ಚಳ್ಳಕೆರೆ: ಜಿಲ್ಲಾಧಿಕಾರಿಗಳ ಸೂಚನೆಯಂತೆ ನಗರಸಭೆ ಪೌರಾಯುಕ್ತರು ಮತ್ತು ಸಿಬ್ಬಂದಿ ಕಳೆದ ಹಲವು ತಿಂಗಳುಗಳಿಂದ ನಗರದ ಎಲ್ಲಾ ಅಂಗಡಿ, ಹೋಟೆಲ್, ಬೇಕರಿ, ಫುಟ್ಪಾತ್ ವ್ಯಾಪಾರಿಗಳು, ತರಕಾರಿ, ಹೂವಿನ ಅಂಗಡಿಗಳ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್ ಕವರ್‌ಗಳನ್ನು ವಶಪಡಿಸಿಕೊಂಡು ಎಚ್ಚರಿಕೆ ನೀಡುತ್ತಿದ್ದಾರೆ.
ನಗರದ ಕೆಲವು ತರಕಾರಿ ಮತ್ತು ಇನ್ನಿತರೆ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕವರ್‌ಗಳನ್ನು ಬಳಕೆ ಮಾಡಲಾಗುತ್ತಿದೆ. ಕೆಲವರು ದ್ವಿಚಕ್ರ ವಾಹನದಲ್ಲಿ ಆಗಮಿಸಿ ಪ್ಲಾಸ್ಟಿಕ್ ಕವರ್ ಸರಬರಾಜು ಮಾಡುತ್ತಿರುವ ಮಾಹಿತಿ ಪಡೆದ ಪೌರಾಯುಕ್ತ ಜೆ.ಟಿ. ಹನುಮಂತರಾಜು ಹಾಗೂ ಸಿಬ್ಬಂದಿ, ಗುರುವಾರ ಬೆಳಿಗ್ಗೆ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿರುವ ಹೋಟೆಲ್ನಲ್ಲಿ ಪರಿಶೀಲನೆ ನಡೆಸಿದರು. ತಪಾಸಣೆ ಮಾಡಿದಾಗ ವಿವಿಧ ಕಂಪನಿಗಳ ಪ್ಲಾಸ್ಟಿಕ್ ಕವರ್‌ಗಳು ಪತ್ತೆಯಾದವು.
ಪ್ಲಾಸ್ಟಿಕ್ ಕವರ್ ಮಾರಾಟ ಮಾಡುವವರ ಮೇಲೆ ದಾಳಿ ನಡೆಸಲಾಗುತ್ತಿದೆ. ಮತ್ತೂಮ್ಮೆ ಸಿಕ್ಕಿ ಬಿದ್ದಲ್ಲಿ ಮೊಕದ್ದಮೆ ದಾಖಲು ಮಾಡಿ ಹೋಟೆಲ್ ಪರವಾನಗಿ ರದ್ದುಪಡಿಸುವುದಾಗಿ ಪೌರಾಯುಕ್ತರು ಎಚ್ಚರಿಕೆ ನೀಡಿದರು. ಸುಮಾರು 30 ಸಾವಿರ ರೂ. ಮೌಲ್ಯದ ಪ್ಲಾಸ್ಟಿಕ್ ಕವರ್‌ಗಳನ್ನು ವಶಪಡಿಸಿಕೊಂಡು ದಂಡ ವಿಧಿಸಲಾಯಿತು.
ಇದೇ ಸಂದರ್ಭದಲ್ಲಿ ಬೆಂಗಳೂರು ರಸ್ತೆಯಲ್ಲಿರುವ ಮದ್ಯದ ಅಂಗಡಿ, ವಾಲ್ಮೀಕಿ ವೃತ್ತದ ಬಳಿ ಇರುವ ಹೋಟೆಲ್ಗಳ ಮೇಲೆಯೂ ದಾಳಿ ನಡೆಸಲಾಯಿತು. ಅಲ್ಲಿಯೂ ಪ್ಲಾಸ್ಟಿಕ್ ಕವರ್‌ಗಳನ್ನು ವಶಪಡಿಸಿಕೊಂಡು ತಾತ್ಕಾಲಿಕವಾಗಿ ಹೋಟೆಲ್ಗಳನ್ನು ಬಂದ್ ಮಾಡಿಸಿ ದಂಡ
ವಿಧಿಸಿ ಎಚ್ಚರಿಕೆ ನೀಡಲಾಯಿತು. ಅಂದಾಜು ಒಂದು ಲಕ್ಷ ರೂ. ಮೌಲ್ಯದ ಪ್ಲಾಸ್ಟಿಕ್ ಕವರ್‌ಗಳನ್ನು ವಶಪಡಿಸಿಕೊಂಡು ಸುಮಾರು 12 ಸಾವಿರ ರೂ. ದಂಡ ವಿಧಿಸಲಾಗಿದೆ. ಮುಂಬರುವ ದಿನಗಳಲ್ಲಿ ಮತ್ತೆ ಎಲ್ಲಿಯಾದರೂ ಪ್ಲಾಸ್ಟಿಕ್ ಕವರ್ ಪತ್ತೆಯಾದಲ್ಲಿ ಅಂತಹ ಅಂಗಡಿ, ಹೋಟೆಲ್ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಮಾತ್ರವಲ್ಲ, ಶಾಶ್ವತವಾಗಿ ಹೋಟೆಲ್ಗಳನ್ನು ಮುಚ್ಚಿಸಲಾಗುವುದು ಎಂದು ಪೌರಾಯುಕ್ತರು ತಿಳಿಸಿದ್ದಾರೆ.
ದಾಳಿ ವೇಳೆ ನಗರದಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಮಹಲಿಂಗಪ್ಪ, ತಿಪ್ಪೇಸ್ವಾಮಿ, ಮಜರ್ ಮತ್ತಿತರರು ಇದ್ದರು.