ಚಳ್ಳಕೆರೆ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಡಳಿತ ವಿಶ್ವಮಾನ್ಯತೆ ಪಡೆದಿದ್ದು, ಮುಂಬರುವ ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ನೇತೃತ್ವದಲ್ಲಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಪರ್ವ ಪ್ರಾರಂಭವಾಗಲಿದೆ ಎಂದು ಲೋಕಸಭಾ ಸದಸ್ಯ ಎ. ನಾರಾಯಣಸ್ವಾಮಿ ಹೇಳಿದರು.
ಇಲ್ಲಿನ ಬಿಇಒ ಕಚೇರಿ ಆವರಣದಲ್ಲಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಘಟಕ ಹಮ್ಮಿಕೊಂಡಿದ್ದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಆ.5ರಂದು ರಾಷ್ಟ್ರದ 130 ಕೋಟಿ ಜನ ಸುದ್ದಿ ವಾಹಿನಿಗಳ ಮುಂದೆ ಕಾದು ಕುಳಿತಿದ್ದರು. ನರೇಂದ್ರ ಮೋದಿ ಮತ್ತು ಅಮಿತ್ ಶಾ ಲೋಕಸಭೆ ಕಲಾಪದಲ್ಲಿ ಏನಾಗುತ್ತದೆ ಎಂಬುದನ್ನು ಕಾತುರದಿಂದ ನೋಡುತ್ತಿದ್ದರು. ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ತಕ್ಷಣವೇ ಜಾರಿ ಬರುವಂತೆ ರದ್ದು ಮಾಡಲಾಗಿದೆಂದು ಹೇಳುತ್ತಿದ್ದಂತೆ ಇಡೀ ದೇಶವೇ ಮೆಚ್ಚಿಗೆ ವ್ಯಕ್ತಪಡಿಸಿತು ಎಂದರು.
ಭಾರತೀಯ ಜನತಾ ಪಕ್ಷ ಉತ್ತಮ ಕಾರ್ಯಕರ್ತರ ಪಡೆ ಹೊಂದಿದ್ದು, ದೇಶ ಭಕ್ತಿ ಮತ್ತು ದೇಶದ ಗೌರವ ರಕ್ಷಿಸುವ ನಿಟ್ಟಿನಲ್ಲಿ ಬಿಜೆಪಿ ಸದಾ ಕಾರ್ಯನಿರತವಾಗಿದೆ. ಈ ಹಿಂದೆ ಬಿಜೆಪಿಗೆ ಯಾರೂ ಮತ ನೀಡುವುದಿಲ್ಲವೆಂದು ಟೀಕಿಸುವ ವಿವಿಧ ಪಕ್ಷಗಳ ಧುರೀಣರು ಪಕ್ಷದ ಸಾಧನೆ ಕಂಡು ಭಯಭೀತರಾಗಿದ್ದಾರೆ. ರಾಷ್ಟ್ರದಲ್ಲಿ 10 ಕೋಟಿ ಸದಸ್ಯತ್ವ ಹೊಂದಿರುವ ಏಕೈಕ ಪಕ್ಷ ಬಿಜೆಪಿ. ಪಕ್ಷದ ಕಾರ್ಯಕರ್ತರು ಸದಸ್ಯತ್ವ ನೋಂದಣಿ ವಿಚಾರದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕು. ಸದಸ್ಯತ್ವ ಅಭಿಯಾನ ಪಕ್ಷದ ಸಂಘಟನೆ ಮತ್ತು ಶಕ್ತಿಯನ್ನು ಸದೃಢಗೊಳಿಸುವಲ್ಲಿ ಸಹಕಾರಿಯಾಗುತ್ತದೆ. ಈ ಕ್ಷೇತ್ರದ ಲೋಕಸಭಾ ಸದಸ್ಯನಾಗಿ ಆಯ್ಕೆಯಾಗಿದ್ದರೂ ಈ ಭಾಗದ ಜನರ ಸಮಸ್ಯೆಗಳಿಗೆ ಸಾಮಾಜಿಕ ಕಾರ್ಯಕರ್ತನಾಗಿ ಸ್ಪಂದಿಸುವೆ ಎಂದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಎಸ್. ನವೀನ್ ಮಾತನಾಡಿ, ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 50 ಸಾವಿರ ಸದಸ್ಯರನ್ನು ನೋಂದಾಯಿಸುವ ಗುರಿ ಹೊಂದಲಾಗಿದೆ. ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಜನಸಾಮಾನ್ಯರು ಪಕ್ಷದ ಸದಸ್ಯತ್ವ ಸ್ವೀಕರಿಸಲು ಸಿದ್ದರಾಗಿದ್ದಾರೆ. ಕಾರ್ಯಕರ್ತರು ಮನೆ-ಮನೆಗೂ ಭೇಟಿ ನೀಡಿ ಈ ಗುರಿ ಸಾಧಿಸಲು ಸಹಕಾರ ನೀಡಬೇಕೆಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪಾಲಯ್ಯ, ಹಿರಿಯ ಮುಖಂಡ ಎಂ.ಎಸ್. ಜಯರಾಮ್, ಮಾಜಿ ಮಂಡಲಾಧ್ಯಕ್ಷ ಡಿ.ಸೋಮಶೇಖರ ಮಂಡಿಮಠ, ಸಿ.ಬಿ. ಆದಿಭಾಸ್ಕರಶೆಟ್ಟಿ, ಬಿ.ವಿ. ಸಿರಿಯಣ್ಣ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಟಿ.ಮಂಜುನಾಥ ಮಾತನಾಡಿದರು. ಯುವ ಮೋರ್ಚಾ ಅಧ್ಯಕ್ಷ ಆರ್. ನಾಗೇಶ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಉಪಾಧ್ಯಕ್ಷ ಬಾಳೆಮಂಡಿ ರಾಮದಾಸ್, ಶಿವಪುತ್ರಪ್ಪ, ನಗರಸಭಾ ಸದಸ್ಯರಾದ ಎಸ್.ಜಯಣ್ಣ, ವೆಂಕಟೇಶ್, ಪಾಲಮ್ಮ, ಕೃಷ್ಣಮೂರ್ತಿ, ತಾಪಂ ಸದಸ್ಯ ಸಣ್ಣಸೂರಯ್ಯ, ಮುಖಂಡರಾದ ಸೂರನಹಳ್ಳಿ ಶ್ರೀನಿವಾಸ್, ಡಿ.ಎಂ. ತಿಪೆಧೀಸ್ವಾಮಿ, ವಿಜಯೇಂದ್ರ, ಜಗದಾಂಭ, ಇಂಧುಮತಿ ಇದ್ದರು.