Advertisement

ಸಿಂಹಾದ್ರಿ ಸ್ವಾಮಿಗಳ ಜನ್ಮ ಶತಮಾನೋತ್ಸವ ಆಚರಣೆ

01:34 PM Jun 15, 2020 | Naveen |

ಚಳ್ಳಕೆರೆ: ನರಹರಿ ನಗರದಲ್ಲಿರುವ ಶ್ರೀ ನರಹರಿ ಸೇವಾ ಪ್ರತಿಷ್ಠಾನ ಹಲವಾರು ವರ್ಷಗಳಿಂದ ಭಕ್ತರಿಗೆ ಉಪನ್ಯಾಸ ಹಾಗೂ ಆಧ್ಯಾತ್ಮಿಕ ಚಿಂತನೆಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ನಡೆಸುತ್ತ ಬಂದಿದೆ. ಇದಕ್ಕೆ ಪ್ರೇರಣಾ ಶಕ್ತಿಯಾಗಿ ನಮ್ಮೆಲ್ಲರನ್ನೂ ಆಶೀರ್ವದಿಸುತ್ತಿರುವ ಪೂಜ್ಯ ಸಿಂಹಾದ್ರಿ ಸ್ವಾಮಿಗಳ ಜನ್ಮಶತಮಾನೋತ್ಸವ ನಮ್ಮೆಲ್ಲರಿಗೂ ದಿಕ್ಸೂಚಿಯಾಗಲಿ ಎಂದು ಸದ್ಗುರು ಮೂರ್ತಿ ಸ್ವಾಮಿಗಳು ಹೇಳಿದರು.

Advertisement

ಇಲ್ಲಿನ ನರಹರಿ ಆಶ್ರಮದಲ್ಲಿ ಸಿಂಹಾದ್ರಿ ಸ್ವಾಮಿಗಳ ಜನ್ಮಶತಮಾನೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮುಂಬರುವ ದಿನಗಳಲ್ಲೂ ನರಹರಿ ಸೇವಾ ಪ್ರತಿಷ್ಠಾನದ ವತಿಯಿಂದ ಹೆಚ್ಚಿನ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು. ಪ್ರತಿಷ್ಠಾನದ ಕಾರ್ಯದರ್ಶಿ ವೈ. ರಾಜಾರಾಂ ಮಾತನಾಡಿ, ಕೋವಿಡ್‌ ಹಿನ್ನೆಲೆಯಲ್ಲಿ ಕೆಲವೇ ಭಕ್ತರ ಸಮ್ಮುಖದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡುವ ಮೂಲಕ ಕೋವಿಡ್ ನಿಯಂತ್ರಣಕ್ಕೆ ಸಹಕರಿಸಬೇಕೆಂದು ಮನವಿ ಮಾಡಿದರು.

ಸಾನ್ನಿಧ್ಯ ವಹಿಸಿದ್ದ ಶಾರದಾಶ್ರಮದ ಮಾತಾಜಿ ತ್ಯಾಗಮಯಿ ಆಶೀರ್ವಚನ ನೀಡಿ, ಎಲ್ಲಾ ಭಕ್ತರ ಸಮ್ಮುಖದಲ್ಲಿ ಸಿಂಹಾದ್ರಿ ಸ್ವಾಮೀಜಿಯವರ ಆಶೀರ್ವಾದದೊಂದಿಗೆ 3 ಕೋಟಿ ರೂ. ವೆಚ್ಚದ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿದೆ. ಈ ಭವನದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಿಂಹಾದ್ರಿಸ್ವಾಮಿಯವರ ಆದರ್ಶಗಳನ್ನು ಪಾಲಿಸುವ ಬಗ್ಗೆ ಮಾರ್ಗದರ್ಶನ ನೀಡಲಾಗುವುದು ಎಂದರು.

ಇದೇ ಸಂದರ್ಭದಲ್ಲಿ 15ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು. ಪ್ರತಿಷ್ಠಾನದ ಮುಖ್ಯಸ್ಥ ಬಿ.ಸಿ. ಸಂಜೀವಮೂರ್ತಿ, ಮಾಕಂ ಶ್ರೀನಿವಾಸಲು, ಚೆಕ್ಕೆಮಂಡಿ ಮಾರುತಿ, ಕಿರೀಟ್‌ ಶೆಟ್ಟಿ, ಎನ್‌. ಮಂಜುನಾಥ, ದೇವರಾಜ, ಪದ್ಮಾವತಿ ಜಯಣ್ಣ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next