ಚಳ್ಳಕೆರೆ: ನಗರ ಪ್ರದೇಶದಲ್ಲಿ ಶಿಕ್ಷಣ ಕಲಿಯುವ ಮಕ್ಕಳಿಗೆ ಗ್ರಾಮೀಣ ಭಾಗದ ಸೊಗಡು, ಸಂಸ್ಕೃತಿ, ಸಂಪ್ರದಾಯ, ಆಚರಣೆ ಹಾಗೂ ಜೀವನ ಶೈಲಿಯ ಅರಿವು ಮೂಡಿಸುವ ಕಾರ್ಯವನ್ನು ನಮ್ಮ ಶಾಲೆ ಮಾಡುತ್ತಿದೆ ಎಂದು ಜ್ಞಾನಸುರಭಿ ಪಬ್ಲಿಕ್ ಶಾಲೆ ಆಡಳಿತಾಧಿಕಾರಿ ಬಿ.ಆರ್. ರೇಖಾ ಹೇಳಿದರು.
ಶಾಲಾ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಗ್ರಾಮೀಣ ಸೊಗಡು ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಗರ ಪ್ರದೇಶ ಮಕ್ಕಳ ಒತ್ತಡದ ಕಲಿಕೆಯ ಮಧ್ಯೆಯೂ ಗ್ರಾಮೀಣ ಜನರ, ರೈತರ ಜೀವನ ಶೈಲಿಯ ಬಗ್ಗೆ ತಿಳಿಸುವ ಕಾರ್ಯ ಮಾಡಲಾಗಿದೆ. ಕೃಷಿಹೊಂಡ, ನಾಟಿ, ನೂಲು ತೆಗೆಯುವುದು, ಬೇಸಾಯ, ಕುರಿ, ಕೋಳಿ ಸಾಕಾಣಿಕೆ, ಗ್ರಾಮೀಣ ಕ್ರೀಡೆಗಳಾದ ಲಗೋರಿ, ಪಗಡೆ, ಚಿನ್ನಿದಾಂಡು, ಬುಗುರಿ ಸೇರಿದಂತೆ ಮಕ್ಕಳೇ ಮಾದರಿಗಳನ್ನು ತಯಾರಿಸಿ ಪ್ರದರ್ಶನ ಮಾಡಿದ್ದಾರೆ. ಈ ಮೂಲಕ ಶಾಲೆಯಲ್ಲಿ ಗ್ರಾಮೀಣ ಬದುಕು ಕಟ್ಟಿಕೊಟ್ಟಿದ್ದೇವೆ. ಮಕ್ಕಳ ಮನಸ್ಸಲ್ಲಿ ರೈತಾಪಿ ವರ್ಗದ ಶ್ರಮದ ಚಿತ್ರಣವನ್ನು ಮೂಡಿಸಿದ್ದೇವೆ ಎಂದರು.
ಮುಖ್ಯ ಶಿಕ್ಷಕ ಭರಮಸಾಗರ ಎನ್. ಮಂಜುನಾಥ ಮಾತನಾಡಿ, ಪ್ರತಿನಿತ್ಯ ಕಲಿಕೆಯನ್ನೇ ಗುರಿಯಾಗಿಸಿಕೊಂಡ ಶಾಲೆಗೆ ಬರುವ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳ ಬಗ್ಗೆಯೂ ಆಸಕ್ತಿ ಮೂಡಿಸುವ ದೃಷ್ಟಿಯಿಂದ ಶಾಲೆಯಲ್ಲಿ ಗ್ರಾಮೀಣ ಸೊಗಡು ಸಂಸ್ಕೃತಿ ಆಚರಣೆ ಬಗ್ಗೆ ತಿಳಿಸಿಕೊಡಲಾಗಿದೆ. ಮಕ್ಕಳು ಸಹ ಗ್ರಾಮಾಂತರ ಪ್ರದೇಶದಲ್ಲಿ ಆನಾದಿ ಕಾಲದಿಂದ ಆಚರಣೆಯಲ್ಲಿದ್ದ ವಸ್ತುಗಳ ಪ್ರದರ್ಶನ ಮಾಡಿದ್ದಾರೆ.
ಜನರ ಜೀವನ ಶೈಲಿ ಕುರಿತು ನಾಟಕ, ಕೋಲಾಟ, ವಿವಿಧ ವೇಷ ಧರಿಸಿದ್ದಾರೆ. ಅಂಚೆ ಕಚೇರಿ, ಗರಡಿ ಮನೆ, ಹಳ್ಳಿ ಕಟ್ಟೆ, ದೇವಾಲಯ, ಆಚರಣೆ, ಜಾತ್ರೆ, ಆಸ್ಪತ್ರೆ ಸೇರಿದಂತೆ ವಿವಿಧ ಮಾದರಿಯ ವಸ್ತುಗಳನ್ನು ತಯಾರಿಸಿ ಪ್ರದರ್ಶನ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ತಿಪ್ಪೇಸ್ವಾಮಿ, ಅಭಿಲಾಷ್, ಲೋಕೇಶ್, ಮಮತ, ಮಹಾಲಕ್ಷ್ಮಿ, ಲಕ್ಷ್ಮಿ, ಲಲಿತಾಕುಮಾರಿ, ಲೀಲಾವತಿ, ಪುಪ್ಪ, ಶಿಲ್ಪ, ಹಸನ, ಸಬ್ರೀನತಾಜ್, ಅನುಸೂಯಮ್ಮ, ಭವಾನಿ, ಕಮಲ, ಸಹಿರಭಾನು ಮುಂತಾದವರು ಉಪಸ್ಥಿತರಿದ್ದರು.