Advertisement

ಕೋವಿಡ್ ಸೋಂಕಿತರ ಹಾಸ್ಟೇಲ್‌ ಚಿಕಿತ್ಸೆಗೆ ವಿರೋಧ

01:41 PM May 28, 2020 | Naveen |

ಚಳ್ಳಕೆರೆ: ಕೋವಿಡ್ ಪಾಸಿಟಿವ್‌ ದೃಢಪಟ್ಟಿರುವ ಉತ್ತರಪ್ರದೇಶ ಮೂಲದ 20 ಕೂಲಿ ಕಾರ್ಮಿಕರನ್ನು ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ಸ್ಥಳಾಂತರಿಸದೆ ನಗರದ ಪಾವಗಡ ರಸ್ತೆಯ ಬಿಸಿಎಂ ಹಾಸ್ಟೆಲ್‌ನಲ್ಲಿಯೇ ಚಿಕಿತ್ಸೆ ನೀಡುತ್ತಿರುವುದಕ್ಕೆ ಸಾರ್ವಜನಿಕರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

Advertisement

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ಧಾರದ ಬಗ್ಗೆ ನಗರದ ವಿವಿಧ ಪಕ್ಷಗಳ ಚುನಾಯಿತ ಸದಸ್ಯರು, ಸಂಘ ಸಂಸ್ಥೆಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿತ್ರದುರ್ಗ ನಗರದಲ್ಲಿ ಪ್ರತ್ಯೇಕವಾಗಿ 100 ಹಾಸಿಗೆಗಳ ಕೋವಿಡ್‌ ಆಸ್ಪತ್ರೆ ಇದ್ದರೂ ಅಲ್ಲಿ ಕೇವಲ ಕೆಲವೇ ಜನ ಪಾಸಿಟಿವ್‌ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಶಾಲವಾದ ಜಾಗ, ಸೌಲಭ್ಯವಿದ್ದರೂ ಪಾಸಿಟಿವ್‌ ಹೊಂದಿದ 20 ಜನ ಕಾರ್ಮಿಕರನ್ನು ಇಲ್ಲಿನ ಹಾಸ್ಟೆಲ್‌ನಲ್ಲಿಡಲು ಆರೋಗ್ಯ ಇಲಾಖೆ ನಿರ್ಧರಿಸಿ ಇಲ್ಲಿಯೇ ಅವರಿಗೆ ಚಿಕಿತ್ಸೆ ಮುಂದುವರಿಸಿರುವುದು ಸಾರ್ವಜನಿಕರು ಭಯಭೀತರಾಗುವಂತೆ ಮಾಡಿದೆ.

ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್‌ ಪ್ರಕರಣ ಕೇವಲ ಬೆರಳಿಕೆಯಷ್ಟಿದ್ದು, ಚಳ್ಳಕೆರೆ ನಗರದಲ್ಲಿ ಕ್ವಾರಂಟೈನ್‌ ಆದ ಕೂಲಿ ಕಾರ್ಮಿಕರಲ್ಲಿ 20 ಜನರಿಗೆ ಪಾಸಿಟಿವ್‌ ವರದಿ ಬಂದಿದೆ. ಇದು ಜಿಲ್ಲೆಯ ಅತಿ ದೊಡ್ಡ ಪ್ರಕರಣವಾಗಿದೆ. ಚಳ್ಳಕೆರೆ ತಾಲೂಕಿನ ಸುತ್ತಮುತ್ತಲಿನ ನೂರಾರು ಹಳ್ಳಿಗಳ ಸಾವಿರಾರು ಜನರು ಇಲ್ಲಿಗೆ ಆಗಮಿಸುತ್ತಿದ್ದು, ಕೋವಿಡ್ ಪಾಸಿಟಿವ್‌ ವ್ಯಕ್ತಿಗಳನ್ನು ಸ್ಥಳಾಂತರಿಸುವ ಒತ್ತಡ ಎಲ್ಲೆಡೆಯಿಂದ ಕೇಳಿಬರುತ್ತಿದೆ.

ನಗರಸಭಾ ಸದಸ್ಯರಾದ ಆರ್‌. ರುದ್ರನಾಯಕ, ನಾಗರಾಜ, ಹೊಯ್ಸಳ ಗೋವಿಂದ, ಸಿ. ಶ್ರೀನಿವಾಸ್‌, ವೆಂಕಟೇಶ್‌, ರಮೇಶ್‌ ಗೌಡ, ವೈ. ಪ್ರಕಾಶ್‌, ವಿರೂಪಾಕ್ಷಿ, ಚಳ್ಳಕೆರೆಯಪ್ಪ, ಕೆ. ವೀರಭದ್ರಪ್ಪ ಮುಂತಾದವರು ಜಿಲ್ಲಾ ಆರೋಗ್ಯ ಇಲಾಖೆಯ ಕ್ರಮವನ್ನು ಖಂಡಿಸಿದ್ದಾರೆ. ಯುವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಎಚ್‌.ಎನ್‌. ಆದರ್ಶ, ನಗರದ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಆರ್‌. ಪ್ರಸನ್ನಕುಮಾರ್‌, ಕರವೇ ತಾಲೂಕು ಅಧ್ಯಕ್ಷ ಟಿ.ಜೆ. ವೆಂಕಟೇಶ್‌, ಪ್ರಗತಿಪರ ರೈತ ಆರ್‌.ಎ.ದಯಾನಂದಮೂರ್ತಿ, ಆರ್‌ .ನಾಗೇಶ್‌ ಕೂಡ ಆರೋಗ್ಯ ಇಲಾಖೆ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕರ ವಿರೋಧದ ಹಿನ್ನೆಲೆಯಲ್ಲಿ ಸಂಸದ ಎ. ನಾರಾಯಣಸ್ವಾಮಿ ಹಾಗೂ ಶಾಸಕ ಟಿ. ರಘುಮೂರ್ತಿಯವರು, ಕೋವಿಡ್ ಸೋಂಕಿತರನ್ನು ಇಲ್ಲಿಂದ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೆ ಬುಧವಾರ ರಾತ್ರಿವರೆಗೂ ಸ್ಥಳಾಂತರ ಕಾರ್ಯ ನಡೆದಿಲ್ಲ ಎಂದು ತಿಳಿದು ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next