ಚಳ್ಳಕೆರೆ: ತಾಲೂಕಿನಾದ್ಯಂತ ಸೋಮವಾರ ಉತ್ತಮ ಮಳೆಯಾಗಿದೆ. ಹದ ಮಳೆಯಿಂದ ತಾಲೂಕಿನ ಹಲವಾರು ಕೆರೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಈಗಾಗಲೇ ಸುಮಾರು 630 ಮೀಲಿ ಮೀಟರ್‌ಗಿಂತ ಹೆಚ್ಚು ಮಳೆ ದಾಖಲಾಗಿದೆ. ಸೋಮವಾರ ರಾತ್ರಿ ನಾಯಕನಹಟ್ಟಿ 38.02, ತಳಕು
32.02, ಪರಶುರಾಂಪುರ 29.02, ದೇವರಮರಿಕುಂಟೆ 14.03, ಚಳ್ಳಕೆರೆ 10.02 ಸೇರಿದಂತೆ ಒಟ್ಟು 124.01 ಮಿಮೀ ಮಳೆಯಾಗಿದ್ದು, ಪ್ರಸ್ತುತ ವರ್ಷದ ಎಲ್ಲಾ ಮಳೆಗಳ ದಾಖಲೆಯನ್ನು ಮೀರಿಸಿದೆ ಎನ್ನಲಾಗಿದೆ.
ತಾಲೂಕಿನ ಐತಿಹಾಸಿಕ ಕೆರೆಯಾದ ರಾಣೆಕೆರೆಗೂ ಸಹ ನೀರು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದ್ದು, ಸುತ್ತಮುತ್ತಲಿನ ಗ್ರಾಮದ ಜನರು ಕೆರೆಗೆ ನೀರು ಬರುವ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಈಗಾಗಲೇ ಕೆರೆಯಲ್ಲಿ 8 ಅಡಿ ನೀರು ದಾಖಲಾಗಿದ್ದು, ಇನ್ನು 4 ಅಡಿ ನೀರು ಬಂದಲ್ಲಿ ಕೆರೆ ಕೋಡಿ ಬೀಳುವ ಸಾಧ್ಯತೆ ಇದೆ. ನಾಯಕನಹಟ್ಟಿ ಮತ್ತು ತಳಕು ಹೋಬಳಿಗಳಲ್ಲೂ ಉತ್ತಮ ಮಳೆಯಾಗಿದ್ದು, ಆ ಭಾಗದ ಅನೇಕ ರಸ್ತೆಗಳು ಜಲಾವೃತವಾಗಿವೆ. ಕಾಲುವೇಹಳ್ಳಿಯಿಂದ ಯಾದಲಗಟ್ಟೆಗೆ ತೆರಳುವ ಮಣ್ಣಿನ ರಸ್ತೆಯಲ್ಲಿ ನೀರು ತುಂಬಿ ಜನ ಮತ್ತು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿದೆ.
ತಾಲೂಕಿನ ಗೋಪನಹಳ್ಳಿ ಮತ್ತು ದೊಡ್ಡೇರಿ ಗ್ರಾಮದ ಹಳ್ಳದಲ್ಲಿ ನೀರು ಭೋರ್ಗರೆಯುತ್ತಿದ್ದು, ಮೀರಸಾಬಿಹಳ್ಳಿಯ ರಾಣಿಕೆರೆಯತ್ತ ನೀರು ಹರಿಯುತ್ತಿದೆ. ಹಲವಾರು ಚೆಕ್‌ಡ್ಯಾಂಗಳು ಕೂಡ ಮಳೆ ನೀರಿನಿಂದ ತುಂಬಿ ಹರಿಯುತ್ತಿವೆ. ಎಲ್ಲಾ ಕೆರೆ ಕಟ್ಟೆಗಳಿಗೆ ನೀರು ಬಂದ ಪರಿಣಾಮವಾಗಿ ಬತ್ತಿ ಹೋಗಿದ್ದ ಜಕೊಳವೆಬಾವಿಗಳಲ್ಲಿ ನೀರು ಕಾಣಿಸಿಕೊಂಡಿದೆ. ಜನರಿಗೆ ಕುಡಿಯುವ ನೀರಿನ ಸಮಸ್ಯೆ ನೀಗಿದಂತಾಗಿದೆ.
ತಾಲೂಕಿನ ವ್ಯಾಪ್ತಿಯಲ್ಲಿದ್ದ ಎಂಟು ಗೋಶಾಲೆಗಳಲ್ಲಿದ್ದ ಸಾವಿರಾರು ಜಾನುವಾರುಗಳು ಮಳೆ ಬಂದಿದ್ದರಿಂದ ತಮ್ಮ ಗ್ರಾಮಗಳಿಗೆ ಮರಳುತ್ತಿವೆ. ಒಟ್ಟಿನಲ್ಲಿ ತಡವಾಗಿಯಾದರೂ ಮಳೆಯಾಗುತ್ತಿರುವುದು ಜನರಲ್ಲಿ ಸಮಾಧಾನ ಮುಡಿಸಿದೆ.