ ಕಂಡುಬರುತ್ತಿವೆ.

ವೈವಾಹಿಕ ಜಾಲತಾಣಗಳಲ್ಲಿ ವಂಚನೆ, ಉದ್ಯೋಗ ಆಮಿಷ ನೀಡಿ ವಂಚನೆ, ಎಟಿಎಂ ವಂಚನೆಗಳು ತಂತ್ರಜ್ಞಾನ ಬೆಳೆದಂತೆ ಹೆಚ್ಚಳವಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.

ಆನ್‌ಲೈನ್‌ ದೋಖಾ
ಉದ್ಯೋಗ ಕೊಡಿಸುವುದಾಗಿ ನಂಬಿಸಿ ಆನ್‌ಲೈನ್‌ ಮೂಲಕ ವಿವಿಧ ಬ್ಯಾಂಕ್‌ ಖಾತೆಗಳಿಗೆ ಮುಂಗಡವಾಗಿ ಹಣ ಹಾಕಿಸಿಕೊಂಡು ವಿವಿಧ ಕಾರಣಗಳನ್ನು ನೀಡಿ (ಪ್ರೊಸೆಸ್‌ ಫೀಸ್‌, ಪ್ಲೇಸ್‌ಮೆಂಟ್‌ ಫೀಸ್‌ ಮತ್ತು ಜಾಬ್‌ ಪ್ಯಾಕೇಜ್‌ ಫೀಸ್‌) ಎಂದು ನಾನಾ ರೀತಿಯಲ್ಲಿ ಹಣ ಪಡೆದು ಉದ್ಯೋಗ ಕೊಡಿಸದೆ ಮೋಸ ಮಾಡುವ ಘಟನೆಗಳೂ ನಡೆಯುತ್ತಿವೆ.

ಸ್ಕಿಮ್ಮಿಂಗ್‌ ಡಿವೈಸ್‌
ಕೆಲವು ಎಟಿಎಂಗಳಲ್ಲಿ ಸ್ಕಿಮ್ಮಿಂಗ್‌ ಡಿವೈಸ್‌ ಅಳವಡಿಸಿ ಎಟಿಎಂ ಕಾರ್ಡ್‌ನ ಮಾಹಿತಿ ಪಡೆದು ಹಣ ಲಪಟಾಯಿಸುವ ಘಟನೆಗಳು ರಾಜ್ಯದ ಕೆಲವೆಡೆ ನಡೆಯುತ್ತಿವೆ. ಈ ಕಾರಣಕ್ಕಾಗಿಯೇ ಬಹುತೇಕ ಮಂದಿ ಸೆಕ್ಯೂರಿಟಿ ಗಾರ್ಡ್‌ಗಳಿರುವ ಎಟಿಎಂಗಳನ್ನು ಬಳಸುತ್ತಾರೆ.

Advertisement

ಉಡುಪಿಯ ಸೆನ್‌ ಅಪರಾಧ ಪತ್ತೆ ದಳದಲ್ಲಿ ಈ ವರ್ಷ 20 ಪ್ರಕರಣಗಳು ದಾಖಲಾಗಿವೆ. ಹಲವು ಮಂದಿ ಎಟಿಎಂ ವಂಚನೆಗೆ ಸಂಬಂಧಿಸಿದ ಪ್ರಕರಣ ದಾಖಲಿಸಿದ್ದರು. ಕೆಲವು ವರ್ಷಗಳ ಹಿಂದೆ ಮಣಿಪಾಲದ ಬಟ್ಟೆ ಅಂಗಡಿಯೊಂದರಲ್ಲಿ ಎರಡು ಸ್ವೆ„ಪ್‌ ಮೆಷಿನ್‌ಗಳನ್ನಿಟ್ಟು ಮಾಹಿತಿ ಕದ್ದು ಎಟಿಎಂನಿಂದ ಹಣ ಪಡೆದು ವಂಚನೆ, ದತ್ತು ಮಗು ನೀಡುವುದಾಗಿ ಆನ್‌ಲೈನ್‌ನಲ್ಲಿ ಹಣ ಪಡೆದು ವಂಚನೆ, ಚಿಕಿತ್ಸಾಲಯ ನೋಂದಣಿಗೆ ಸಂಬಂಧಿಸಿ ಆನ್‌ಲೈನ್‌ನಲ್ಲಿ ವಂಚಿಸಿರುವ ಬಗ್ಗೆ ದೂರುಗಳು ದಾಖಲಾಗಿವೆ. ಇಷ್ಟೇ ಅಲ್ಲದೆ ಮತ್ತೂರ್ವರ ಖಾತೆಗಳಿಗೆ ಕನ್ನ ಹಾಕುವುದು, ಸಾಮಾಜಿಕ ಜಾಲತಾಣಗಳಲ್ಲಿ ನೀಲಿಚಿತ್ರಗಳ ವೀಕ್ಷಣೆ, ವೈರಸ್‌ ದಾಳಿ, ಸಾಫ್ಟ್ವೇರ್‌ ಪೈರಸಿ, ಆನ್‌ಲೈನ್‌ ಗ್ಯಾಂಬ್ಲಿಂಗ್‌, ಫೋರ್ಜರಿ ಪ್ರಕರಣಗಳು ಈ ಸೈಬರ್‌ ಕ್ರೈಂ ವ್ಯಾಪ್ತಿಯೊಳಗೆ ಸೇರುತ್ತವೆ.

ಬಳಕೆಯಲ್ಲಿ ಜಾಗರೂಕತೆ ಅಗತ್ಯ
ಆನ್‌ಲೈನ್‌ನಲ್ಲಿ ವ್ಯವಹರಿಸುವಾಗ ಹೆಚ್ಚಿನ ಜಾಗರೂಕತೆ ಇರಬೇಕು. ಆಮಿಷಗಳಿಗೆ ಒಳಗಾಗಿ ಅಥವಾ ದುರಾಸೆಯಿಂದ ಹಣ ಕಳೆದುಕೊಂಡವರು ಅನೇಕ ಮಂದಿ ಇದ್ದಾರೆ. ಇಂಥ ಪ್ರಕರಣಗಳನ್ನು ಭೇದಿಸಲಿಕ್ಕಾಗಿ ತಂತ್ರಜ್ಞಾನ, ಆ್ಯಪ್‌ಗ್ಳನ್ನು ಬಳಸಲಾಗುತ್ತದೆ. ಜನರು ಎಚ್ಚರಿಕೆಯಿಂದ ಇದ್ದರೆ ಇಂಥ ಅನೇಕ ವಂಚನೆಗಳಿಂದ ಪಾರಾಗಬಹುದು.
-ನಿಶಾ ಜೇಮ್ಸ್‌
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು

ಹೊಸ ತಂತ್ರಜ್ಞಾನಕ್ಕೆ ಪ್ರಸ್ತಾವ
ಸೈಬರ್‌ ಕ್ರೈಂ ಪ್ರಕರಣಗಳು ವರ್ಷಂಪ್ರತಿ ಹೆಚ್ಚಾಗುತ್ತಿವೆ. ಪೊಲೀಸ್‌ ಇಲಾಖೆ ಕೂಡ ಈ ಬಗ್ಗೆ ಜಾಗೃತವಾಗಿದೆ. ಈಗಾಗಲೇ ಇದರ ಪತ್ತೆಗೆ ತಂತ್ರಜ್ಞಾನಗಳನ್ನು ಬಳಸಲಾಗುತ್ತದೆ. ಹೊಸ ರೀತಿಯ ತಾಂತ್ರಿಕ ಉಪಕರಣಗಳಿಗೆ ಈಗಾಗಲೇ ಸರಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಈ ವರ್ಷಾಂತಕ್ಕೆ ಸೇವೆ ಲಭ್ಯವಾಗುವ ನಿರೀಕ್ಷೆ ಇದೆ. ಈ ಮೂಲಕ ಸೈಬರ್‌ ಕ್ರೈಂ ಪ್ರಕರಣಗಳನ್ನು ಸುಲಭವಾಗಿ ಪತ್ತೆಹಚ್ಚಲು ಪೊಲೀಸ್‌ ಇಲಾಖೆ ಶ್ರಮಿಸುತ್ತಿದೆ.
-ಸೀತಾರಾಮ್‌, ಇನ್‌ಸ್ಪೆಕ್ಟರ್‌, ಸೆನ್‌ ಅಪರಾಧ ಪೊಲೀಸ್‌ ಠಾಣೆ, ಉಡುಪಿ

ಇತರ ಕಳ್ಳತನ ಪ್ರಕರಣಗಳೂ ಹೆಚ್ಚಳ
ಇತ್ತೀಚೆಗೆ ಉಡುಪಿ ಶ್ರೀ ಕೃಷ್ಣಮಠದ ಪರಿಸರದಲ್ಲಿ ಹೋಗುತ್ತಿದ್ದ ಹಿರಿಯ ವ್ಯಕ್ತಿಯೋರ್ವರಿಗೆ ಬೈಕ್‌ನಲ್ಲಿ ಬಂದ ಇಬ್ಬರು ತಾವು ಪೊಲೀಸರೆಂದು ಪರಿಚಯಿಸಿ ದೂರದಲ್ಲಿ ಗಲಾಟೆ ನಡೆಯುತ್ತಿದೆ; ನಿಮ್ಮ ಚಿನ್ನಾಭರಣವನ್ನು ಟವೆಲ್‌ನಲ್ಲಿ ಕಟ್ಟಿಕೊಡುತ್ತೇವೆ ಎಂದು ತಿಳಿಸುತ್ತಾರೆ. ಅದರಂತೆ ಅವರು ಚಿನ್ನ ನೀಡಿದಾಗ ಟವೆಲ್‌ ಅನ್ನು ಮಾತ್ರ ಅವರಿಗೆ ನೀಡಿ ಚಿನ್ನವನ್ನು ಎಗರಿಸುತ್ತಾರೆ. ಕೆಲ ದಿನಗಳ ಹಿಂದೆ ಉಡುಪಿಯ ಮೈತ್ರಿ ಕಾಂಪ್ಲೆಕ್ಸ್‌ಗೆ ನುಗ್ಗಿ 12 ಲ.ರೂ. ನಗದು ದೋಚಿದ ಘಟನೆಯೂ ನಡೆದಿದೆ. ಈ ಬಗ್ಗೆಯೂ ಪೊಲೀಸರು ನಿಗಾ ಇರಿಸಿದ್ದಾರೆ.

-ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next