ಚಳ್ಳಕೆರೆ: 14 ದಿನಗಳಿಂದ ನಗರದ ಬಿಸಿಎಂ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿದ್ದ ಆಂಧ್ರಪ್ರದೇಶದ 53 ಜನರನ್ನು ಕ್ವಾರಂಟೈನ್‌ನಿಂದ ಬಿಡುಗಡೆಗೊಳಿಸಿ ಸ್ವಗ್ರಾಮಗಳಿಗೆ ಮರಳುವಂತೆ ಸೂಚನೆ ನೀಡಲಾಗಿದೆ ಎಂದು ಕೋವಿಡ್ ನಿಯಂತ್ರಣ ಟಾಸ್ಕ್ಪೋರ್ಸ್ ಅಧ್ಯಕ್ಷ, ತಹಶೀಲ್ದಾರ್ ಎಂ. ಮಲ್ಲಿಕಾರ್ಜುನ್ ತಿಳಿಸಿದರು.
ಭಾನುವಾರ ಕ್ವಾರಂಟೈನ್ ಅವಧಿ ಮುಗಿಸಿದ 53 ಜನರ ಆರೋಗ್ಯ ಪರೀಕ್ಷೆ ನಡೆಸಿದ ನಂತರ ಬೀಳ್ಕೊಡುವ ಸಂದರ್ಭದಲ್ಲಿ ಅವರು ಮಾತನಾಡಿದರು. ಸರ್ಕಾರದ ನಿಯಮದ ಪ್ರಕಾರ ಕ್ವಾರಂಟೈನ್ ಮಾಡಲಾಗಿತ್ತು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ| ಎನ್. ಪ್ರೇಮಸುಧಾ ಮಾತನಾಡಿ, ಆಂಧ್ರಪ್ರದೇಶದ ಪ್ರಕಾಶಂ ಮತ್ತು ಅನಂತಪುರ ಜಿಲ್ಲೆಯಿಂದ ಖಾಸಗಿ ಕಾಲೇಜಿನ ಪ್ರಾಚಾರ್ಯ, ಉಪನ್ಯಾಸಕರೂ ಸೇರಿದಂತೆ ಹಲವಾರು ಜನರು ಚಳ್ಳಕೆರೆ ತಾಲೂಕನ್ನು ಪ್ರವೇಶಿಸಿದ್ದರು. ಮೇ 14ರಂದು ಇವರನ್ನು ತಡೆದು ಪರಿಶೀಲನೆ ನಡೆಸಿ ಕ್ವಾರಂಟೈನ್ ಮಾಡಲಾಗಿತ್ತು. ಬಿಸಿಎಂ ಹಾಸ್ಟೆಲ್, ಮೊರಾರ್ಜಿ ಶಾಲೆ, ಕಿತ್ತೂರು ರಾಣಿ ಚನ್ನಮ್ಮ ಹಾಗೂ ಖಾಸಗಿ ಲಾಡ್ಜ್ವೊಂದರಲ್ಲಿ ಇವರನ್ನು ಇಡಲಾಗಿತ್ತು. ಕೇರಳದ ನಾಲ್ವರು ಕ್ವಾರಂಟೈನ್‌ನಲ್ಲಿದ್ದು, ಅವರನ್ನು ಸಹ ಬಿಡುಗಡೆಗೊಳಿಸಲಾಗಿದೆ ಎಂದರು. ಆರ್‌ಆರ್‌ಟಿ ತಂಡದ ಮುಖ್ಯಸ್ಥ ಪ್ರಸನ್ನಕುಮಾರ್, ಎ. ನಾಗರಾಜು, ಚಂದ್ರಪ್ಪ, ಗಂಗಾಧರ, ಆರೋಗ್ಯ ಶಿಕ್ಷಣಾ ಧಿಕಾರಿಗಳಾದ ಎಸ್.ಬಿ. ತಿಪ್ಪೇಸ್ವಾಮಿ, ಎನ್. ಪ್ರೇಮಕುಮಾರ್, ಲ್ಯಾಬ್ ಟೆಕ್ನಿಷಿಯನ್ ಎಚ್. ತಿಪ್ಪೇಸ್ವಾಮಿ, ಕಂದಾಯಾಧಿಕಾರಿ ರಾಜೇಶ್, ವರುಣ್, ಡಿ. ಶ್ರೀನಿವಾಸ್, ಕಾರ್ತಿಕ್ ಇತರರು ಇದ್ದರು.