ಹುಬ್ಬಳ್ಳಿ: ಬದಲಾದ ರಾಜಕೀಯ ಸನ್ನಿವೇಶದಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಚುಕ್ಕಾಣಿ ಹಿಡಿಯುತ್ತಿರುವ ಮಾಜಿ ಶಾಸಕ ವಿ.ಎಸ್. ಪಾಟೀಲರ ಮುಂದೆ ಸಮಸ್ಯೆಗಳ ಸರಮಾಲೆಯೇ ಇದೆ. ಅಧ್ಯಕ್ಷರಾಗಿ ನಷ್ಟದ ಸುಳಿಯಲ್ಲಿ ಸಿಲುಕಿರುವ ಹಾಗೂ ಸರ್ಕಾರಗಳಿಂದ ತಾತ್ಸಾರಕ್ಕೆ ಒಳಗಾಗಿರುವ ಸಂಸ್ಥೆಗೆ ಸರಕಾರದಿಂದ ಬರುವ ಬಾಕಿ, ವಿಶೇಷ ಅನುದಾನ ಎನ್ನುವ ಟಾನಿಕ್ ತರುವ ದೊಡ್ಡ ಸವಾಲಾಗಿದೆ.
ಉತ್ತರ ಕರ್ನಾಟಕದ ಸಾರಿಗೆ ಜೀವನಾಡಿ ಹಾಗೂ ಸಾವಿರಾರು ಕುಟುಂಬಗಳಿಗೆ ಜೀವನ ಕಲ್ಪಿಸಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಆರಂಭದಿಂದಲೂ ಲಾಭದ ಮುಖವನ್ನೇ ನೋಡಿಲ್ಲ. ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಹತ್ತು ಹಲವು ಪ್ರಯತ್ನ ಕೈಗೊಂಡರೂ ವರ್ಷದಿಂದ ವರ್ಷಕ್ಕೆ ಸಂಸ್ಥೆ ಆರ್ಥಿಕ ಸಂಕಷ್ಟ ಬಿಗಡಾಯಿಸುತ್ತಿದ್ದು, ಹಗಲು ರಾತ್ರಿ ಎನ್ನದೆ ದುಡಿಯುವ ಕಾರ್ಮಿಕರಿಗೆ ಸಕಾಲಕ್ಕೆ ವೇತನ ನೀಡದಂತಾಗಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಸರಕಾರ ಹಾಗೂ ಸಂಸ್ಥೆಯ ನಡುವೆ ಕೊಂಡಿಯಾಗಿ ಸಂಸ್ಥೆಗೆ ಅರ್ಥಿಕ ನೆರವು ಕಲ್ಪಿಸುವ ಜವಾಬ್ದಾರಿ ಹೊರುವ ಕೆಲಸ ನೂತನ ಅಧ್ಯಕ್ಷರಿಂದ ಆಗಬೇಕಿದ್ದು, ಸರ್ಕಾರದಿಂದ ಬರಬೇಕಾದ ಬಾಕಿ ಹಾಗೂ ವಿಶೇಷ ಅನುದಾನ ತಂದು ಆರ್ಥಿಕ ಸಂಕಷ್ಟದಿಂದ ಚೇತರಿಸುವಂತೆ ಮಾಡುವುದು ಹೊಸ ಅಧ್ಯಕ್ಷರ ಮುಂದಿನ ಸವಾಲಾಗಿದೆ.
ಹೊಸ ಅಧ್ಯಕ್ಷರಿಗೆ ಸವಾಲುಗಳು: ಸರ್ಕಾರದಿಂದ ಬರಬೇಕಾದ ಆರ್ಥಿಕ ಸೌಲಭ್ಯಗಳನ್ನು ತರುವುದೇ ದೊಡ್ಡ ಸವಾಲು. ವಿವಿಧ ರಿಯಾಯಿತಿ ಬಸ್ ಪಾಸ್ ನೀಡಿರುವುದರಿಂದ 2014-15ರಿಂದ ಇಲ್ಲಿಯವರೆಗೆ ಸರಕಾರದ ಬರಬೇಕಾದ 720 ಕೋಟಿ ರೂ. ತರಬೇಕಾಗಿದೆ. ಸಂಸ್ಥೆಯ ಬಹುದೊಡ್ಡ ಬೇಡಿಕೆಯಲ್ಲಿ ಒಂದಾದ ಮೋಟಾರು ವಾಹನ ವಿನಾಯಿತಿ ಪಡೆಯುವುದಾಗಿದೆ. ಹಿಂದೆ ಜಗದೀಶ ಶೆಟ್ಟರ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಂಸ್ಥೆಯ ಅರ್ಥಿಕ ಪರಿಸ್ಥಿತಿ ಕಂಡು ಈ ವಿನಾಯಿತಿ ಕಲ್ಪಿಸಿ 50 ಕೋಟಿ ರೂ. ವಿಶೇಷ ಅನುದಾನ ಕಲ್ಪಿಸಿದ್ದರು. ಆದರೆ ಈ ವಿನಾಯಿತಿ ಪೂರ್ಣಗೊಂಡು ಎರಡು ವರ್ಷ ಕಳೆದಿದೆ. ಮುಖ್ಯಮಂತ್ರಿಗಳನ್ನು ಒಪ್ಪಿಸಿದರೆ ಸುಲಭದ ತುತ್ತು ಎನ್ನುವ ಮಾತಗಳಿದ್ದು, ಇದೀಗ ಮುಖ್ಯಮಂತ್ರಿಗಳೇ ವಿ.ಎಸ್. ಪಾಟೀಲರಿಗೆ ಈ ಜವಾಬ್ದಾರಿ ನೀಡಿರುವುದರಿಂದ ಸಂಸ್ಥೆ ನೌಕರರಲ್ಲಿ ಒಂದಿಷ್ಟು ಆಶಾಭಾವನೆಯಿದೆ.
ವರ್ಷ ಕಳೆದರೂ ಬಿಆರ್‌ಟಿಎಸ್ ಕಾರ್ಯಾಚರಣೆಗೆ ಸರಕಾರದಿಂದ ಬರಬೇಕಾದ ಪ್ರೋತ್ಸಾಹ ಧನ ಬಾರದಿರುವುದು ಸಂಸ್ಥೆಗೆ ದೊಡ್ಡ ಹೊರೆಯಾಗಿ ಪರಿಣಮಿಸಿದ್ದು, ಮೊದಲ ವರ್ಷವೇ ಸುಮಾರು 24 ಕೋಟಿ ರೂ. ನಷ್ಟ ಅನುಭವಿಸಿದೆ. ಹೀಗಾಗಿ ಪ್ರತಿವರ್ಷ ನಿರ್ದಿಷ್ಟ ಅನುದಾನ ಕಲ್ಪಿಸಬೇಕಾಗಿದೆ. ಪ್ರವಾಹದಿಂದ ಆಗಿರುವ ನಷ್ಟ, ಕಾಮಗಾರಿಗೆ ವಿಶೇಷ ಅನುದಾನ, ಪ್ರಾದೇಶಿಕ ಕಾರ್ಯಾಗಾರ ಮೇಲ್ದರ್ಜೆಗೇರಿಸುವುದು ಸೇರಿದಂತೆ ಹತ್ತು ಹಲವು ಬೇಡಿಕೆಗಳು ಇವರ ಸಾಮರ್ಥ್ಯಕ್ಕೆ ಸವಾಲಾಗಿವೆ.
ನಿವೃತ್ತ ನೌಕರರಿಗೆ ಸೌಲಭ್ಯ ಸಿಕ್ಕಿಲ್ಲ: ಸರ್ಕಾರದಿಂದ ವಿಶೇಷ ಅನುದಾನವಿಲ್ಲ, ವಿದ್ಯಾರ್ಥಿ ಪಾಸ್ ಸೇರಿದಂತೆ ವಿವಿಧ ರಿಯಾಯಿತಿ ಪಾಸ್‌ಗಳಿಗೆ ತಗುಲುವ ವೆಚ್ಚ ಸರಕಾರ ತನ್ನ ಪಾಲಿಕೆ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ನೀಡದಿರುವುದು ದೊಡ್ಡ ತಲೆನೋವಿಗೆ ಕಾರಣವಾಗಿದೆ. ಇದರ ಪರಿಣಾಮ ಸಂಸ್ಥೆಗಾಗಿ ದುಡಿದು ನಿವೃತ್ತರಾದವರಿಗೆ ಹಾಗೂ ಹಾಲಿ ನೌಕರರಿಗೆ ನೀಡಬೇಕಾದ ಆರ್ಥಿಕ ಸೌಲಭ್ಯಗಳು ದೊಡ್ಡ ಮಟ್ಟದಲ್ಲಿ ಬಾಕಿ ಉಳಿದಿದೆ. ಬಿಡಿಭಾಗ ಪೂರೈಕೆ, ಇಂಧನ, ಗುತ್ತಿಗೆದಾರರು ಸೇರಿದಂತೆ ಆಗಸ್ಟ್ ತಿಂಗಳ ಅಂತ್ಯಕ್ಕೆ 420 ಕೋಟಿ ರೂ. ಬಾಕಿ ಭಾರ ಸಂಸ್ಥೆ ಮೇಲಿದೆ. ಇದಕ್ಕಾಗಿ ವಿಶೇಷ ಅನುದಾನವೇ ಅನಿವಾರ್ಯವಾಗಿದೆ. ಈ ಪರಿಸ್ಥಿತಿಯಿಂದಾಗಿ ಕೆಲ ಗುತ್ತಿಗೆದಾರರು ಸಾಮಗ್ರಿಗಳನ್ನು ಹಿಂದೇಟು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಇಂತಹ ದೊಡ್ಡ ಸಮಸ್ಯೆಯನ್ನು ನಿಭಾಯಿಸುವ ಹೊಣೆಗಾರಿಕೆ ಅಧ್ಯಕ್ಷರ ಹೆಗಲ ಮೇಲಿದೆ.
ಈ ಸಂಸ್ಥೆಗೆ ಅಧಿಕಾರಿಗಳೇ ಬರುತ್ತಿಲ್ಲ: ಉತ್ತರ ಕರ್ನಾಟಕ ಭಾಗದಲ್ಲಿರುವ ಸಂಸ್ಥೆ ಎನ್ನುವ ತಾತ್ಸಾರ ಸರಕಾರಕ್ಕಿದ್ದರೆ, ಈ ಭಾಗದಲ್ಲಿ ಯಾವನು ಕೆಲಸ ಮಾಡುತ್ತಾನೆ ಎನ್ನುವ ಮನಸ್ಥಿತಿ ಅಧಿಕಾರಿಗಳಲ್ಲಿದೆ. ಹೀಗಾಗಿ ಘಟಕ ವ್ಯವಸ್ಥಾಪಕ, ಸಹಾಯಕ ಕಾನೂನು ಅಧಿಕಾರಿ, ಜಾಗೃತ ಮತ್ತು ಭದ್ರತಾಧಿಕಾರಿ, ಆಡಳಿತಾಧಿಕಾರಿ ಸೇರಿದಂತೆ ಪ್ರಮುಖ ಹುದ್ದೆಗಳು ಖಾಲಿಯಿವೆ. ಓರ್ವ ಅಧಿಕಾರಿ 2-3 ಪ್ರಭಾರಗಳನ್ನು ವಹಿಸುವಂತಾಗಿದ್ದು, ಕೆಲಸ ಒತ್ತಡದಿಂದ ಗೈರು ಹಾಗೂ ರಾಜೀನಾಮೆ ನೀಡುವಷ್ಟರ ಮಟ್ಟಿಗೆ ತಲುಪಿದ್ದಾರೆ.
ಈ ಸಂಸ್ಥೆಯ ಕೋಟಾದಡಿ ನೇಮಕವಾದ ಅಧಿಕಾರಿಗಳು ಬೆಂಗಳೂರಿಗೆ ಸೀಮಿತವಾಗಿದ್ದು, ಇಂತಹ ಕೆಟ್ಟ ಸಂಪ್ರದಾಯಕ್ಕೆ ತೆರೆ ಎಳೆಯುವ ಕೆಲಸ ಬೇಕಾಗಿದೆ. ಆರ್ಥಿಕವಾಗಿ ಒಂದಿಷ್ಟು ಬಲ ತುಂಬುವ ಪ್ರಯತ್ನ ಶಿವರಾಮ ಹೆಬ್ಟಾರ ಅವರಿಂದ ನಡೆದಿತ್ತು. ಆದರೆ ಬದಲಾದ ರಾಜಕಾರಣದಿಂದ ಅವರದೇ ಕ್ಷೇತ್ರದ ಮಾಜಿ ಶಾಸಕ ವಿ.ಎಸ್. ಪಾಟೀಲರಿಗೆ ಸಂಸ್ಥೆ ಅಧ್ಯಕ್ಷಗಿರಿ ನೀಡಲಾಗಿದೆ. ಕ್ಷೇತ್ರಕ್ಕೆ ಅನುದಾನ ತಂದು ಸದ್ಬಳಕೆ ಮಾಡಿದ ಶಾಸಕ ಎನ್ನುವ ಹೆಗ್ಗಳಿಕೆ ಹೊಂದಿರುವ ವಿ.ಎಸ್.ಪಾಟೀಲರು ಇಷ್ಟೆಲ್ಲಾ ಸವಾಲುಗಳನ್ನು ಮೆಟ್ಟಿ ಸಂಸ್ಥೆಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಾರಾ ಕಾದುನೋಡಬೇಕಿದೆ.